ಕನ್ನಡ ವಾರ್ತೆಗಳು

ಡೀಸೆಲ್ ಬೆಲೆ ಇಳಿಕೆ ಹಿನ್ನೆಲೆ ಖಾಸಗಿ ಬಸ್ಸುಗಳ ಪ್ರಯಾಣ ದರ ಇಳಿಕೆ :2013ರ ಪ್ರಯಾಣ ದರ ಜಾರಿಗೊಳಿಸಲು ಆರ್‌ಟಿಎ ಸಭೆಯಲ್ಲಿ ನಿರ್ಧಾರ

Pinterest LinkedIn Tumblr

DC_RTO_Meet_1

ಮಂಗಳೂರು, ಜ.09: ಡೀಸೆಲ್ ಬೆಲೆಯಲ್ಲಿ ಕಳೆದ ಕೆಲವು ತಿಂಗಳಿನಿಂದೀಚೆಗೆ ಇಳಿಕೆಯಾಗಿರುವುದು ಹಾಗೂ ಮುಂದಿನ ದಿನಗಳಲ್ಲೂ ಇಳಿಕೆಯಾಗುವ ಲಕ್ಷಣಗಳು ಗೋಚರಿಸುತ್ತಿರುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಖಾಸಗಿ ಬಸ್ಸುಗಳಿಗೆ 2014ರ ಪರಿಷ್ಕೃತ ಪ್ರಯಾಣ ದರವನ್ನು ರದ್ದುಪಡಿಸಿ 2013ರಲ್ಲಿ ಜಾರಿಯಲ್ಲಿದ್ದ ಪ್ರಯಾಣ ದರ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಖಾಸಗಿ ಬಸ್ಸುಗಳ ಪ್ರಯಾಣ ದರ ಇಳಿಕೆ ಕುರಿತಂತೆ ಬಸ್ಸು ಮಾಲಕರು ಹಾಗೂ ಸಾರ್ವಜನಿಕರ ನಡುವಿನ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

dc_rto_meet_photo

ದರ ಇಳಿಕೆಗೆ ಸಂಬಂಧಿಸಿ ಸಾರ್ವಜನಿಕರು ಹಾಗೂ ಬಸ್ ಮಾಲಕರ ನಡುವಿನ ಚರ್ಚೆಯನ್ನು ಆಲಿಸಿದ ಬಳಿಕ ಜಿಲ್ಲಾಧಿಕಾರಿ ಇಬ್ರಾಹೀಂ ಮಾತನಾಡಿ, 2014ರ ಜುಲೈ 1ರಂದು ಬಸ್ ಪ್ರಯಾಣ ದರ ಪರಿಷ್ಕರಿಸುವ ಸಂದರ್ಭ ಇದ್ದ ಡೀಸೆಲ್ ಬೆಲೆ 61.34 ರೂ.ಗಳಿಂದ ಇದೀಗ 54.25 ರೂ.ಗಳಿಗೆ ಇಳಿಕೆಯಾಗಿದೆ. ಈ ಹಿನ್ನೆಲೆಯಲ್ಲಿ 2014ರ ಪರಿಷ್ಕೃತ ಪ್ರಯಾಣ ದರವನ್ನು ರದ್ದುಪಡಿಸಿ, 2013ರ ಆಗಸ್ಟ್ 20ರಂದು ಜಾರಿಗೊಳಿಸಲಾಗಿದ್ದ ದರವನ್ನು ಜಾರಿಗೊಳಿಸುವ ಬಗ್ಗೆ ಅಭಿಪ್ರಾಯವನ್ನು ತಿಳಿಸಿ ಎಂದರು. ಇದಕ್ಕೆ ಸಭೆಯಲ್ಲಿ ಹಾಜರಿದ್ದ ಸಾರ್ವಜನಿಕರು ಒಕ್ಕೊರಳಿನಿಂದ ಸಹಮತ ವ್ಯಕ್ತಪಡಿಸಿದರೆ, ಬಸ್ಸು ಮಾಲಕರು ಆಕ್ಷೇಪಿಸಿದರು. ಡೀಸೆಲ್ ಬೆಲೆ ಇಳಿಕೆಯಾದರೂ ಇತರ ಸಾಮಗ್ರಿಗಳು, ನಿರ್ವಹಣೆ ಬೆಲೆಗಳಲ್ಲಿ ಏರಿಕೆಯಾಗಿರುವುದರಿಂದ 2013ರ ದರ ಸಮ್ಮತವಲ್ಲ ಎಂದು ಕೆನರಾ ಬಸ್ಸು ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್ ಸೇರಿದಂತೆ ಇತರರು ಅಭಿಪ್ರಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, 2013ರ ಪರಿಷ್ಕೃತ ಪ್ರಯಾಣ ದರ ನಿಗದಿಯಲ್ಲಿದ್ದ ಡೀಸೆಲ್ ಬೆಲೆ ಹಾಗೂ ಪ್ರಸ್ತುತ ಇಳಿಕೆಯಾಗಿರುವ ಡೀಸೆಲ್ ಬೆಲೆಗೆ ಹೋಲಿಕೆ ಮಾಡಿದರೆ 2012ರ ಪರಿಷ್ಕೃತ ದರವನ್ನು ಜಾರಿಗೊಳಿಸಬೇಕಾಗುತ್ತದೆ. ಆದರೆ ಇತರ ವಸ್ತುಗಳ ಬೆಲೆ ಏರಿಕೆಯನ್ನು ಗಮನದಲ್ಲಿರಿಸಿಕೊಂಡು 2013ರ ದರ ಜಾರಿಗೆ ಕ್ರಮ ಕೈಗೊಳ್ಳಲಾಗುವುದು. ಒಂದು ವೇಳೆ ಬೆಲೆಯಲ್ಲಿ ಮತ್ತಷ್ಟು ಇಳಿಕೆಯಾದಲ್ಲಿ ದರ ಮರು ಪರಿಷ್ಕರಿಸಲಾಗುವುದು ಹಾಗೂ ಏರಿಕೆಯಾದಲ್ಲಿ ಪ್ರಸ್ತುತ ಇರುವ ದರವನ್ನು ಮುಂದುವರಿಸುವ ಬಗ್ಗೆಯೂ ಮುಂದೆ ಕ್ರಮ ಕೈಗೊಳ್ಳಬಹುದಾಗಿದೆ ಎಂದು ಸ್ಪಷ್ಟಪಡಿಸಿದರು.

ಸಭೆಯ ಆರಂಭದಲ್ಲಿ ಕೆನರಾ ಬಸ್ಸು ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್ ಮಾತನಾಡಿ, 2014ರಲ್ಲಿ ಬಸ್ಸು ಪ್ರಯಾಣ ದರ ಪರಿಷ್ಕರಣೆಯ ಬಳಿಕ ಮೂರು ಬಾರಿ ಇಳಿಕೆಯಾಗಿದ್ದರೆ, ಒಂದು ಬಾರಿ ಏರಿಕೆಯಾಗಿದೆ. ಆ ಸಂದರ್ಭ ನಾವು ಏರಿಕೆ ಮಾಡಬೇಕೆಂದು ಕೇಳಿಕೊಂಡಿಲ್ಲ. ಆದರೆ ಇತರ ನಿರ್ವಹಣೆ, ಬಿಡಿ ಭಾಗಗಳು ಸೇರಿದಂತೆ ಇತರ ಹಲವಾರು ರೀತಿಯ ಖರ್ಚು ವೆಚ್ಚಗಳನ್ನೂ ಬಸ್ಸಿನವರು ಸರಿದೂಗಿಸಬೇಕಾಗಿರುವುದರಿಂದ ಪ್ರಥಮ ಸ್ಟೇಜ್ ದರವನ್ನು ಉಳಿಸಿಕೊಂಡು ಉಳಿದ ಸ್ಟೇಜ್‌ಗಳಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡು ಇಳಿಕೆ ಮಾಡಬೇಕೆಂದು ಕೋರಿದರು. ಈ ಸಂದರ್ಭ ಸಾರ್ವಜನಿಕರ ಪರವಾಗಿ ಹನುಮಂತ ಕಾಮತ್, ಇಸ್ಮಾಯೀಲ್, ದಯಾನಂದ ಶೆಟ್ಟಿ, ಇಮ್ತಿಯಾಝ್, ಹಸನಬ್ಬ ಅಮ್ಮೆಂಬಳ ಮೊದಲಾದವರು ಮಾತನಾಡಿ, ಪ್ರತಿ ಸ್ಟೇಜ್‌ಗೆ 2 ರೂ.ನಂತೆ ಕಡಿಮೆ ಮಾಡಬೇಕೆಂಬ ಒತ್ತಾಯವನ್ನೂ ಮಾಡಿದರು. ಇದಕ್ಕೆ ಪ್ರತಿಯಾಗಿ ಬಸ್ಸು ಮಾಲಕರ ಅಭಿಪ್ರಾಯವನ್ನು ಆಲಿಸಿದ ಬಳಿಕ ಜಿಲ್ಲಾಧಿಕಾರಿ ಈ ಮೇಲಿನ ನಿರ್ಧಾರವನ್ನು ತಿಳಿಸಿದರಲ್ಲದೆ, ಒಂದು ವಾರದೊಳಗೆ ಬಸ್ಸು ಪ್ರಯಾಣ ದರ ನಿಗದಿಯ ಕುರಿತಂತೆ ಅಧಿಕೃತ ಅಧಿಸೂಚನೆಯನ್ನು ನೀಡುವುದಾಗಿ ಹೇಳಿದರು.

ಬಸ್ಸುಗಳಲ್ಲಿ ಕಡ್ಡಾಯವಾಗಿ ಪ್ರಥಮ ಚಿಕಿತ್ಸಾ ಬಾಕ್ಸ್ ಗಳನ್ನು ಅಳವಡಿಸಬೇಕು. ಸಲಹಾ ಪೆಟ್ಟಿಗೆಗಳನ್ನು ಇಟ್ಟಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಸಮರ್ಪಕವಾಗಿ ಸ್ಪಂದಿಸಲು ಹಾಗೂ ಮತ್ತಷ್ಟು ಉತ್ತಮ ರೀತಿಯ ಸೇವೆಗೆ ಸಾಧ್ಯ ವಾಗುತ್ತದೆ ಎಂಬ ಸಲಹೆಯನ್ನೂ ಪೊಲೀಸ್ ವರಿಷ್ಠಾಧಿಕಾರಿ ನೀಡಿದರು. ಟಿಕೆಟ್ ಮಿಶನ್ ರಹಿತ 54 ಬಸ್ಸುಗಳಿಂದ 3400 ರೂ. ದಂಡ ಸಂಗ್ರಹ ಬಸ್ಸುಗಳಲ್ಲಿ ಟಿಕೆಟ್ ನೀಡುವ ಮಿಶನ್‌ಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಈ ಹಿಂದೆ ನೀಡಿದ ಸೂಚನೆಯ ಮೇರೆಗೆ ಜನವರಿ 1ರಿಂದ ಈವರೆಗೆ ಮಿಶನ್ ಹಾಕಿರದ 54 ಬಸ್ಸುಗಳಿಗೆ ದಂಡ ವಿಧಿಸಿ 3,400 ರೂ. ಸಂಗ್ರಹಿಸಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಕಚೇರಿಯ ಸಹಾಯಕ ಅಧಿಕಾರಿ ಶ್ರೀಧರ ನಾಯ್ಕಾ ಸಭೆಯಲ್ಲಿ ತಿಳಿಸಿದರು.

Write A Comment