ಮಂಗಳೂರು, ಜ.09 : ದೇಶದಲ್ಲಿ ಮುಂದಿನ ಹತ್ತು ವರ್ಷಗಳಲ್ಲಿ ಯುವ ಶಕ್ತಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಲಿದ್ದು, ಪ್ರಪಂಚದಲ್ಲಿ ಭಾರತ ದೇಶ ಯುವ ರಾಷ್ಟ್ರವಾಗಲಿದೆ. ಇದರಿಂದ ಯುವ ಜನತೆಗೆ ಹೆಚ್ಚು ಅವಕಾಶವೂ ಸಿಗಲಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಪ್ರೊ.ಯು.ಆರ್.ರಾವ್ ಅಭಿಪ್ರಾಯಪಟ್ಟರು. ನಗರದ ಜಪ್ಪಿನಮೊಗರಿನಲ್ಲಿರುವ ಯೆನೆಪೊಯ ಶಾಲೆಯಲ್ಲಿ ಗುರುವಾರ ವಿದ್ಯಾರ್ಥಿಗಳ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಯಾರೇ ಆಗಲಿ ಇತರರ ಒತ್ತಾಯಕ್ಕೆ ಮಣಿದು ಯಾವುದಾದ ರೊಂದು ಕ್ಷೇತ್ರವನ್ನು ಆಯ್ಕೆಮಾಡಿಕೊಂಡರೆ ಅದರಿಂದ ಯಶಸ್ಸು ಅಸಾಧ್ಯ. ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರೆ ಸಾಧನೆ ಮಾಡಲು ಸಾಧ್ಯವಿದೆ ಎಂದ ಪ್ರೊ.ಯು.ಆರ್.ರಾವ್, ಕೃಷಿ ಅತಿ ಪ್ರಮುಖ ಕ್ಷೇತ್ರವಾಗಿದೆ. ಆಹಾರ ಉತ್ಪಾದಿಸುವ ಮೂಲಕ ಸಂಪನ್ಮೂಲ ಕ್ರೋಡೀಕರಣ ಮಾಡಬಹುದಾಗಿದೆ. ಈ ಕ್ಷೇತ್ರದ ಬೆಳವಣಿಗೆಗೆ ತಂತ್ರಜ್ಞಾನಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಅಗತ್ಯವಿದೆ ಎಂದರು.
ವಿಶ್ವದ ಜಿಡಿಪಿಗೆ ಶೇ.25ರಷ್ಟು ಕೊಡುಗೆ ನೀಡುತ್ತಿದ್ದ ಭಾರತದ ಜಿಡಿಪಿ ಶೇ.2.5ರಷ್ಟು ಇಳಿದಿದೆ. ಹಸಿರು ಕ್ರಾಂತಿಯಿಂದ ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದ್ದರೂ, ಗುಣಮಟ್ಟದ ಉತ್ಪಾದನೆಯನ್ನು ಹೆಚ್ಚಿಸಬೇಕಾಗಿದೆ. ಈ ನಿಟ್ಟಿನಲ್ಲಿ (ಎವರ್‌ಗ್ರೀನ್ ರೆವೊಲ್ಯುಷನ್) ನಿರಂತರ ಹಸಿರು ಕ್ರಾಂತಿಯ ಅಗತ್ಯವಿದೆ. ಕೇವಲ ಉತ್ಪಾದನೆಗೆ ಒತ್ತು ನೀಡಿರುವುದರಿಂದ ಗುಣಮಟ್ಟಕ್ಕೆ ಆಸ್ಪದ ಸಿಗುತ್ತಿರರಲಿಲ್ಲ. ಹಾಗಾಗಿ ಮಣ್ಣಿನ ಸಾರ ಕಡಿಮೆಯಾಗತೊಡಗಿತು. ಪರಿಣಾಮವಾಗಿ ಉತ್ಪಾದನೆಯೂ ಕುಸಿಯತೊಡಗಿತು. ಇದನ್ನು ನಿವಾರಿಸಲು ವೈಜ್ಞಾನಿಕ ತಂತ್ರಜ್ಞಾನಗಳನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಬೇಕಾಗಿದೆ. ಒಟ್ಟಿನಲ್ಲಿ ಆಹಾರದ ಉತ್ಪಾದನೆ ಮಾಡಲು ನಿರಂತರ ಹಸಿರು ಕ್ರಾಂತಿಯ ಅಗತ್ಯವಿದೆ ಎಂದು ಪ್ರೊ.ಯು.ಆರ್.ರಾವ್ ಹೇಳಿದರು.
ಕೈಗಾರಿಕಾ ಕ್ರಾಂತಿಯಿಂದಾಗಿ ಈ ಕ್ಷೇತ್ರದಲ್ಲೂ ಹಲವು ಬದಲಾವಣೆಗಳಾದವು. ಆದರೆ ಇಂದು ಉತ್ಪಾದನೆಯಲ್ಲೂ ಗುಣಮಟ್ಟವಿಲ್ಲ. ದೇಶದಿಂದ ರಫ್ತು ಮಾಡುವ ಸರಕಿಗಿಂತ ಎರಡು ಪಟ್ಟು ಸರಕನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಸೇನೆಗೆ ಬೇಕಾದ ಹಲವು ಯಂತ್ರೋಪಕರಣಗಳನ್ನೂ ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ದಿನ ಬಳಕೆಯ ಸಣ್ಣ ಪುಟ್ಟ ವಸ್ತುಗಳಿಗೂ ಆಮದು ಮಾಡುವ ಅನಿವಾರ್ಯತೆ ಎದುರಾಗಿದೆ. ಇದು ಮುಂದಿನ ದಿನಗಳಲ್ಲಿ ಸವಾಲಾಗಿ ಪರಿಣಮಿಸಿದ್ದು, ಇದನ್ನು ಅಭಿವೃದ್ಧಿಯ ದೃಷ್ಟಿಯಿಂದ ಸವಾಲಾಗಿ ಪರಿಗಣಿಸಬೇಕು ಎಂದು ವಿದ್ಯಾರ್ಥಿಗಳಿಗೆ ಪ್ರೊ.ಯು. ಆರ್.ರಾವ್ ಸಲಹೆ ನೀಡಿದರು.
ವಿಜ್ಞಾನಿ ಡಾ.ಕೆ.ವಿ.ರಾವ್, ಯೆನೆಪೊಯ ವಿವಿ ಕುಲಸಚಿವ ಡಾ.ಸಿ.ವಿ.ರಘುವೀರ್, ಪ್ರಾಚಾರ್ಯ ಡಾ.ಸಿ.ಕೆ.ಮಂಜುನಾಥ್ ಉಪಸ್ಥಿತರಿದ್ದರು.