ಕನ್ನಡ ವಾರ್ತೆಗಳು

ಬಸ್ ಹಾಗೂ ಅಟೋರಿಕ್ಷಾ ಪ್ರಯಾಣ ದರ ಇಳಿಕೆಗೆ ಡಿಸಿ ಆದೇಶವಿದ್ದರೂ.. ಹಳೆ ದರ ವಸೂಲಿ ಮಾಡುತ್ತಿರುವ ನಿರ್ವಾಹಕರು

Pinterest LinkedIn Tumblr

city_bus_1

ಮಂಗಳುರು,ಜ.16: ಖಾಸಗಿ ಬಸ್‌ ಪ್ರಯಾಣ ದರ ಮತ್ತು ಅಟೋರಿಕ್ಷಾ ಪ್ರಯಾಣ ದರ ಪರಿಷ್ಕರಣೆ ಮಾಡಿ ಜಿಲ್ಲಾಧಿಕಾರಿಯವರು ದರ ಇಳಿಕೆ ಆದೇಶ ಹೊರಡಿಸಿ ವಾರ ಸಮೀಪಿಸಿದೆ. ಆದರೆ ಬಸ್‌ ಮತ್ತು ಅಟೋರಿಕ್ಷಾದಲ್ಲಿ ಪ್ರಯಾಣ ದರ ಮಾತ್ರ ಇಳಿಕೆಯಾಗಿಲ್ಲ. ಬಸ್‌ಗಳಲ್ಲಿ ನಿರ್ವಾಹಕರ ಇಚ್ಛೆಯಂತೆ ದರ ವಸೂಲಿ ಮಾಡಲಾಗುತ್ತಿದೆ.

ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯಲ್ಲಿ ಭಾರೀ ಇಳಿಕೆಯಾಗಿರುವುದರಿಂದ ದ.ಕ. ಜಿಲ್ಲಾಧಿಕಾರಿ ಎ. ಬಿ. ಇಬ್ರಾಹಿಂ ಬಸ್‌ ಮತ್ತು ಅಟೋ ರಿಕ್ಷಾ ಪ್ರಯಾಣ ದರವನ್ನು ಇಳಿಕೆ ಮಾಡಿ ಜ. 12ರಿಂದ ಅನ್ವಯವಾಗುವಂತೆ ಆದೇಶ ಹೊರಡಿಸಿದ್ದಾರೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ 2014ರಲ್ಲಿ ಪರಿಷ್ಕರಿಸಿದ ದರವನ್ನು ರದ್ದು ಪಡಿಸಿ 2013ರ ಆಗಸ್ಟ್‌ 20ರಂದು ನಿಗದಿಯಾಗಿದ್ದದರವನ್ನು ಜಾರಿ ಮಾಡಲಾಗಿತ್ತು. ಆದರೆ ಜಿಲ್ಲಾಧಿಕಾರಿ ಅವರ ಆದೇಶ ಪಾಲನೆಯಾಗುತ್ತಿಲ್ಲ. ಪ್ರಯಾಣಿಕರಿಂದ ತಮಗಿಷ್ಟ ಬಂದಂತೆ ದರ ವಸೂಲಿ ಮಾಡುತ್ತಿದ್ದಾರೆ.

ಒಂದೇ ಬಸ್‌..ದಿನಕ್ಕೊಂದು ದರ:
ನಿತ್ಯ ಪ್ರಯಾಣಿಸುವ ಬಸ್‌ಗಳಲ್ಲಿ ದಿನಕ್ಕೊಂದು ದರವನ್ನು ನಿರ್ವಾಹಕರು ಪಡೆಯುತ್ತಿದ್ದಾರೆ. ಒಮ್ಮೆ 7 ರೂ. ತೆಗೆದುಕೊಂಡರೆ ಮರುದಿನ ಅದೇ ಬಸ್‌ನಲ್ಲಿ ಅದೇ ದೂರಕ್ಕೆ 9 ರೂ.ಗಳನ್ನು ವಸೂಲು ಮಾಡಿಕೊಳ್ಳುತ್ತಿರುವುದರ ಬಗ್ಗೆ ಪ್ರಯಾಣಿಕರು ದೂರಿದ್ದಾರೆ. 2013ರಲ್ಲಿ ನಿಗದಿಪಡಿಸಿದ್ದ ದರದಂತೆ ಗ್ರಾಮಾಂತರ ಮತ್ತು ಸಿಟಿ ಬಸ್‌ಗಳಲ್ಲಿ 4 ಕಿ.ಮೀ. ವ್ಯಾಪ್ತಿಯೊಳಗೆ 7 ರೂ. ದರ ತೆಗೆದುಕೊಳ್ಳಬೇಕೆಂಬ ಆದೇಶವಿದ್ದರೂ ನಿರ್ವಾಹಕರು ಹೆಚ್ಚುವರಿಯಾಗಿ 2 ರೂ. ತೆಗೆದುಕೊಳ್ಳುತ್ತಿದ್ದಾರೆ.

ದರಪಟ್ಟಿಯೇ ಇಲ್ಲ:

ಪ್ರಯಾಣ ದರ ಏರಿಕೆ ಮಾಡಿದರೆ ಕೆಲವು ಬಸ್‌ಗಳಲ್ಲಾದರೂ ದರ ಪಟ್ಟಿ ಕಾಣಸಿಗುತ್ತಿತ್ತು. ಇಳಿಕೆಯಾದ ದರದ ಬಗ್ಗೆ ಇನ್ನೂ ಯಾವುದೇ ಬಸ್‌ಗಳಲ್ಲಿ ದರಪಟ್ಟಿ ಅಳವಡಿಸಲಾಗಿಲ್ಲ. ಹಲವು ಬಸ್‌ಗಳಲ್ಲಿ ಪ್ರಯಾಣಿಕರಿಗೆ ಟಿಕೆಟ್‌ ಕೂಡಾ ನೀಡುತ್ತಿಲ್ಲ. ಈ ನಡುವೆ ಸಾರ್ವಜನಿಕರಿಂದ ಬರುವ ದೂರುಗಳನ್ನು ಪರಿಗಣಿಸಿರುವ ಆರ್‌ಟಿ‌ಒ ಬಸ್‌ಗಳಲ್ಲಿ ಪರಿಷ್ಕೃತ ಪ್ರಯಾಣ ದರ ಪಡೆಯಲು ಸೂಚಿಸಿದ್ದು, ಅಧಿಕ ದರ ವಸೂಲು ಮಾಡುವ ಬಸ್‌ ಮಾಲಕರ/ ಪರವಾನಿಗೆದಾರರ ವಿರುದ್ಧ ಸೂಕ್ತ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿಯವರು ತಿಳಿಸಿದ್ದಾರೆ.

ಅಟೋರಿಕ್ಷಾದಲ್ಲೂ ಇದೇ ಗೋಳು : ನಗರದಲ್ಲಿ ಪ್ರಯಾಣಿಸುವ ಅಟೋರಿಕ್ಷಾಗಳು ಕೂಡಾ ಇದೇ ಮಾದರಿಯನ್ನು ಅನುಸರಿಸುತ್ತಿವೆ. ಅಟೋದಲ್ಲಿ ಕನಿಷ್ಠ ದರ ಮೊದಲಿನ 25 ರೂ.ಗಳಲ್ಲಿ 5 ರೂ. ಇಳಿಕೆ ಮಾಡಲಾಗಿದೆ.

ಬಳಿಕ ಪ್ರತಿ ಕಿಮೀಗೆ 13 ರೂ. ತೆಗೆದುಕೊಳ್ಳುವಂತೆ ಆರ್‌ಟಿ‌ಒ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಯವರು ಸೂಚಿಸಿದ್ದಾರೆ. ಮೀಟರ್‌ ಮೆಶಿನನ್ನು ರೀಸೆಟ್‌ ಮಾಡದೇ ಇರುವುದರಿಂದ ಹಿಂದಿನ ದರವನ್ನೇ ಮೀಟರ್‌ಗಳು ತೋರಿಸುತ್ತಿದ್ದು, ಪ್ರಯಾಣಿಕರಿಂದ ಹಿಂದಿನ ದರವನ್ನೇ ತೆಗೆದುಕೊಳ್ಳಲಾಗುತ್ತಿದೆ.

Write A Comment