ಕನ್ನಡ ವಾರ್ತೆಗಳು

ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ 8 ಕೋಟಿ ರೂ ಕಾಮಗಾರಿ ಯೋಜನೆಯ ಬಗ್ಗೆ ಸಮಾಲೋಚನೆ ಸಭೆ.

Pinterest LinkedIn Tumblr

bntwl_neews_photo_1

ಬಂಟ್ವಾಳ,ಡಿ.05: ತಾನು ಅಧ್ಯಕ್ಷ ಪದವಿಯಲ್ಲಿರುವುದು ರಾಜಕೀಯ ಮಾಡಲಿಕ್ಕಲ್ಲ, ತಾರತಮ್ಯ ನೀತಿ ಅನುಸರಿಸದೆ, ಪುರಸಭಾ ವ್ಯಾಪ್ತಿಯಲ್ಲಿ ಅಭಿವೃದ್ದಿ ಕಾರ್ಯನಡೆಸುವುದೇ ನನ್ನ ಗುರಿ ಎಂದು ಬಂಟ್ವಾಳ ಪುರಸಭಾ ಧ್ಯಕ್ಷೆ ವಸಂತಿಚಂದಪ್ಪ ಹೇಳಿದ್ದಾರೆ.ಅಧಿಕಾರಕ್ಕೆ ಬಂದು 1 ವರ್ಷ 2 ತಿಂಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ, ಈ ಅವಧಿಯಲ್ಲಾದ ಅಭಿವೃದ್ದಿ ಕಾರ್ಯಗಳ ಬಗ್ಗೆ ಅವರು ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು. ಪುರಸಭೆಯಲ್ಲಿ ಮಧ್ಯವರ್ತಿಗಳ ಕಾಟವಿರುವ ಬಗೆಗಿನ ಸಾರ್ವಜನಿಕ ದೂರಿನ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಂತಹಾ ಯಾವುದೇ ದೂರು ತನ್ನ ಗಮನಕ್ಕೆ ಬಂದಿಲ್ಲ, ಈ ಬಗ್ಗೆ ಪರಿಶೀಲನೆ ನಡೆಸಿ, ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗುವುದು ಎಂದರು.

ಪುರಸಭೆಗೆ ಸ್ಥಾಯಿ ಸಮಿತಿ ರಚಿಸುವ ನಿಟ್ಟಿನಲ್ಲಿ ಈಗಾಗಲೇ ಸಚಿವ ರಮಾನಾಥ ರೈ ಯವರೊಂದಿಗೆ ಚರ್ಚಿಸಲಾಗಿದ್ದು, ಮುಂದಿನ ಸಾಮಾನ್ಯ ಸಭೆಯಲ್ಲಿ ಸ್ಥಾಯಿಸಮಿತಿ ರಚಿಸುವ ಕುರಿತಾಗಿ ಮುಂದಡಿಯಿಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅಧ್ಯಕ್ಷೆ ವಸಂತಿಯವರು, ಅಗತ್ಯವಿರುವೆಡೆ ಆದ್ಯತೆಯ ನೆಲೆಯಲ್ಲಿ ಪುರಸಭೆ ವತಿಯಿಂದ ಸಂಘ ಸಂಸ್ಥೆಗಳ ಸಹಕಾರ ಪಡೆದು ಬಸ್ ತಂಗುದಾಣ ರಚಿಸಲು ಯೋಜನೆ ರೂಪಿಸಲಾಗುವುದು ಎಂದರು.

ಪುರಸಭಾ ಸಾಮಾನ್ಯ ಸಭೆಗೆ ವಿಪಕ್ಷ ಗೈರು ಕುರಿತಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅಧ್ಯಕ್ಷೆ, ಮುಂದಿನ ಸಭೆಗೆ ವಿಪಕ್ಷ ಸದಸ್ಯರು ಹಾಜರಾಗುವಂತೆ ಅವರ ಮನವೊಲಿಸುವ ಕಾರ್ಯ ನಡೆದಿದೆ, ಗುತ್ತಿಗೆದಾರರೊಬ್ಬರ ಹೆಸರಿನಲ್ಲಿ ಅಕ್ರಮ ಟೆಂಡರ್ ಕರೆದಿರುವ ವಿಚಾರಕ್ಕೆ ಸಂಬಂಧಿಸಿದ ಪ್ರಶ್ನೆಗೆ ಅಧ್ಯಕ್ಷೆ ವಸಂತಿ ಯವರು ಸ್ಪಷ್ಟ ಉತ್ತರ ನೀಡದೆ ಜಾರಿಕೊಂಡರು.

ಪುರಸಭಾ ವ್ಯಾಪ್ತಿಯಲ್ಲಿ 8 ಕೋಟಿ ರೂ ಕಾಮಗಾರಿ: 
ಕಳೆದ 14 ತಿಂಗಳ ಅವಧಿಯಲ್ಲಿ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ 2013-14  ನೇ ಸಾಲಿಗೆ ವಿವಿಧ ಯೋಜನೆಯಡಿ ಬಿಡುಗಡೆಯಾದ ಒಟ್ಟು 8.14 ಕೋಟಿ ರೂ ಅನುದಾನದಲ್ಲಿ ಅಭಿವೃದ್ದಿ ಕಾಮಗಾರಿಗಳಿಗೆ 3.77 ಕೋಟಿ ರೂ ವ್ಯಯಮಾಡಲಾಗಿದ್ದು,4.36  ಕೋಟಿ ರೂ ವೆಚ್ಚದ ಕಾಮಗಾರಿಗಳಲ್ಲಿ ಕೆಲವು ಪ್ರಗತಿಯಲ್ಲಿದ್ದರೆ, ಕೆಲವು ಟೆಂಡರ್ ಹಂತದಲ್ಲಿದೆ ಎಂದು ಪುರಸಭಾ ಧ್ಯಕ್ಷೆ ವಸಂತಿ ಚಂದಪ್ಪ ವಿವರಿಸಿದರು.

ಹಾಗೆಯೇ ಶೇ.22.75 ರ ಯೋಜನೆಯಡಿ 54.63  ಲಕ್ಷರೂ ವೆಚ್ಚದಲ್ಲಿ ಸ್ವ ಉದ್ಯೋಗ, ಅಡುಗೆ ಅನಿಲ ವಿತರಣೆ, ಮನೆ ದುರಸ್ತಿ, ಶೌಚಾಲಯ, ಆರೋಗ್ಯ ವಿಮೆ, ಶಿಕ್ಷಣ, ಉನ್ನತ ಶಿಕ್ಷಣ, ಹೊಸಮನೆ ನಿರ್ಮಾಣ, ಟೈಲರಿಂಗ್, ನಳ್ಳಿನೀರು ಸಂಪರ್ಕ ಹಾಗೂ ವಿವಿಧ ಕಾಮಗಾರಿಗಳಿಗೆ ವ್ಯಯಮಾಡಲಾಗಿದೆ ಎಂದ ಅವರು, ಶೇ.೭.೨೫ ರಲ್ಲಿ ಶೌಚಾಲಯ ಹಾಗೂ ವಿಧ್ಯಾಭಾಸಕ್ಕೆ , ಶೇ 3 ರ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ವಿತರಿಸಿದ ವಿವಿಧ ಸವಲತ್ತುಗಳ ಬಗ್ಗೆ ವಿವರ ನೀಡಿದರು. ಉಪಾಧ್ಯಕ್ಷೆ ಯಾಸ್ಮೀನ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರುಗಳಾದ ಅಬ್ಬಾಸ್ ಆಲಿ, ಮಾಯಿಲಪ್ಪ ಸಾಲ್ಯಾನ್, ಪುರಸಭೆಯ ಕಾಂಗ್ರೇಸ್ ಬೆಂಬಲಿ ಸದಸ್ಯರು, ನಾಮನಿರ್ದೇಶಿತ ಸದಸ್ಯರು ಉಪಸ್ಥಿತರಿದ್ದರು.

Write A Comment