ಕನ್ನಡ ವಾರ್ತೆಗಳು

ಬಿ.ಸಿ.ರೋಡ್: ಭಗವತಿ ಸಹಕಾರಿ ಬ್ಯಾಂಕ್‌ಗೆ ಕಳ್ಳರ ಲಗ್ಗೆ : 1.6 ಕೋಟಿ ರೂ. ವೌಲ್ಯದ ನಗ-ನಗದು ಕಳವು

Pinterest LinkedIn Tumblr

Bagavati_bank_theft

ಬಂಟ್ವಾಳ, ಜ.13: ರಾ.ಹೆ.75ರ ಬಿ.ಸಿ.ರೋಡ್‌ನ ಮುಖ್ಯ ರಸ್ತೆಯಲ್ಲಿರುವ ಭಗವತಿ ಸಹಕಾರಿ ಬ್ಯಾಂಕ್‌ಗೆ ನುಗ್ಗಿದ ಕಳ್ಳರು 1.6 ಕೋಟಿ ರೂ. ವೌಲ್ಯದ ನಗ-ನಗದು ಕಳವುಗೈದಿರುವ ಘಟನೆ ಸೋಮವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಪೊಲೀಸರು ಸಂಗ್ರಹಿಸಿದ ಪ್ರಾಥಮಿಕ ಮಾಹಿತಿಯಯಲ್ಲಿ 22.28 ಕೆ.ಜಿ. ಚಿನ್ನದ ಒಡವೆಗಳು ಹಾಗೂ ನಗದು ಹಣ ಸೇರಿದಂತೆ ಒಟ್ಟು ಸುಮಾರು 6 ಕೋಟಿ ರೂ. ವೌಲ್ಯದ ಸೊತ್ತುಗಳನ್ನು ಕಳ್ಳರು ದೋಚಿದ್ದಾರೆ ಎಂದು ತಿಳಿಸಲಾಗಿತ್ತು. ಆದರೆ ಸಂಜೆಯ ಹೊತ್ತಿಗೆ ಕಳವಾದ ಸೊತ್ತಿನ ಒಟ್ಟು ಮೊತ್ತ 1.6 ಕೋಟಿ ರೂ.ಗೆ ಇಳಿಕೆಯಾಗಿತ್ತು.

ಘಟನೆ ವಿವರ: ಭಗವತಿ ಸಹಕಾರಿ ಬ್ಯಾಂಕ್‌ನ ಪಕ್ಕದ ಓಣಿಯ ಮೂಲಕ ಬ್ಯಾಂಕಿನ ಹಿಂಭಾಗದ ಕಿಟಕಿಯ ಸರಳನ್ನು ತುಂಡರಿಸಿ ಕಳ್ಳರು ಒಳನುಗ್ಗಿದ್ದಾರೆ. ಲಾಕರ್ ಒಡೆದು ಅದರಲ್ಲಿ ಭದ್ರವಾಗಿರಿಸಿದ್ದ ಕೋಟ್ಯಂತರ ಬೆಲೆಬಾಳುವ ಚಿನ್ನಾಭರಣ ಹಾಗೂ ನಗದನ್ನು ಕಳ್ಳರು ಕದ್ದೊಯ್ದಿದ್ದಾರೆ. ಸೋಮವಾರ ಬೆಳಗ್ಗೆ ಬ್ಯಾಂಕಿನ ಸಿಬ್ಬಂದಿ ಸುರೇಶ್ ಬಾಗಿಲು ತೆರೆದಾಗ ಕಳವು ನಡೆದಿರುವುದು ಗೊತ್ತಾಗಿದೆ. ಲಾಕರ್ ಭದ್ರತೆಯ ಸೈರನ್‌ಗೆ ಸಂಬಂಧಿಸಿದ ತಂತಿಯನ್ನೂ ತುಂಡರಿಸಲಾಗಿದ್ದು, ಕಬ್ಬಿಣದ ರಾಡ್‌ನಂತಹ ಸಲಕರಣೆಗಳನ್ನು ಬಳಸಿ ಲಾಕರ್ ಒಡೆದಿರುವುದು ಕಂಡುಬರುತ್ತಿದೆ. ರಾತ್ರಿ 10 ಹಾಗೂ 12ರ ನಡುವೆ ಈ ಕಳವು ನಡೆದಿರಬಹುದೆಂದು ಠಾಣೆಗೆ ನೀಡಿದ ದೂರಿನಲ್ಲಿ ಹೇಳಲಾಗಿದೆ.

ಕಳವು ವಿಚಾರ ತಿಳಿಯುತ್ತಿದ್ದಂತೆಯೇ ಬಂಟ್ವಾಳ ಎಎಸ್ಪಿರಾಹುಲ್ ಕುಮಾರ್, ವೃತ್ತ ನಿರೀಕ್ಷಕ ಬೆಳ್ಳಿಯಪ್ಪ, ನಗರ ಠಾಣಾಧಿಕಾರಿ ನಂದಕುಮಾರ್, ಗ್ರಾಮಾಂತರ ಠಾಣಾಧಿಕಾರಿ ರಕ್ಷಿತ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶ್ವಾನದಳ ಹಾಗೂ ಬೆರಳಚ್ಚು ತಜ್ಞರನ್ನು ಸ್ಥಳಕ್ಕೆ ಕರೆಸಿ ತನಿಖೆ ನಡೆಸಲಾಗಿದೆ. ಸತೀಶ್ ಎಂಬವರು ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶನಿವಾರ ಹಾಗೂ ರವಿವಾರ ಎರಡೂ ದಿನ ರಜೆ ಇದ್ದ ಹಿನ್ನೆಲೆಯಲ್ಲಿ ಕಳ್ಳರು ಈ ಕೃತ್ಯವನ್ನು ಶುಕ್ರವಾರ, ಶನಿವಾರ ಅಥವಾ ರವಿವಾರ ರಾತ್ರಿ ವೇಳೆಯಲ್ಲಿ ನಡೆಸಿರುವ ಸಾಧ್ಯತೆಗಳಿವೆ. ರಾ.ಹೆ.75ಕ್ಕೆ ಹೊಂದಿಕೊಂಡಿರುವ ಈ ಬ್ಯಾಂಕ್‌ಗೆ ಕಾವಲುಗಾರನಿಲ್ಲ ಹಾಗೂ ಕೋಟ್ಯಂತರ ರೂ. ವ್ಯವಹಾರ ನಡೆಸುತ್ತಿದ್ದರೂ ಬ್ಯಾಂಕ್ ಆವರಣದಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆಯಾಗಿಲ್ಲ. ಕಳ್ಳರು ಸರಳು ಮುರಿದು ಒಳನುಗ್ಗಿರುವ ಕಿಟಕಿಯ ಬಾಗಿಲಿನ ಚಿಲಕವನ್ನೂ ಹಾಕದೇ ಇದ್ದುದು ಕೂಡ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಬ್ಯಾಂಕಿನ ಭದ್ರತಾ ವೈಫಲ್ಯದಿಂದ ಕಳವು ನಡೆದಿರುವ ಹಿನ್ನೆಲೆಯಲ್ಲಿ ಪೊಲೀಸರಿಗೆ ಕಳ್ಳರ ಕಾರ್ಯಾಚರಣೆ ದೊಡ್ಡ ಸವಾಲಾಗಿದೆ. ಕಾರ್ಕಳ ಮಾದರಿಯಲ್ಲೇ ಕಳವು..!

ಕೆಲ ತಿಂಗಳ ಹಿಂದೆ ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಸಹಕಾರಿ ಬ್ಯಾಂಕ್ ಕಳವು ಮಾದರಿಯಲ್ಲೇ ಬಿ.ಸಿ.ರೋಡ್ ಭಗವತಿ ಬ್ಯಾಂಕ್ ನಲ್ಲಿ ಕಳವು ನಡೆದಿದೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮಂಗಳೂರಿನಿಂದ ಕರೆಸಲ್ಪಟ್ಟ ಬೆರಳಚ್ಚು ತಜ್ಞರೂ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಇದೊಂದು ಪರಿಣತ ತಂಡದ ಕೃತ್ಯ ಎಂದು ಅನುಮಾನಿಸಿದ್ದಾರೆ. ಭಾರೀ ಮೊತ್ತದ ಚಿನ್ನಾಭರಣಗಳು ಕಳವಾಗಿದೆ ಎನ್ನುವ ಮಾಹಿತಿ ತಿಳಿಯುತ್ತಲೇ ನೂರಾರು ಗ್ರಾಹಕರು ಬ್ಯಾಂಕಿಗೆ ಮುಗಿಬಿದ್ದಿದ್ದಾರೆ.

ಕಳವಾದ ಸೊತ್ತಿನ ಮೊತ್ತ ಸಂಜೆಯ ವೇಳೆಗೆ ಬದಲಾಯ್ತು !

ಬೆಳಗ್ಗೆ ಭಗವತಿ ಸಹಕಾರಿ ಬ್ಯಾಂಕಿನಿಂದ 6 ಕೋಟಿ ರೂ. ವೌಲ್ಯದ ನಗ ನಗದು ಕಳವಾಗಿದೆ ಎಂದು ಸುದ್ದಿಯಾಗಿತ್ತು. ಆದರೆ ಸಂಜೆಯ ವೇಳೆಗೆ ಈ ಮೊತ್ತ 1.65 ಕೋಟಿ ರೂ.ಗೆ ಇಳಿದಿತ್ತು.

ಅಪರಾಹ್ನದ ವೇಳೆಗೆ ಬ್ಯಾಂಕಿನ ಕಡೆಯಿಂದ 22.28 ಕೆ.ಜಿ. ಚಿನಾಭರಣ ಸಹಿತ 6 ಕೋಟಿ ರೂ. ವೌಲ್ಯದ ಸೊತ್ತು ಕಳವಾಗಿದೆ ಎಂದು ಬಂಟ್ವಾಳ ನಗರ ಠಾಣೆಗೆ ದೂರು ನೀಡಲಾಗಿತ್ತು. ಆದರೆ ಸಂಜೆಯ ವೇಳೆಗೆ ಈ ಕಳವಿನ ಮೊತ್ತ ಏಕಾಏಕಿ ಇಳಿಕೆಯಾಗಿದ್ದು, ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಬ್ಯಾಂಕಿನ ದಾಖಲೆ ಪುಸ್ತಕಗಳನ್ನು ನೋಡಿ ಕೊಂಡು ಬ್ಯಾಂಕಿನ ಸಿಬ್ಬಂದಿ 6 ಕೋಟಿ ರೂ.ನ ಲೆಕ್ಕಾಚಾರ ನೀಡಿದ್ದರು. ಕಂಪ್ಯೂಟರ್‌ನಲ್ಲಿ ನಿಖರ ಲೆಕ್ಕಾಚಾರ ನಡೆಸಲಾಯಿತು. ಕಳವಾದ ಚಿನ್ನಾ ಭರಣಗಳ ತೂಕ 6.5 ಕೆ.ಜಿ. ಮಾತ್ರ ಎಂಬುದು ಸ್ಪಷ್ಟವಾಗಿತ್ತು. ದಾಖಲೆಯ ಪರಿಶೀಲನೆಯನ್ನು ಬ್ಯಾಂಕ್ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ಜಂಟಿಯಾಗಿಯೇ ನಡೆಸಿದ್ದಾರೆ ಎಂದು ಜಿಲ್ಲಾ ಎಸ್ಪಿ ಡಾ. ಶರಣಪ್ಪ ತಿಳಿಸಿದ್ದಾರೆ.

ದಾಖಲಾತಿ ನೋಡಿದಾಗ ಕಳವಾದ ಸೊತ್ತಿನ ನಿಖರ ಮೊತ್ತ 1.65 ಕೋಟಿ ರೂ. ಎಂಬುದು ತಿಳಿದುಬಂದಿದೆ ಎಂದು ಬಂಟ್ವಾಳ ವೃತ್ತ ನಿರೀಕ್ಷಕ ಬೆಳ್ಳಿಯಪ್ಪತಿಳಿಸಿದ್ದಾರೆ.

ಬ್ಯಾಂಕ್‌ನಲ್ಲಿರುವ ನಗ ಹಾಗೂ ನಗದಿನ ಮೊತ್ತದ ಬಗ್ಗೆ ಬ್ಯಾಂಕಿನ ವ್ಯವಸ್ಥಾಪಕರಿಗೆ ಸ್ಪಷ್ಟ ಲೆಕ್ಕಾಚಾರ ಇಲ್ಲದಿರುವ ಬಗ್ಗೆ ಗ್ರಾಹಕರು ಆತಂಕ ವ್ಯಕ್ತಪಡಿಸಿದ್ದಾರೆ.

ಭದ್ರತಾ ವೈಫಲ್ಯ ಕಾರಣ: ಎಸ್ಪಿ

ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶರಣಪ್ಪಸೋಮವಾರ ಮಧ್ಯಾಹ್ನ ಕಳವು ನಡೆದಿರುವ ಬಿ.ಸಿ.ರೋಡ್‌ನ ಭಗವತಿ ಸಹಕಾರ ಬ್ಯಾಂಕ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ಸಂದರ್ಭ ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಅವರು, ಬ್ಯಾಂಕಿನ ಆಡಳಿತ ಮಂಡಳಿಯು ಬ್ಯಾಂಕಿನ ಭದ್ರತೆಗೆ ಸಂಬಂಧಿಸಿ ವಹಿಸಿರುವ ನಿರ್ಲಕ್ಷ್ಯವೇ ಈ ಕೃತ್ಯಕ್ಕೆ ಎಡೆಮಾಡಿಕೊಟ್ಟಿದೆ ಎಂದು ಅಭಿಪ್ರಾಯಿಸಿದ್ದಾರೆ.

ಕೋಟ್ಯಂತರ ರೂ. ವೌಲ್ಯದ ಸೊತ್ತುಗಳನ್ನು ಬ್ಯಾಂಕಿನ ಲಾಕರ್‌ನಲ್ಲಿ ಇಡಲಾಗುತ್ತಿದ್ದರೂ ಕಾವಲುಗಾರನ ನೇಮಕವಿಲ್ಲದಿರುವುದು, ಸಿಸಿ ಕ್ಯಾಮೆರಾದ ಅಳವಡಿಕೆ ಇಲ್ಲದಿರುವುದು, ಕಿಟಕಿಬಾಗಿಲ ಚಿಲಕ ತೆರೆದಿದ್ದುದು ಕಳ್ಳರ ಕೃತ್ಯಕ್ಕೆ ಅನುಕೂಲ ಮಾಡಿಕೊಟ್ಟಿದೆ ಎಂದಿದ್ದಾರೆ. ಮೇಲ್ನೋಟಕ್ಕೆ ಇದು ವೃತ್ತಿಪರ ಬ್ಯಾಂಕ್ ಕಳ್ಳರ ಕೃತ್ಯ ಎಂಬಂತೆ ಕಂಡುಬರುತ್ತಿದೆ. ಇದರ ತನಿಖೆಗಾಗಿ ಮೂರು ವಿಶೇಷ ತಂಡಗಳನ್ನು ರಚಿಸಿ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗುವುದು ಎಂದವರು ಪತ್ರಿಕೆಗೆ ಮಾಹಿತಿ ನೀಡಿದರು.

Write A Comment