ಕನ್ನಡ ವಾರ್ತೆಗಳು

ತ್ವರಿತವಾಗಿ ಸಾಲ ನೀಡಲು ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಒತ್ತು; ಎಸ್.ಸಿ.ಡಿ.ಸಿ.ಸಿ ಬ್ಯಾಂಕ್: 92ನೇ ವಂಡ್ಸೆ ಶಾಖೆ ಉದ್ಘಾಟನೆ

Pinterest LinkedIn Tumblr

ಕುಂದಾಪುರ: ಸಾಲಕ್ಕೆ ಗ್ರಾಹಕರನ್ನು ಸುಖಾಸುಮ್ಮನೆ ಅಲೆದಾಡಿಸಬಾರದು. ತ್ವರಿತವಾಗಿ ಸಾಲ ನೀಡಲು ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಒತ್ತನ್ನು ನೀಡುತ್ತಿದ್ದು ಒಂದು ಗಂಟೆಯೊಳಗೆ ಸಾಲ ನೀಡುವ ವ್ಯವಸ್ಥೆ ಹಾಗೂ ಅರ್ಜಿ ಸಲ್ಲಿಸಿದ ದಿನವೇ ಸಾಲ ನೀಡುವ ವ್ಯವಸ್ಥೆ ಬ್ಯಾಂಕ್ ಮಾಡಲಿದೆ. ನವೋದಯ ಗುಂಪಿನ ಸದಸ್ಯರಿಗೆ ನೀಡುವ ಸಾಲಕ್ಕೆ ಮಿತಿಯನ್ನು ತಗೆದು ಹಾಕಲಾಗಿದ್ದು ಅಭಿವೃದ್ಧಿಗೆ ಅಗತ್ಯವಿರುವಷ್ಟು ಸಾಲವನ್ನು ನೀಡಲಾಗುವುದು ಎಂದು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ., ಮಂಗಳೂರು ಇದರ ಅಧ್ಯಕ್ಷ ಡಾ|ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.

ಜ.12ರಂದು ಕುಂದಾಪುರ ತಾಲೂಕು ವಂಡ್ಸೆಯ ವಾತ್ಸಲ್ಯ ಕಾಂಪ್ಲೆಕ್ಸ್‌ನ 1 ನೇ ಮಹಡಿಯಲ್ಲಿ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ., ಮಂಗಳೂರು ಇದರ 92ನೇ ಶಾಖೆಯ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

SCDCC_92Branch_Vandse SCDCC_92Branch_Vandse (1)

ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯಲ್ಲಿ ಬ್ಯಾಂಕಿಂಗ್ ಕ್ಷೇತ್ರದ ಕೊಡುಗೆ ಅಪಾರ. ಗ್ರಾಮಾಂತರ ಪ್ರದೇಶಕ್ಕೆ ಬ್ಯಾಂಕಿಂಗ್ ಕ್ಷೇತ್ರ ವಿಸ್ತರಿಸುವುದರಿಂದ ಅಲ್ಲಿಯ ಅಭಿವೃದ್ಧಿ ಸಾಧ್ಯವಿದೆ. ಇವತ್ತು ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ, ಸಣ್ಣ ಕೈಗಾರಿಕೆ, ಸ್ವುದ್ಯೋಗಗಳಿಗೆ ಸಕಾಲಿಕವಾಗಿ ಸಾಲ ಸೌಲಭ್ಯ ಸಿಗದೇ ಪಟ್ಟಣ ಪ್ರದೇಶಗಳಿಗೆ ವಲಸೆ ಹೋಗುವುದು ಕಾಣುತ್ತಿದ್ದೇವೆ. ಇದನ್ನು ತಪ್ಪಿಸಿ ಹಳ್ಳಿಯಲ್ಲಿಯೇ ಬ್ಯಾಂಕ್ ಸ್ಥಾಪಿಸಿ ಸೇವೆ ನೀಡುವ ಸದುದ್ದೇಶದಿಂದ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ತನ್ನ ಶತಮಾನೋತ್ಸವದ ಸಂದರ್ಭದಲ್ಲಿ ಗ್ರಾಮಾಂತರ ಪ್ರದೇಶದಲ್ಲಿ101 ಶಾಖೆಗಳನ್ನು ತೆರೆಯುವ ಗುರಿ ಹೊಂದಿದೆ ಎಂದರು.

ಗ್ರಾಮಾಂತರ ಪ್ರದೇಶದಲ್ಲಿ ನಮಗೆ ಅಪೂರ್ವ ಸಹಕಾರ ಸಿಗುತ್ತಿದ್ದು ವಂಡ್ಸೆಯಲ್ಲಿ ಕ್ಷಿಪ್ರ ಅವಧಿಯಲ್ಲಿ 1400 ಖಾತೆಗಳನ್ನು ತೆರೆದು ೬.೫ಕೋಟಿ ರೂ.ಠೇವಣಾತಿ ಇರಿಸಿದ್ದು ಇಲ್ಲಿನ ಜನರ ಅಭಿಮಾನದ ಸಂಕೇತ ಎಂದು ಬಣ್ಣಿಸಿದ ಅವರು, ಸರ್ಕಾರ ಮಟ್ಟದಲ್ಲಿ ರೈತರಿಗೆ ಸರಿಯಾದ ನಿರೀಕ್ಷಿತರ ಉತ್ತೇಜನ ಸಿಗುತ್ತಿಲ್ಲ. ಧಾರಣೆಗಳ ಏರುಪೇರಿನಿಂದ ರೈತ ಗೊಂದಲಕ್ಕೆ ಸಿಲುಕಿದ್ದಾನೆ. ಧಾರಣೆಗೆ ಸ್ಥಿರತೆ ತಾರದೇ ಏನು ಮಾಡಿದರೂ ಪ್ರಯೋಜನವಿಲ್ಲ ಎಂದರು.

35 ವರ್ಷಗಳ ಹಿಂದೆ ಪ್ರಾರಂಭವಾದ ವಾರಾಹಿ ಯೋಜನೆ ಯಶಸ್ವಿಯಾಗಿಲ್ಲ. ಸಕ್ಕರೆ ಕಾರ್ಖಾನೆ ಪ್ರಾರಂಭವಾಗಿ ಮುಚ್ಚಿದ್ದು ಆಯಿತು. ವಾರಾಹಿ ನೀರಾವರಿ ಯೋಜನೆ ಮೂಲಕ ರೈತರಿಗೆ ನೀರುಕೊಟ್ಟು ಕಬ್ಬು ಬೆಳೆ ಪ್ರೋತ್ಸಾಹಿಸುವ ಕೆಲಸವಾಗಿಲ್ಲ. 35 ವರ್ಷಗಳ ನಂತರ ರೈತರು ಪ್ರತಿಭಟನೆಗಿಳಿಯಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಯಿತು ಎಂದರು.

ಬೈಂದೂರು ಕ್ಷೇತ್ರದ ಶಾಸಕ ಕೆ.ಗೋಪಾಲ ಪೂಜಾರಿ ವಂಡ್ಸೆ ಶಾಖೆಯನ್ನು ಉದ್ಘಾಟಿಸಿ, ಆರ್ಥಿಕ ಪ್ರಗತಿ ಹಾಗೂ ಸ್ವಾವಲಂಬನೆಗೆ ಹಣಕಾಸು ಸಂಸ್ಥೆಗಳು ಪೂರಕವಾಗಿ ವರ್ತಿಸಬೇಕು. ಉದ್ಯೋಗವಕಾಶಗಳ ಕಲ್ಪಿಸಲು ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಸಾಕಷ್ಟು ಸಹಕಾರ ನೀಡುತ್ತಾ ಬಂದಿದೆ. ಈ ಸಂಸ್ಥೆಯನ್ನು ಉನ್ನತ ಹಂತಕ್ಕೆ ಕೊಂಡೋಯ್ದಿರುವುದು ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರ ದೂರದೃಷ್ಟಿ ಮತ್ತು ಕಳಕಳಿ ಎಂದರು.

ವಂಡ್ಸೆ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಮಂಜಯ್ಯ ಶೆಟ್ಟಿ ಸಬ್ಲಾಡಿ ಗಣಕೀಕರಣ ಉದ್ಘಾಟಿಸಿದರು. ಜಿ.ಪಂ.ಸದಸ್ಯೆ ಇಂದಿರಾ ಶೆಟ್ಟಿ ಭದ್ರತಾ ಕೊಠಡಿ ಉದ್ಘಾಟಿಸಿದರು. ವಂಡ್ಸೆ ಗ್ರಾ.ಪಂ.ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ಕಟ್ಟಡದ ಮಾಲೀಕರಾದ ಆನಂದ ಶೆಟ್ಟಿ ಸಬ್ಲಾಡಿ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶP ಬಿ.ರಘುರಾಮ ಶೆಟ್ಟಿ, ಹಿರಿಯ ಸಹಕಾರಿ ನೈಲಾಡಿ ಶಿವರಾಮ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಪ್ರಥಮ ಠೇವಣಿ ಪತ್ರ, ಪ್ರಥಮ ಸಂಚಯ ಖಾತೆ ಪುಸ್ತಕ, ಪ್ರಥಮ ಸಾಲ ಪತ್ರ, ಚೈತನ್ಯ ವಿಮಾ ಯೋಜನೆಯ ವಿಮಾ ಮೊತ್ತ, ವಾಹನ ಸಾಲ ಪಡೆದವರಿಗೆ ವಾಹನದ ಕೀ ಹಸ್ತಾಂತರ ನಡೆಯಿತು. ಪ್ರಥಮ ಲಾಕರ್ ಕೀಯನ್ನು ಸಾಂಕೇತಿಕವಾಗಿ ಹಸ್ತಾಂತರಿಸಲಾಯಿತು. ಶಾಖೆ ವ್ಯಾಪ್ತಿಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಸನ್ನಿಧಿ ಸ್ವಸಹಾಯ ಸಂಘ ಹರವರಿ, ಶ್ರೀಶೈಲಾ ಬೆಳ್ಳಾಲ, ಶ್ರೀ ಸನ್ಯಾಸಿ ಇಡೂರು, ಶ್ರೀನಿಧಿ ವಂಡ್ಸೆ, ಸಿಗಂಧೂರೇಶ್ವರಿ ಬೆಳ್ಳಾಲ, ಮಹಿಷಾಮರ್ಧಿನಿ ಸ್ವಸಹಾಯ ಸಂಘ ಹೊಸೂರು ಈ ಗುಂಪುಗಳಿಗೆ ದಾಖಲಾತಿ ಹಸ್ತಾಂತರಿಸಲಾಯಿತು.

ಕಟ್ಟಡದ ಮಾಲೀಕ ಆನಂದ ಶೆಟ್ಟಿ ಸಬ್ಲಾಡಿ ಇವರನ್ನು ಸನ್ಮಾನಿಸಲಾಯಿತು. ಶಾಖಾ ವ್ಯವಸ್ಥಾಪಕ ಸತೀಶ ಶೆಟ್ಟಿ ಅವರನ್ನು ಗೌರವಿಸಲಾಯಿತು. ಆಲೂರು-ಹರ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಹೆಚ್.ಮಂಜಯ್ಯ ಶೆಟ್ಟಿ, ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಗೋಪಾಲ ಪೂಜಾರಿ, ಕುಂದಾಪುರ ಭೂ ಬ್ಯಾಂಕ್ ಅಧ್ಯಕ್ಷ ಎಸ್.ದಿನಕರ ಶೆಟ್ಟಿ, ಕರ್ಕುಂಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ ಬಾಂಡ್ಯ, ಕೊಲ್ಲೂರು ಶ್ರೀ ಮೂಕಾಂಬಿಕಾ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ವಿಶ್ವೇಶ್ವರ ಹೆಗ್ಡೆ, ಕುಂದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮಧುಕರ, ಪಡುಕೋಣೆ ವ್ಯವಸಾಯಬ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸತೀಶ ಎಂ.ನಾಯಕ್, ಕಾವ್ರಾಡಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಉಪಸ್ಥಿತರಿದ್ದರು.

ವಂಡ್ಸೆ ಸ.ಮಾ.ಹಿ.ಪ್ರಾ.ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಎಸ್.ರಾಜು ಪೂಜಾರಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬ್ಯಾಂಕಿನ ಪ್ರಭಾರ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಿ.ಬಾಬು ಬಿಲ್ಲವ ವಂದಿಸಿದರು.

Write A Comment