ಕನ್ನಡ ವಾರ್ತೆಗಳು

ಹೇರಿಕುದ್ರುವಿನಲ್ಲಿ ನಿಲ್ಲದ ಮರಳುಗಾರಿಕೆ : ಎಸಿ ದಾಳಿಯ ನಂತರೂ ಮುಂದುವರಿಕೆ

Pinterest LinkedIn Tumblr

ಕುಂದಾಪುರ : ಕಸ್ತೂರಿ ರಂಗನ್ ವರದಿ ಅನುಷ್ಟಾನ ಹಾಗೂ ಸಿ‌ಆರ್‌ಝೆಡ್ ನಿಯಮಗಳ ಅನುಷ್ಟಾನದ ಬಿಸಿ ಕರಾವಳಿಯುದ್ದಕ್ಕೂ ತಟ್ಟುತ್ತಿದ್ದರೆ, ಮರಳುಗಾರಿಕೆ ದಂಧೆ ಮಾತ್ರ ಎಗ್ಗಿಲ್ಲದೇ ಸಾಗುತ್ತಿರುವುದರ ಜೊತೆಗೆ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಬಂದಷ್ಟು ಬರಲಿ ಎನ್ನುವ ಕಾರಣವೊಡ್ಡಿ, ನದಿತೀರಗಳಲ್ಲಿ ಅಧಿಕಾರಿಗಳನ್ನೂ, ಕಾನೂನುಗಳನ್ನೂ ಉಲ್ಲಂಘಿಸಿ ಅಕ್ರಮ ಮರಳುಗಾರಿಕೆ ನಡೆಸುತ್ತಿರುವುದು ಮುಂದುವರಿದೆ. ಇದರ ಜೊತೆಗೆ ಮತ್ತೆ ಹೊಸ ಕಡು(ಮರಳು ಸಂಗ್ರಹದ ಜಾಗ)ಗಳು ತಲೆ ಎತ್ತುತ್ತಿದ್ದು, ರಸ್ತೆಯನ್ನೇ ಕಬಳಿಸುತ್ತಿರುವ ಘಟನೆಗಳು ನಡೆಯುತ್ತಿವೆ.

Kundapura_Sand_Minings

ಕುಂದಾಪುರ ತಾಲೂಕಿನ ಆನಗಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೇರಿಕುದ್ರು ಎಂಬ ಪುಟ್ಟ ಪ್ರದೇಶ ಇಂತಹುದೇ ಅಕ್ರಮ ಮರಳುಗಾರಿಕೆ ದಂಧೆಗೆ ಬಸವಳಿದು ಹೋಗಿದೆ. ನದೀ ತೀರದಲ್ಲಿರುವ ಕಾಂಡ್ಲವನಗಳು ನದೀಪಾಲಾಗುತ್ತಿವೆ. ಇದರ ಬೆನ್ನಿಗೇ ರಿಂಗ್ ರಸ್ತೆಯಲ್ಲಿ ಹಾಕಲಾಗಿದ್ದ ಡಾಮರನ್ನೇ ಕಿತ್ತು ಮರಳುಗಾರಿಕೆಗೆ ಬಳಸಿಕೊಳ್ಳುತ್ತಿರುವ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ.

ಸ್ಥಳೀಯ ಗ್ರಾಮ ಪಂಚಾಯಿತಿಯೂ ರಸ್ತೆ ಹದಗೆಟ್ಟಿರುವುದಕ್ಕೆ ಮಾತ್ರ ಪ್ರತಿಕ್ರಿಯಿಸುತ್ತಿದ್ದು, ಮುಂದಿನ ಬಾರಿ ದುರಸ್ತಿ ಮಾಡಲಾಗುತ್ತದೆ ಎನ್ನುವ ಸಬೂಬು ನೀಡುತ್ತಿದ್ದಾರೆಯೇ ಹೊರತು ಅಕ್ರಮ ಮರಳುಗಾರಿಕೆ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಹೇರಿಕುದ್ರು ರಿಂಗ್ ರಸ್ತೆಯನ್ನು ಸುಮಾರು ಮೂವತ್ತಕ್ಕೂ ಹೆಚ್ಚು ಕುಟುಂಬಗಳು ಅವಲಂಭಿಸಿದ್ದು, ಇಲ್ಲಿ ನಾಲ್ಕು ಚಕ್ರದ ವಾಹನಗಳು ಬಿಡಿ, ಬೈಕ್ ಸಂಚಾರಕ್ಕೂ ಬವಣೆ ಪಡಬೇಕಾಗಿದೆ. ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡೇ ಐದಕ್ಕೂ ಹೆಚ್ಚು ಕಡೆಗಳಲ್ಲಿ ಮರಳುಗಾರಿಕೆ ನಡೆಯುತ್ತಿದ್ದು, ಟೆಂಪೊ, ಲಾರಿಗಳು ಸೇರಿದಂತೆ 12, 14 ಚಕ್ರದ ಲಾರಿಗಳೂ ಇಲ್ಲಿ ನಿತ್ಯ ಮರಳು ಸಾಗಿಸುತ್ತಿವೆ. ಅತೀ ಚಿಕ್ಕದಾದ ರಸ್ತೆಯಲ್ಲಿ ಲಾರಿಗಳೇ ತುಂಬಿಹೋಗುತ್ತಿವೆ. ಇಲ್ಲಿ ಜಿಲ್ಲಾಧಿಕಾರಿಯವರ ಆದೇಶವನ್ನೂ ಉಲ್ಲಂಘಿಸಲಾಗುತ್ತಿದ್ದು, ಕಳೆದ ಒಂದು ತಿಂಗಳಲ್ಲಿ ಎರಡು ಮೂರು ಹೊಸ ಮರಳುಗಾರಿಕೆ ಅಡ್ಡೆಗಳು ಎದ್ದು ನಿಂತಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಪ್ರತೀ ಟೆಂಪೋವೊಂದಕ್ಕೆ ರೂ. 50, ಲಾರಿಯೊಂದಕ್ಕೆ 100, ಘನ ಲಾರಿಗೆ ರೂ 150 ರಂತೆ ತೆರಿಗೆ ಸಂಗ್ರಹಿಸಲಾಗುತ್ತಿದ್ದು, ಪ್ರತಿದಿನ ಏನಿಲ್ಲವೆಂದರೂ ಸುಮಾರು 25 ರಿಂದ 30 ಲಾರಿಗಳು ಮರಳು ಸಾಗಿಸುತ್ತಿದ್ದು, ಏನಿಲ್ಲವೆಂದರೂ ದಿನವೊಂದಕ್ಕೆ ಎರಡೂವರೆ ಸಾವಿರ ರೂಪಾಯಿ ಸಂಗ್ರಹವಾಗುತ್ತಿದ್ದು, ಮಾಸಿಕ ರೂ ಅರವತ್ತು ಸಾವಿರಕ್ಕೂ ಮಿಕ್ಕಿ ಮರಳು ಶುಲ್ಕ ಸಂಗ್ರವಾಗುತ್ತಿದೆ. ಆದರೆ ಈ ಹಣವನ್ನು ಬೇರೆ ಕಾಮಗಾರಿಗಳಿಗೆ ವಿನಿಯೋಗಿಸಲಾಗುತ್ತಿದೆ ಎನ್ನುವ ಆರೋಪವೂ ಕೇಳಿ ಬರುತ್ತಿದೆ.

ಎಸಿ ದಾಳಿಯ ನಂತರವೂ ಮರಳುಗಾರಿಕೆ: ಬುಧವಾರ ಸಂಜೆ ಜಿಲ್ಲಾಧಿಕಾರಿಗಳ ಸೂಚನೆ ಮೇಲೆ ಕುಂದಾಪುರ ಎಸಿ ಚಾರುಲತಾ ಸೋಮಾಲ್ ದಾಳಿ ನಡೆಸಿ ಲಾರಿಗಳ ಕೀಲಿ ವಶಕ್ಕೆ ತೆಗೆದುಕೊಂಡಿದ್ದರೂ ಮರಳುಗಾರಿಕೆ ಮಾತ್ರ ಎಗ್ಗಿಲ್ಲದೇ ಮುಂದುವರೆಯುತ್ತಿದೆ. ಬುಧವಾರ ರಾತ್ರಿಯೇ ಮರಳುಗಾರಿಕೆ ಆರಂಭಗೊಂಡಿದ್ದು ಕೇವಲ ಜಿಲ್ಲಾಧಿಕಾರಿ ಸೂಚನೆಗಷ್ಟೇ ಎಸಿ ದಾಳಿ ನಡೆಸಿಂದಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Write A Comment