ಮಂಗಳೂರು, ಜ.28: ನಗರದ ಪುರಭವನದ ನವೀಕರಣ ಕಾಮಗಾರಿ ಕೈಗೆತ್ತಿಕೊಂಡಿರುವ ನಿರ್ಮಿತಿ ಕೇಂದ್ರ ಇದೀಗ ತಾಂತ್ರಿಕವಾಗಿ ಕಾಮಗಾರಿ ನಡೆಸಲು ಸಾಧ್ಯವಿಲ್ಲ ಎಂದು ಹಿಂದೆ ಸರಿದಿರುವ ಹಿನ್ನೆಲೆಯಲ್ಲಿ ಮನಪಾದ ಯಾವುದೇ ಕಾಮಗಾರಿಗಳನ್ನು ಇನ್ನು ಮುಂದೆ ನಿರ್ಮಿತಿ ಕೇಂದ್ರಕ್ಕೆ ವಹಿಸದಿರಲು ನಿರ್ಣಯಿಸಿರುವ ಮನಪಾ, ನಿರ್ಮಿತಿ ಕೇಂದ್ರದ ಮಾನ್ಯತೆ ರದ್ದುಪಡಿಸಬೇಕು ಎಂದು ಸರಕಾರಕ್ಕೆ ಪತ್ರ ಬರೆಯಲು ಮುಂದಾಗಿದೆ.
ಮೇಯರ್ ಮಹಾಬಲ ಮಾರ್ಲ ಅಧ್ಯಕ್ಷತೆಯಲ್ಲಿ ಇಂದು ನಡೆದ ಮನಪಾ ಸಾಮಾನ್ಯ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಯಿತು. ಆರಂಭದಲ್ಲಿ ವಿಷಯ ಪ್ರಸ್ತಾಪಿಸಿದ ವಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ, ಪುರಭವನದ ನವೀಕರಣ ಕಾಮಗಾರಿ ಮುಗಿಸಲು ಗುತ್ತಿಗೆದಾರ ಸಂಸ್ಥೆಯಾದ ನಿರ್ಮಿತಿ ಕೇಂದ್ರಕ್ಕೆ ನೀಡಿದ ಅವಧಿ ಮುಗಿದಿದ್ದರೂ ಕಾಮಗಾರಿ ಅರ್ಧದಲ್ಲೇ ಸ್ಥಗಿತಗೊಳ್ಳಲು ರಾಜಕೀಯ ಕಾರಣವೇ? ಎಂದು ಪ್ರಶ್ನಿಸಿದರು. ಮಾತ್ರವಲ್ಲದೆ, ಕಾಮಗಾರಿ ಯಾವಾಗ ಪೂರ್ಣಗೊಳ್ಳುತ್ತದೆ ಎಂಬ ಸ್ಪಷ್ಟವಾದ ಮಾಹಿತಿಯನ್ನು ಸಭೆಯಲ್ಲಿ ನೀಡಬೇಕೆಂದು ಒತ್ತಾಯಿಸಿದರು.
ಇದಕ್ಕೆ ಮನಪಾದ ಸದಸ್ಯರನೇಕರು ಬೆಂಬಲ ಸೂಚಿಸಿದರು. ಈ ಸಂದರ್ಭ ಪ್ರತಿಕ್ರಿಯಿಸಿದ ನೂತನ ಆಯುಕ್ತೆ ಹೆಫ್ಸಿಬಾ ರಾಣಿ ಕೊರ್ಲಪಾಟಿ, ತಾನು ಅಧಿಕಾರ ಸ್ವೀಕರಿಸಿದ ಒಂದು ವಾರದಲ್ಲೇ ಪುರಭವನಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದ್ದೇನೆ. ಮುಂದಿನ 15 ದಿನಗಳಲ್ಲಿ ಕೆಲಸ ಆರಂಭಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಆದರೆ ಈ ಉತ್ತರದಿಂದ ತೃಪ್ತರಾಗದ ಸದಸ್ಯರು ಮತ್ತೆ 15 ದಿನಗಳ ಕಾಲಾವಕಾಶ ಯಾಕೆ? ಕಾಮಗಾರಿ ಯಾವಾಗ ಪೂರ್ಣಗೊಳ್ಳುತ್ತದೆ ಎಂಬುದನ್ನು ಇಂದೇ ತಿಳಿಸಿ ಎಂದು ಮೇಯರ್‌ಗೆ ಒತ್ತಡ ಹೇರಿದರು.
ಇದಕ್ಕುತ್ತರಿಸುತ್ತಾ ಮೇಯರ್ ‘‘ನನ್ನ ಅವಧಿಯಲ್ಲಿ ಕಾಮಗಾರಿ ಮುಗಿಯುವುದಿಲ್ಲ. ಹಾಗಾಗಿ ದಿನ ನಿಗದಿಪಡಿಸಲು ಸಾಧ್ಯವಿಲ್ಲ’’ ಎಂದರು. ಮೇಯರ್ ಹತಾಶೆಯ ಮಾತುಗಳನ್ನಾಡುತ್ತಿರುವುದು ನೋಡಿದರೆ ಇದರಲ್ಲಿ ಯಾವುದೋ ರಾಜಕೀಯ ನಡೆದಿರುವುದು ಸ್ಪಷ್ಟವಾಗುತ್ತಿದೆ. ಪುರಭವನದ ವಿಷಯದಲ್ಲಿ ರಾಜಕೀಯ ಬೇಡ ಎಂದು ಪ್ರತಿಪಕ್ಷದ ನಾಯಕರು ಆಗ್ರಹಿಸಿದಾಗ, ಸದಸ್ಯರೆಲ್ಲರಿಗೂ ಇದರ ವಿರುದ್ಧ ಧ್ವನಿಯೆತ್ತುವ ಹಕ್ಕಿದೆ. ಯಾರೊಬ್ಬರು ಆ ಸಂಸ್ಥೆಯ ಮಾನ್ಯತೆ ರದ್ದುಪಡಿಸುವ ಬಗ್ಗೆ ಧ್ವನಿಯೇ ಎತ್ತಿಲ್ಲ ಎಂದು ಮೇಯರ್ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಪ್ರತಿಪಕ್ಷ ಸದಸ್ಯರು ನಾವೆಲ್ಲಾ ಅದಕ್ಕೆ ಸಿದ್ಧರಿದ್ದೇವೆ. ಮಾನ್ಯತೆ ರದ್ದುಪಡಿಸಲು ನಿರ್ಣಯ ಕೈಗೊಳ್ಳುವ ಎಂದು ಒತ್ತಾಯಿಸಿದಾಗ, ಆಡಳಿತ ಪಕ್ಷದ ಸದಸ್ಯರು ದನಿಗೂಡಿಸಿದರು. ಈ ಸಂದರ್ಭ ಮೇಯರ್ ಮಾತನಾಡಿ, ಒಂದು ಕೋ. ರೂ. ವೆಚ್ಚದಲ್ಲಿ ನಡೆಯುತ್ತಿರುವ ಪುರಭವನದ ಕಾಮಗಾರಿಯನ್ನು ತಾಂತ್ರಿಕವಾಗಿ ತಮ್ಮಿಂದ ಮುಗಿಸಲು ಆಗುವುದಿಲ್ಲ ಎಂದು ಹೇಳಿಕೊಂಡಿರುವ ನಿರ್ಮಿತಿ ಕೇಂದ್ರಕ್ಕೆ ಮನಪಾ ವ್ಯಾಪ್ತಿಯಲ್ಲಿ ಬೇರೆ 20 ಕೋ. ರೂ.ಗಳ ಕಾಮಗಾರಿ ನಡೆಸಲು ಸಾಧ್ಯ ಆಗುವುದಾದರೆ ಅದರ ಮಾನ್ಯತೆ ರದ್ದು ಮಾಡಬೇಕು ಎಂದು ಸರಕಾರವನ್ನು ಕೋರಲು ಪತ್ರ ಬರೆಯಲು ನಿರ್ಣಯಕ್ಕೆ ಮೇಯರ್ ಸೂಚಿಸಿದರು.
ಘನತ್ಯಾಜ್ಯ ಸಂಗ್ರಹ- ಸಾಗಾಟ ಬಗ್ಗೆ ಜನರಿಗೆ ಮಾಹಿತಿ ಇಲ್ಲ:
ಆ್ಯಂಟೋನಿ ವೇಸ್ಟ್ ಕಂಪೆನಿ ಪ್ರೈ.ಲಿ. ವತಿಯಿಂದ ನಿರ್ವಹಿಸಲಾಗುವ ಘನತ್ಯಾಜ್ಯ ಸಂಗ್ರಹ ಮತ್ತು ಸಾಗಾಟದ ವಿನೂತನ ಮಾದರಿಯ ಬಗ್ಗೆ ಜನಸಾಮಾನ್ಯರಿಗೆ ಮಾಹಿತಿಯೇ ಇಲ್ಲ ಎಂದು ಸದಸ್ಯರಾದ ಅಬ್ದುಲ್ ಅಝೀಝ್ ಕುದ್ರೋಳಿ, ವಿಜಯ ಕುಮಾರ್ ಶೆಟ್ಟಿ, ಅಯಾಝ್ ಕೃಷ್ಣಾಪುರ, ಸುಧೀರ್ ಶೆಟ್ಟಿ ಮೊದಲಾದವರು ದೂರಿದರು.
ಸಂಸ್ಥೆಯವರು ಹಂತ ಹಂತವಾಗಿ ಕಸ ಸಂಗ್ರಹ ಕಾರ್ಯವನ್ನು ಮಾಡುವುದಾಗಿ ತಿಳಿಸಿದ್ದಾರೆ. ಹಾಗಾದರೆ, ಈಗಿರುವ ವ್ಯವಸ್ಥೆಯಲ್ಲಿ ಆಗುತ್ತಿರುವ ಕಸ ವಿಲೇವಾರಿಯೂ ಆಗದೆ ಸಾಕಷ್ಟು ತೊಂದರೆ ಆಗಲಿದೆ. ಸಂಸ್ಥೆಗೆ ಈಗಾಗಲೇ ಸೂಕ್ತ ಅವಧಿ ನಿಗದಿಪಡಿಸಬೇಕು ಎಂದು ವಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ ಸಭೆಯಲ್ಲಿ ಆಗ್ರಹಿಸಿದರು.
ಫೆ. 1ರಿಂದ ಸಂಸ್ಥೆಯು ಕಸ ಸಂಗ್ರಹ ಮತ್ತ ಸಾಗಾಟ ವ್ಯವಸ್ಥೆಯನ್ನು ಆರಂಭಿಸಲಿದೆ. ಹಾಗಿದ್ದರೂ ಇಂದಿನಿಂದಲೇ ಅದರ ಪ್ರಾಯೋಗಿಕ ಕಾರ್ಯವನ್ನು ಆರಂಭಿಸಿದೆ. ಈ ಮೂಲಕವೇ ಜನರಿಗೆ ಮಾಹಿತಿ ದೊರೆಯಲಿದೆ. ಮಾತ್ರವಲ್ಲದೆ ವೆಬ್‌ಸೈಟ್ ಮೂಲಕವೂ ಮಾಹಿತಿ ಒದಗಿಸಲಾಗುವುದು ಎಂದು ಮನಪಾ ಆಯುಕ್ತೆ ಹೆಫ್ಸಿಬಾ ರಾಣಿ ಕೊರ್ಲಪಾಟಿ ಉತ್ತರಿಸಿದರು.
ಸಭೆಯಲ್ಲಿ ಉಪ ಮೇಯರ್ ಕವಿತಾ ವಾಸು, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಶೋಕ್ ಕುಮಾರ್, ಅಶೋಕ್ ಡಿ.ಕೆ., ಪುರುಷೋತ್ತಮ ಚಿತ್ರಾಪುರ, ಜೆಸಿಂತಾ ವಿಜಯ ಆಲ್ಪ್ರೆಡ್ ಉಪಸ್ಥಿತರಿದ್ದರು.