ಕನ್ನಡ ವಾರ್ತೆಗಳು

ವಿಶ್ವ ತುಳುವೆರೆ ಪರ್ಬ :ಬಿಷಪ್ ಡಾ.ಅಲೋಶಿಯಸ್ ಪಾವ್ಲ್ ಡಿಸೋಜರಿಂದ ತುಳುವೆರೆ ಐಸಿರಿ ಪಂಥ ಉದ್ಘಾಟನೆ

Pinterest LinkedIn Tumblr

Tulu_isiri_bishap

ಮಂಗಳೂರು (ಅಡ್ಯಾರ್, ಸಹ್ಯಾದ್ರಿ ಕಾಲೇಜು ಆವರಣ, ಎಸ್.ಆರ್.ಹೆಗ್ಡೆ ವೇದಿಕೆ) ಡಿ.14: ತುಳುನಾಡು ಶಾಂತಿ, ಸೌಹಾರ್ದ, ಸಹಬಾಳ್ವೆ, ಏಕತೆಗೆ ಹೆಸರುವಾಸಿಯಾದ ಪ್ರದೇಶ. ಇತ್ತೀಚಿನ ದಿನಗಳಲ್ಲಿ ಈ ಭಾಗದಲ್ಲಿ ಕೋಮು ಸೌಹಾರ್ದ ಹದಗೆಡುತ್ತಿರುವುದು ನಿಜಕ್ಕೂ ದುಃಖದ ಸಂಗತಿ ಎಂದು ಮಂಗಳೂರು ಕ್ರೈಸ್ತ ಧರ್ಮಪ್ರಾಂತದ ಧರ್ಮಾಧ್ಯಕ್ಷ ಡಾ.ಅಲೋಶಿಯಸ್ ಪಾವ್ಲ್ ಡಿಸೋಜ ತೀವ್ರ ಕಳವಳ ವ್ಯಕ್ತಪಡಿಸಿದರು.

ಅಖಿಲ ಭಾರತ ತುಳು ಒಕ್ಕೂಟ (ರಿ)ದ ಬೆಳ್ಳಿಹಬ್ಬದ ಪ್ರಯುಕ್ತ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಸಹಯೋಗದಲ್ಲಿ ಅಡ್ಯಾರ್‌ನಲ್ಲಿ ನಡೆಯುತ್ತಿರುವ ವಿಶ್ವ ತುಳುವೆರೆ ಪರ್ಬದ ಎರಡನೆ ದಿನವಾದ ಶನಿವಾರ ‘ತುಳುವೆರೆ ಐಸಿರಿ ಪಂಥ’ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ತುಳು ಭಾಷೆ, ಸಂಸ್ಕೃತಿಗೆ ಕ್ರೈಸ್ತ ಸಮುದಾಯದ ಕೊಡುಗೆ ಅಪಾರ. ತುಳು ನನ್ನ ಮೆಚ್ಚಿನ ಭಾಷೆ. ಅಷ್ಟೇ ಅಲ್ಲ, ವ್ಯಾವಹಾರಿಕ ಭಾಷೆಯೂ ಹೌದು. ಇಲ್ಲಿನ ಸಂಸ್ಕೃತಿ, ಪರಂಪರೆ, ಏಕತೆ ಬಗ್ಗೆ ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಒಳ್ಳೆಯ ಮಾತುಗಳು ಕೇಳಿಬರುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ತುಳುವರು ವಿದೇಶಕ್ಕೆ ಭೇಟಿ ನೀಡಿದಾಗ ಒಡಕಿನ ಬಗ್ಗೆ ಪ್ರಶ್ನೆಗಳು ಕೇಳಿ ಬರುತ್ತಿವೆ. ಇದು ಎಲ್ಲರೂ ತಲೆ ತಗ್ಗಿಸುವಂತಹ ವಿಚಾರ. ಹಾಗಾಗಿ ಸಮ್ಮೇಳನಗಳ ಮೂಲಕ ಸಹೋದರತ್ವ ಭಾವನೆ, ಏಕತೆಯ ವಾತಾವರಣ ಸೃಷ್ಟಿಸಬೇಕು ಎಂದು ಬಿಷಪ್ ಕರೆ ನೀಡಿದರು.

ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ಯು.ದೇವಾಡಿಗ, ಗೌರವಾಧ್ಯಕ್ಷ ದಾಮೋದರ ನಿಸರ್ಗ, ಸಹ್ಯಾದ್ರಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಮಂಜುನಾಥ ಭಂಡಾರಿ, ತುಳವೆರೆ ಪರ್ಬದ ಪದಾಧಿಕಾರಿಗಳಾದ ಅಡ್ಯಾರ್‌ಗುತ್ತು ಮಹಾಬಲ ಶೆಟ್ಟಿ, ಎ.ಸಿ.ಭಂಡಾರಿ, ಕದ್ರಿ ನವನೀತ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಪಾವೂರು ಇಗರ್ಜಿಯಲ್ಲಿ ತುಳುವಿನಲ್ಲಿ ಪ್ರಾರ್ಥನೆ : ಬಿಷಪ್

ಮಂಗಳೂರು ಧರ್ಮಪ್ರಾಂತ ವ್ಯಾಪ್ತಿಯ 145 ಇಗರ್ಜಿಗಳ ಪೈಕಿ ಮಂಜೇಶ್ವರ ಸಮೀಪದ ಪಾವೂರು ಇಗರ್ಜಿಯಲ್ಲಿ ಈಗಲೂ ತುಳುವಿನಲ್ಲಿ ಪ್ರಾರ್ಥನೆ ನಡೆಯುತ್ತಿದೆ. ನಿಜಕ್ಕೂ ಇದು ತುಳುವರು ಹೆಮ್ಮೆ ಪಡಬೇಕಾದ ಸಂಗತಿಯಾಗಿದೆ ಎಂದು ಬಿಷಪ್ ಡಾ.ಅಲೋಶಿಯಸ್ ಪಾವ್ಲ್ ಡಿಸೋಜ ಹೇಳಿದರು.
ತುಳುವಲ್ಲಿ ಭಾಷಣ: ಬಿಷಪ್ ಡಾ.ಅಲೋಶಿಯಸ್ ಪಾವ್ಲ್ ಡಿಸೋಜ ಸಂಪೂರ್ಣ ತುಳುವಿನಲ್ಲೇ ಶುಭ ಸಂದೇಶ ನೀಡಿದರು.

Write A Comment