ಮಂಗಳೂರು, ಜ.16 : ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಗುರುವಾರ ನಗರದ ನೆಹರೂ ಮೈದಾನದಲ್ಲಿ ಸುನ್ನಿ ಸಮಾವೇಶ ಜರಗಿತು. ಅದಕ್ಕೂ ಮೊದಲು ಜ್ಯೋತಿ ವೃತ್ತದಿಂದ ಮೈದಾನದವರೆಗೆ ಇಲಲ್ ಹಬೀಬ್ ಮೀಲಾದ್ ರ್ಯಾಲಿ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಜ್ಯ ವಕ್ಫ್ ಮಂಡಳಿ ಸದಸ್ಯ ಎನ್‌ಕೆಎಂ ಶಾಫಿ ಸಅದಿ ನಂದಾವರ, ಕರ್ನಾಟಕದಲ್ಲಿ ಧಾರ್ಮಿಕ ಕ್ರಾಂತಿಯನ್ನುಂಟು ಮಾಡಿದ ಎಸ್ಸೆಸ್ಸೆಫ್ ಪ್ರವಾದಿ ಸಂದೇಶ ಸಾರುವ ಉದ್ದೇಶವನ್ನು ಹೊಂದಿದೆಯೇ ವಿನ: ಯಾರನ್ನೂ ನಿಂದಿಸುವ ಕೆಲಸಕ್ಕೆ ಕೈ ಹಾಕಿಲ್ಲ. ಆಯಾ ಕ್ಷೇತ್ರದ ಪರಿಣತರು ಅವರವರ ಕೆಲಸ ಮಾಡಬೇಕು ಎಂಬುದು ಎಸ್ಸೆಸ್ಸೆಫ್‌ನ ಆಶಯವಾಗಿದ್ದು, ಇಂತಹ ಬಲಿಷ್ಠ ಸಂಘಟನೆಯನ್ನು ಹತ್ತಿಕ್ಕಲು ಯಾರಿಗೂ ಸಾಧ್ಯವಿಲ್ಲ.
ಎಸೆಸ್ಸೆಫ್ ಯಾವತ್ತೂ ರಾಜಕೀಯ ಹಿತಾಸಕ್ತಿಯನ್ನು ಹೊಂದಿಲ್ಲ. ಎಲ್ಲೆಡೆ ಕೋಮುವಾದ, ಭಯೋತ್ಪಾದನೆ ಹೆಚ್ಚುತ್ತಿದೆ. ಮುಸ್ಲಿಮರನ್ನು ಸಂಶಯ ದೃಷ್ಟಿಯಿಂದ ಕಾಣಲಾಗುತ್ತದೆ. ಬಡತನ, ಶಿಕ್ಷಣ, ಆರೋಗ್ಯ ಈಗಲೂ ಸಮಸ್ಯೆಯಾಗಿ ಪರಿಣಮಿಸಿದೆ. ಸಮಾಜದ ಬಗ್ಗೆ ಕಾಳಜಿ ಇಲ್ಲದವರ ಸವಾಲುಗಳಿಗೆ ಪ್ರತಿಕ್ರಿಯಿಸುವ ಬದಲು ಇಂತಹ ಸಮಸ್ಯೆಗಳ ನಿವಾರಣೆಗೆ ಪ್ರಯತ್ನಿಸಲಾಗುತ್ತದೆ ಎಂದು ಹೇಳಿದರು.
ಇಲಲ್ ಹಬೀಬ್ ಹುಬ್ಬುರ್ರ ಸೂಲ್ ಪ್ರಭಾಷಣಗೈದ ಕರ್ನಾಟಕ ರಾಜ್ಯ ಜಂ ಇಯ್ಯತುಲ್ ಉಲಮಾ ಅಧ್ಯಕ್ಷ ಹಾಗೂ ಖಾಝಿ ಶೈಖುನಾ ಪಿ.ಎಂ.ಇಬ್ರಾಹೀಂ ಮುಸ್ಲಿಯಾರ್ ಬೇಕಲ್, ಮುಹಮ್ಮದ್ (ಸಅ) ತನ್ನ ಬದುಕಿನುದ್ದಕ್ಕೂ ಮನುಷ್ಯತ್ವಕ್ಕೆ ಹೆಚ್ಚು ಒತ್ತು ಕೊಟ್ಟಿದ್ದರು. ಸಮಾನತೆಯನ್ನು ಕಂಡಿದ್ದರು. ಅಜ್ಞಾನವನ್ನು ಹೋಗಲಾಡಿಸಲು ಪ್ರಯತ್ನಿಸಿದ್ದರು. ಅಂತಹ ಪ್ರವಾದಿವರ್ಯರನ್ನು ಪ್ರೀತಿಸುವುದು ಅರ್ಥಪೂರ್ಣ ಎಂದು ಹೇಳಿದರು.
ಎಸ್‌ವೈಎಸ್ ರಾಜ್ಯಾಧ್ಯಕ್ಷ ಕೆ.ಪಿ.ಹುಸೈನ್ ಸಅದಿ ಕೆ.ಸಿ. ರೋಡ್ ಮಾತನಾಡಿದರು. ಎಸ್ಸೆಸ್ಸೆಫ್ ದ.ಕ.ಜಿಲ್ಲಾಧ್ಯಕ್ಷ ಇಸ್ಮಾಯೀಲ್ ಸಅದಿ ಅಲ್ ಅಫ್‌ಳಲಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಿಟಿಎಂ ತಂಙಳ್ ದುಆ ಮಾಡಿದರು. ಮುಖ್ಯ ಅತಿಥಿಗಳಾಗಿ ಶಾಸಕ ಬಿ.ಎ. ಮೊಯ್ದಿನ್ ಬಾವ, ಎಸ್‌ವೈಎಸ್ ಜಿಲ್ಲಾಧ್ಯಕ್ಷ ಉಸ್ಮಾನ್ ಸಅದಿ ಪಟ್ಟೋರಿ, ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ.ಸಿದ್ದೀಕ್ ಮೋಂಟುಗೋಳಿ, ಕೆಎಂಜೆಸಿ ಜಿಲ್ಲಾಧ್ಯಕ್ಷ ಹಾಜಿ ಹೈದರ್ ಪರ್ತಿಪ್ಪಾಡಿ, ಜಿ.ಪಂ.ಸದಸ್ಯ ಎನ್.ಎಸ್.ಕರೀಂ, ‘ಇಶಾರ’ ಪಾಕ್ಷಿಕ ಸಂಪಾದಕ ಅಬ್ದುಲ್ ಹಮೀದ್ ಬಜ್ಪೆ, ಯಅ್ಕೂಬ್ ಯೂಸುಫ್ ಹೊಸನಗರ, ಕೊಡಗು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್ ಮಡಿಕೇರಿ, ಎಸ್ಸೆಸ್ಸೆಫ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಪ್ರಿಂಟೆಕ್, ಅಶ್ರಫ್ ಸಅದಿ ಮಲ್ಲೂರು, ಬ್ಯಾರಿ ಸಾಹಿತ್ಯ ಅಕಾಡಮಿಯ ರಿಜಿಸ್ಟ್ರಾರ್ ಉಮರಬ್ಬ, ಹನೀಫ್ ಹಾಜಿ ಬಜ್ಪೆ, ಮೊಯ್ದಿನ್ ಬಾವ ಮುಕ್ಕ, ಅಬ್ದುಲ್ ಖಾದರ್ ಬಜ್ಪೆ, ರಶೀದ್ ಹಾಜಿ ಬೆಳ್ಳಾರೆ, ಸ್ವಾದಿಕ್ ಮಾಸ್ಟರ್, ಬಶೀರ್ ಹಾಜಿ, ಕೆ.ಎಚ್.ಇಸ್ಮಾಯೀಲ್, ಬಶೀರ್ ಮದನಿ ಕೂಳೂರು, ಸಿರಾಜುದ್ದೀನ್ ಸಖಾಫಿ, ನ್ಯಾಯವಾದಿ ಇಲ್ಯಾಸ್ ನಾವುಂದ ಮತ್ತಿತರರು ಉಪಸ್ಥಿತರಿದ್ದರು.
ಮೀಲಾದ್ ಸ್ವಾಗತ ಸಮಿತಿ ಯ ಅಧ್ಯಕ್ಷ ಹಾಫಿಳ್ ಯಾಕೂಬ್ ಸಅದಿ ನಾವೂರು ಸ್ವಾಗತಿಸಿ ಪ್ರಾಸ್ತಾವಿಸಿದರು.