ಕನ್ನಡ ವಾರ್ತೆಗಳು

ಅಧ್ಯಾತ್ಮ ಸಂಪತ್ತು ಶಾಂತಿ ನೆಮ್ಮದಿಗೆ ಮೂಲ : ಶ್ರೀ ರಂಭಾಪುರಿ ಜಗದ್ಗುರುಗಳು

Pinterest LinkedIn Tumblr

tumrkur_new_photo

ತುಮಕೂರು,ಜ.07 : ಭೌತಿಕ ಸಂಪತ್ತಿನಿಂದ ಶಾಶ್ವತ ಸುಖ ಸಿಗದು. ಅಧ್ಯಾತ್ಮದ ಸಂಪತ್ತು ಶಾಂತಿ ನೆಮ್ಮದಿಗೆ ಮೂಲ. ನೀತಿ ಧರ್ಮ ದರ್ಶನಗಳು ನಮ್ಮನ್ನು ರಕ್ಷಿಸುತ್ತವೆ ಹೊರತು ಬಂಧಿಸುವುದಿಲ್ಲವೆಂದು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ಅವರು ನಗರದ ಶ್ರೀಮತಿ ವಿಶಾಲಾಕ್ಷಮ್ಮ ಸದಾಶಿವಯ್ಯ ಸಭಾಭವನದಲ್ಲಿ ಆಯೋಜಿಸಿದ ಧನುರ್ಮಾಸ ಇಷ್ಟಲಿಂಗ ಮಹಾಪೂಜಾ ಹಾಗೂ ಧರ್ಮಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಹಸಿದವನಿಗೆ ಅನ್ನ ರುಚಿಸುವಂತೆ ಜ್ಞಾನದ ಹಂಬಲ ಉಳ್ಳವರಿಗೆ ಆಧ್ಯಾತ್ಮದ ಅರಿವು ಇರುತ್ತದೆ. ಹಣದಿಂದ ಹಾಸಿಗೆ ಕೊಳ್ಳಬಹುದು. ನಿದ್ರೆಯನ್ನಲ್ಲ. ಹಣದಿಂದ ಔಷಧಿ ಕೊಳ್ಳಬಹುದು ಆರೋಗ್ಯವನ್ನಲ್ಲ. ಹಣದಿಂದ ಮನೆ ಕೊಳ್ಳಬಹುದು. ಆದರೆ ಮನದ ಶಾಂತಿ ಸಿಗಲಾರದು. ಹಣದಿಂದ ಪುಸ್ತಕ ಕೊಳ್ಳಬಹುದು. ಆದರೆ ಜ್ಞಾನ ಕೊಳ್ಳಲಾಗದು. ಬದುಕು ಭಗವಂತ ಕರುಣಿಸಿದ ಹೂದೋಟ. ಅಲ್ಲಿ ಶಾಂತಿ ಸಮಾಧಾನ, ದಯೆ, ಕಾರುಣ್ಯ, ವಾತ್ಸಲ್ಯ ಎಂಬ ದೈವಿಗುಣಗಳನ್ನು ಬೆಳೆಸಬೇಕಾಗಿದೆ. ಮನೆಯ ಅಂಗಳ ನಾವಾಗಲಿ ಬೇರೆ ಯಾರೆ ಆಗಲಿ ಹಸನಗೊಳಿಸಬಹುದು. ಆದರೆ ಮನದ ಅಂಗಳವನ್ನು ನಾವೇ ಸ್ವಚ್ಛಗೊಳಿಸಬೇಕಾಗುತ್ತದೆ. ಇಂದಿನ ದಿನಗಳಲ್ಲಿ ವಿದ್ಯೆ ಗಳಿಸಿದರೂ ವಿನಯ ಇಲ್ಲದಂತಾಗಿದೆ. ವಿನಯವಿದ್ದರೂ ಶ್ರದ್ಧೆಯಿಲ್ಲದಂತಾಗಿದೆ. ವಿಜ್ಞಾನ ಬೆಳೆದಂತೆ ಸಮಾಧಾನ ಇಲ್ಲದಂತಾಗಿ ಸಂಬಂಧಗಳು ಕೆಡುತ್ತಲಿವೆ. ಶರೀರ ಸದೃಢವಾಗಿದ್ದರೂ ಚಿತ್ತಸ್ವಾಸ್ಥ್ಯ ಇಲ್ಲದಂತಾಗಿದೆ. ಮಾತು ಬಂದು ಕೃತಿ ಇಲ್ಲದಂತಾಗಿದೆ. ಮಾತು ಹೆಚ್ಚಾಗಿ ಸಾಧನೆ ಶೂನ್ಯವಾಗುತ್ತಿವೆ. ಜಾತಿ ಬಂದು ಮಾನವೀಯ ಸಂಬಂಧಗಳು ಸಡಿಲಗೊಳ್ಳುತ್ತಿರುವುದು ನೋವಿನ ಸಂಗತಿ. ವೀರಶೈವ ಧರ್ಮಸಿದ್ಧಾಂತದಲ್ಲಿ ಸತ್ಯ ಶುದ್ಧ ಅರಿವು ಮತ್ತು ನಿರಂತರ ಪ್ರಯತ್ನದಿಂದ ಎಲ್ಲದಕ್ಕೂ ಪರಿಹಾರ ಕಂಡುಕೊಳ್ಳಬಹುದೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದಾರೆ ಎಂದರು.

ಬೀದರ ಜಿಲ್ಲೆ ಹುಮನಾಬಾದ ದುಬಲಗುಂಡಿಯಲ್ಲಿ ಜರುಗುವ ಶ್ರೀ ರಂಭಾಪುರಿ ಜಗದ್ಗುರುಗಳವರ ೨೪ನೇ ವರ್ಧಂತಿ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಸಿ.ಐ.ಟಿ. ವಿದ್ಯಾಸಂಸ್ಥೆ ಕಾರ್ಯದರ್ಶಿ ಜ್ಯೋತಿ ಗಣೇಶ ಬಿಡುಗಡೆ ಮಾಡಿದರು. ಸಾವಿರ ಉಪನ್ಯಾಸಗಳ ಸರದಾರ ಖ್ಯಾತಿಯ ಜಿ.ಎಸ್.ಫಣಿಭೂಷಣ ‘ಜೀವನದಲ್ಲಿ ಮೌಲ್ಯಗಳು ಮತ್ತು ಹಾಸ್ಯ’
ವಿಷಯವಾಗಿ ಉಪನ್ಯಾಸ ನೀಡಿದರು.

ಮುಖ್ಯ ಅತಿಥಿಗಳಾಗಿ ಶಾಸಕ ಡಾ. ಎಸ್.ರಫೀಕ ಅ.ಭಾ.ವೀರಶೈವ ಮಹಾಸಭಾ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ಸಿ.ವಿ.ಮಹದೇವಯ್ಯ ಪಾಲ್ಗೊಂಡಿದ್ದರು. ತೆಂಕಲಗೂಡು ಬೃಹನ್ಮಠದ ಡಾ.ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ‘ಇಷ್ಟಲಿಂಗಾರ್ಚನೆ ಮಹತ್ವ’ ಕುರಿತು ಉಪದೇಶಾಮೃತ ನೀಡಿದರು. ಕಲಾದಗಿ ಪಂಚಗೃಹ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು, ದೊಡ್ಡಗುಣಿ ರೇವಣಸಿದ್ಧೇಶ್ವರ ಶಿವಾಚಾರ್ಯರು, ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯರು, ಬೆಳ್ಳಾವಿ ರುದ್ರಮುನಿ ಶಿವಾಚಾರ್ಯರು ಅಂಬಲದೇವರಹಳ್ಳಿ ಉಜನೀಶ್ವರ ಶಿವಾಚಾರ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಗುರುರಕ್ಷೆ: ತುಮಕೂರಿನ ಟಿ.ಎಂ.ಪರಮೇಶ್, ಟಿ.ಪಿ.ರೇಣುಕಾರಾಧ್ಯ, ಎ.ಆರ್. ರೇಣುಕಾಪ್ರಸಾದ್, ಜ್ಯೋತಿಷಿ ಗೌರಿಶಂಕರಶಾಸ್ತ್ರಿ, ಗಣಪತಿ ದೇವಸ್ಥಾನದ ನಟರಾಜ ಇವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿದರು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ ಮಾಡಿದರು. ಗದಗಿನ ವೀರೇಶ ಕಿತ್ತೂರ ಭಕ್ತಿಗೀತೆ ಹಾಡಿದರು. ಬಿ.ಎನ್. ಕರುಣಾಕರ್ ಎಲ್ಲರನ್ನೂ ಸ್ವಾಗತಿಸಿದರು. ಜಿ.ಎಸ್. ಸಿದ್ಧರಾಜು ನಿರೂಪಿಸಿದರು.

Write A Comment