ಕನ್ನಡ ವಾರ್ತೆಗಳು

ಹುಡುಗಿಯ ಮೂಲಕ ಐವರು ಖದೀಮರಿಂದ ಬ್ಲ್ಯಾಕ್‌ಮೇಲ್ : ಹತ್ತು ಲಕ್ಷ ಡಿಮ್ಯಾಂಡ್ : ಪೊಲೀಸ್ ದೂರಿನಿಂದ ಬಯಲಾದ ಸತ್ಯ, ಇಬ್ಬರ ಬಂಧನ

Pinterest LinkedIn Tumblr

ಕುಂದಾಪುರ: ಹಳೆ ದ್ವೇಷವನ್ನೇ ಬಳಸಿಕೊಂಡ ಯುವಕನ ತಂಡವೊಂದು ಯುವತಿಯನ್ನು ಪುಸಲಾಯಿಸಿ ಯುವತಿಯೊಬ್ಬಳಿಗೆ ಪುಸಲಾಯಿಸಿ ಮಿಸ್ ಕಾಲ್ ಕೊಟ್ಟು ಫ್ರೆಂಡ್‌ಶಿಪ್ ಮಾಡುವ ನೆಪದಲ್ಲಿ ನಿರ್ಜನ ಪ್ರದೇಶಕ್ಕೆ ಯುವಕನೊಬ್ಬನನ್ನು ಕರೆದೊಯ್ದು ಬಲಾತ್ಕಾರವಾಗಿ ಮುತ್ತುಕೊಡಿಸಿ ಅದನ್ನು ವೀಡಿಯೋ ಮಾಡಿ ಹತ್ತು ಲಕ್ಷ ರೂಪಾಯಿ ಬೇಡಿಕೆಯಿಟ್ಟು ಬ್ಲ್ಯಾಕ್‌ಮೇಲ್ ಮಾಡಿದ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಬೈಂದೂರು ಸಮೀಪವಾಸಿ ಕಾಲ್ತೋಡಿನ ಯುವಕನೇ ಬ್ಲ್ಯಾಕ್‌ಮೇಲ್‌ಗೊಳಗಾದಾತನಾದರೆ ಕೆಲವು ವರ್ಷಗಳ ಹಿಂದೆ ರಾಮದುರ್ಗಾದಲ್ಲಿ ಹೋಟೆಲ್ಲೊಂದರಲ್ಲಿ ಜೊತೆಯಾಗಿದ್ದ ಶಶಾಂಕ್ ಎಂಬಾತನ ತಂಡವೇ ಬ್ಲ್ಯಾಕ್‌ಮೇಲ್ ನಡೆಸಿದ ಆರೋಪಿಗಳು.

Blckmail_Accused_Girish

(ಪ್ರಮುಖ ಆರೋಪಿ ಗಿರೀಶ್)

ಬೈಂದೂರಿನ ಯುವಕ ಅಂಪಾರಿನಲ್ಲಿ ಸಣ್ಣದೊಂದು ಗೇರು ಬೀಜ ಕಾರ್ಖಾನೆ ನಡೆಸುತ್ತಿದ್ದಾನೆ. ಕೆಲವು ವರ್ಷಗಳ ಹಿಂದೆ ರಾಮದುರ್ಗಾದ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಈ ಯುವಕನೊಂದಿಗೆ ಪ್ರಮುಖ ಆರೋಪಿ ಶಶಾಂಕನೂ ಕೆಲಸ ಮಾಡಿಕೊಂಡಿದ್ದ. ಅಲ್ಲಿಯೂ ಈ ಶಶಾಂಕ ಎಂಬಾತ ದುಷ್ಕೃತ್ಯಗಳಲ್ಲಿ ಭಾಗವಹಿಸಿದ್ದು, ಇವರಿಬ್ಬರ ನಡುವೆ ಹೊಡೆದಾಟವಾಗಿತ್ತು ಎಂದು ತಿಳಿದು ಬಂದಿದೆ.

ಇದೇ ದ್ವೇಷವನ್ನು ಇಟ್ಟುಕೊಂಡಿದ್ದ ಶಶಾಂಕ ತನ್ನ ತಂಡದೊಂದಿಗೆ ಸೇರಿ ವಸೂಲಿಗಿಳಿಯುವ ತಂತ್ರ ಹೂಡುತ್ತಾನೆ. ಬಸ್ರೂರಿನ ಯುವತಿಯೊಬ್ಬಳ ಪರಿಚಯ ಮಾಡಿಕೊಂಡ ಶಶಾಂಕ ಆಕೆಯನ್ನು ಪುಸಲಾಯಿಸಿ ಬೈಂದೂರು ಮೂಲದ ಯುವಕನಿಗೆ ಮಿಸ್ ಕಾಲ್ ಕೊಡಿಸುತ್ತಾನೆ. ಆದರೆ ಈಕೆಯ ಮಿಸ್‌ಕಾಲ್‌ಗೆ ಆತ ಸ್ಪಂದನೆ ನೀಡದಿದ್ದಾಗ ಮೆಸೇಜ್ ಕಳುಹಿಸಲಾರಂಭಿಸುತ್ತಾಳೆ ಆ ಯುವತಿ. ಸಂದೇಶಕ್ಕೆ ಮರುಸಂದೇಶಗಳು ರವಾನೆಯಾಗುತ್ತಲೇ ಮುಖ ಪರಿಚಯ ಮಾಡಿಕೊಳ್ಳುವ ಆಸೆ ವ್ಯಕ್ತಪಡಿಸುತ್ತಾಳೆ ಯುವತಿ! ಅದಕ್ಕೆ ಒಪ್ಪಿಕೊಂಡ ಯುವಕನ್ನು ಯುವತಿ ತಾನು ಗುರುತಿಸಿದ ಸ್ಥಳಕ್ಕೆ ಜ.೨೧ರಂದು ಬರ ಹೇಳುತ್ತಾಳೆ. ಯುವತಿ ಮಾತನ್ನು ನಂಬಿದ ಯುವಕ ಆಕೆ ಬರಹೇಳಿದ ಸ್ಥಳವಾದ ಕುಂದಾಪುರದ ಬಿ.ಹೆಚ್. ರಸ್ತೆಯ ಹೇರಿಕೆರೆಗೆ ಒಬ್ಬನೇ ಹೋಗುತ್ತಾನೆ!

ವಕ್ಕರಿಸಿದ ಖದೀಮರು: ಹೀಗೇ ಹೇರಿಕೆರೆಗೆ ಹೋದಾಗ ಅಲ್ಲಿ ಯುವತಿಯೊಬ್ಬಳು ಆತನಿಗಾಗಿ ಕಾಯುತ್ತಿರುತ್ತಾಳೆ. ಹುಡುಗಿ ಕರೆದಳೆಂದು ಹೋದ ಯುವಕನಿಗೆ ಅಲ್ಲಿ ಈತನನ್ನು ದೋಚುವ ಸಲುವಾಗಿ ಪೂರ್ವನಿಗದಿತವಾಗಿ ಮಾಡಿಕೊಂಡಿದ್ದ ಉಪಾಯ ತಿಳಿದಿರಲಿಲ್ಲ. ವಕ್ಕರಿಸಿಕೊಂಡವರೇ ಹಿಂದಿನ ದ್ವೇಷಿ ಶಶಾಂಕ್ ಮತ್ತು ತಂಡದಲ್ಲಿದ್ದ ಗಿರೀಶ್, ರಮೇಶ್, ಸಂದೀಪ್ ಹಾಗೂ ಗುರುರಾಜ್ ಎಂಬುವರು. ಹೇರಿಕೆರೆ ಸಮೀಪ ಇಬ್ಬರು ಮುಖಾಮುಖಿಯಾದಾಗಲೇ ಐವರು ಏಕಾ‌ಏಕಿ ಇವರತ್ತ ದೌಡಾಯಿಸಿ ಬಂದು ಇವರಿಬ್ಬರನ್ನು ಅಡ್ಡಗಟ್ಟುತ್ತಾರೆ.

ಹತ್ತು ಲಕ್ಷ ಡಿಮ್ಯಾಂಡ್ : ನಂತರ ಆಕೆಯನ್ನು ಬಲಾತ್ಕಾರವಾಗಿ ಮುತ್ತಿಕ್ಕುವಂತೆ ಬಲವಂತ ಮಾಡುತ್ತಾರೆ. ಅನಿವಾರ್ಯವಾಗಿ ಸಿಕ್ಕಿಹಾಕಿಕೊಂಡ ಯುವಕ ಮುತ್ತುಕೊಡುತ್ತಾನೆ. ಈ ಸಂದರ್ಭ ಅವರ ಪೈಕಿ ಓರ್ವ ಆ ಯುವತಿಯನ್ನು ಸಹೋದರಿಯೆಂದು ಪರಿಚಯಿಸಿಕೊಂಡು ಬೇಕಾಬಿಟ್ಟಿ ತನ್ನ ಮೊಬೈಲ್ ಕ್ಯಾಮೇರಾದಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾನೆ. ಬಳಿಕ ಅದನ್ನು ಸಾಮಾಜಿಕ ಜಾಲತಾಣಕ್ಕೆ ಅಪ್‌ಲೋಡ್ ಮಾಡುವುದಾಗಿಯೂ ಬೆದರಿಕೆ ಹಾಕುತ್ತಾರೆ. ಯುವಕನಲ್ಲಿದ್ದ ಪರ್ಸ್, ಚೆಕ್‌ಬುಕ್, ಬೈಕಿನ ಡಾಕ್ಯುಮೆಂಟ್ಸ್‌ಗಳನ್ನು ಕಿತ್ತುಕೊಂಡು ಹತ್ತು ಲಕ್ಷ ರೂಪಾಯಿ ನೀಡಿದರೆ ಮಾತ್ರ ಬಿಟ್ಟುಬಿಡುವುದಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ಆದರೆ ಅದಕ್ಕೆ ಒಪ್ಪದ ಆತ ಅಲ್ಲಿನಿಂದ ಬಿಡಿಸಿಕೊಂಡು ಹೋಗಿದ್ದಾನೆ.

ಮಾರನೆಯ ದಿನ ಮತ್ತೆ ಕುಂದಾಪುರದ ಬಳಿ ಈತನನ್ನು ಇದೇ ಯುವಕರ ತಂಡ ಪುನಃ ಅಡ್ಡಗಟ್ಟಿ ಹಣಕ್ಕಾಗಿ ಪೀಡಿಸಿದ್ದಾರೆ. ಕೊನೆಗೆ ದಾರಿ ಕಾಣದ ಈ ಯುವಕ ಕುಂದಾಪುರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ದೂರನ್ನು ದಾಖಲಿಸಿದ್ದಾನೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆಗಿಳಿದಿದ್ದಾರೆ, ಈಗಾಗಲೇ ಇಬ್ಬರನ್ನು ಬಂಧಿಸಿದ್ದಾರೆ. ಉಳಿದ ಮೂವರು ತಲೆಮರೆಸಿಕೊಂಡಿದ್ದಾರೆಂಬ ಮಾಹಿತಿಯೂ ಇದ್ದು ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Write A Comment