ಮಂಗಳೂರು, ಡಿ.5 : ಭೂಗತ ಪಾತಕಿ ವಿಕ್ಕಿ ಶೆಟ್ಟಿಯ ಸಹಚರರು ಎನ್ನಲಾದ ಎಂಟು ಮಂದಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಗುರುವಾರ ತಣ್ಣೀರು ಬಾವಿ ಬೀಚ್ ಬಳಿ ಬಂಧಿಸಿದ್ದಾರೆ. ಸುರತ್ಕಲ್ ಸದಾಶಿವ ನಗರದ ಮನೋಜ್‌ಕುಮಾರ್(38), ಮೂಡುಶೆಡ್ಡೆ ಶಿವನಗರದ ರಾಘವೇಂದ್ರ ಯಾನೆ ರಘು(30), ಬಜಾಲ್‌ನ ಸಂತೋಷ್ ಪೂಜಾರಿ ಯಾನೆ ಪೊರ್ಲು ಸಂತು(33) ಜೆಪ್ಪಿನಮೊಗರುವಿನ ಭರತೇಶ್(30), ಬೈಕಂಪಾಡಿಯ ನವೀನ್ ಯಾನೆ ಮೈಕಲ್(26), ಸುರತ್ಕಲ್ ಗುಡ್ಡೆಕೊಪ್ಪಳದ ಸಂದೇಶ್ ಕರ್ಕೆರಾ(29), ಸುರತ್ಕಲ್ ಸದಾಶಿವ (27), ಹೊಸಬೆಟ್ಟುವಿನ ವರ್ಣಿತ್ ಶೆಟ್ಟಿ(30) ಬಂಧಿತರು. ಆರೋಪಿಗಳಿಂದ 4 ತಲವಾರು, 3 ಚೂರಿ, 15,590 ರೂ., 8 ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಆರೋಪಿಗಳು ಶ್ರೀಮಂತ ವ್ಯಕ್ತಿಯ ದರೋಡೆಗೆ ಹಾಗೂ ರೌಡಿ ಬಿಜೈ ರಾಜಾನನ್ನು ಕೊಲೆಗೈದ ಆರೋಪಿ ಬೊಕ್ಕಪಟ್ಣದ ಭರತೇಶ್ ಎಂಬಾತನ ಕೊಲೆ ಮಾಡುವ ಸಂಚು ರೂಪಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪಡೆದು ದಾಳಿ ನಡೆಸಲಾಗಿತ್ತು. ತಣ್ಣೀರು ಬಾವಿ ಬೀಚ್‌ನ ಸಮೀಪದಿಂದ ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ಪೈಕಿ ಮನೋಜ್, ನವೀನ್ ಎಂಬವರು ಈ ಹಿಂದೆ ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಸೈಮನ್ ಮಚಾದೋ ಹಾಗೂ ಪಣಂಬೂರು ವ್ಯಾಪ್ತಿಯಲ್ಲಿ ಈ ಹಿಂದೆ ನಡೆದ ಸಂದೀಪ್ ಎಂಬವರ ಕೊಲೆ ಪ್ರಕರಣಗಳ ಆರೋಪಿಗಳಾಗಿದ್ದಾರೆ. ಸಂದೇಶ್ ಕರ್ಕೆರಾ, ಚೇತನ್ ಎಂಬವರು ಸಂದೀಪ್ ಕೊಲೆ ಪ್ರಕರಣದಲ್ಲಿ, ರಘು ಎಂಬಾತನು ಈ ಹಿಂದೆ ಕಾವೂರು ಠಾಣಾ ವ್ಯಾಪ್ತಿಯಲ್ಲಿ ನಡೆದ ರೌಡಿ ಮುರುಗೇಶ್ ಮತ್ತು ಆತನ ಭಾವ ಉಪೇಂದ್ರ ಎಂಬವರ ಕೊಲೆ ಪ್ರಕರಣದ ಆರೋಪಿಗಳಾಗಿದ್ದಾರೆ.
ಆರೋಪಿ ಭರತೇಶ್ ಮತ್ತು ಸಂತೋಷ್ ಪೂಜಾರಿ ಎಂಬವರು ಈ ಹಿಂದೆ ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದ ಹಲ್ಲೆ ಪ್ರಕರಣ ಹಾಗೂ ಕೋಮು ಗಲಭೆ ಪ್ರಕರಣಗಳ ಆರೋಪಿಗಳಾಗಿದ್ದಾರೆ. ಸಿಸಿಬಿ ಘಟಕದ ಇನ್ಸ್‌ಪೆಕ್ಟರ್ ವೆಲೆಂಟೈನ್ ಡಿಸೋಜ, ಪಿಎಸ್ಸೈ ಶ್ಯಾಮ್‌ಸುಂದರ್ ಹಾಗೂ ಸಿಬ್ಬಂದಿ ಬಂಧನ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.