ಮಂಗಳೂರು : ಮಹಿಳೆಯರನ್ನು ಪೂಜಿಸುವ ಹಾಗೂ ಗೌರವಿಸುವಂತಹ ನಮ್ಮ ದೇಶದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವುದು ದುರಾದೃಷ್ಟಕರ. ಇದನ್ನು ತಡೆಗಟ್ಟಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆ ವಿನಹ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರ ಹೇಳಿಕೆಯಂತೆ ಅತ್ಯಾಚಾರಿಗಳ ಕೈ ಕತ್ತರಿಸುವುದಲ್ಲ.. ಅತ್ಯಾಚಾರ ಮಾಡಿದವರ ಕೈ ಕತ್ತರಿಸಬೇಕು. ಅದರ ಖರ್ಚು ವೆಚ್ಚವನ್ನು ಶ್ರೀರಾಮ ಸೇನೆ ಭರಿಸುತ್ತದೆ ಎಂಬುದಾಗಿ ಮುತಾಲಿಕ್ ನೀಡಿರುವ ಹೇಳಿಕೆ ಇನ್ನೊಂದು ಕ್ರೂರತೆಯಾಗಿದ್ದು, ಇಂಥ ಹೇಳಿಕೆಯನ್ನು ನಾನು ಖಂಡಿಸುತ್ತೇನೆ ಎಂದು ಕೇಂದ್ರದ ಮಾಜಿ ಸಚಿವ ಬಿ.ಜನಾರ್ಧನ ಪೂಜಾರಿ ಹೇಳಿದ್ದಾರೆ.
ಸೋಮವಾರ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಬ್ ದಾಳಿ ಮೂಲಕ ಮಹಿಳೆಯರ ಮೇಲೆ ಮುತಾಲಿಕ್ ಅವರ ಸಂಘಟನೆ ಯಾವ ರೀತಿ ದೌರ್ಜನ್ಯ ನಡೆಸಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಈ ರೀತಿಯ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದಂತಹ ಸಂಘಟನೆಯ ಮುಖ್ಯಸ್ಥರು ಇದೀಗ ಮಹಿಳೆಯರ ಪರ ಮಾತನಾಡುವಾಗ ಹಿಂಸೆಯನ್ನು ವಿರೋಧಿಸಬೇಕೆ ವಿನಹ ಹಿಂಸೆ ಮಾಡುವಂತೆ ಪ್ರಚೋದಿಸಬಾರದು ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ 3 ವರ್ಷದ ಮಗುವಿನಿಂದ ಹಿಡಿದು ವಯೋವೃದ್ಧೆಯರನ್ನು ಬಿಡದೆ ನಿರಂತರವಾಗಿ ಅತ್ಯಾಚಾರ ಪ್ರಕರಣಗಳು ದಾಖಲಾಗಿತ್ತಿದೆ.. ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿ ಸರಕಾರ ಕೂಲಂಕುಷ ತನಿಖೆ ನಡೆಸಬೇಕು. ತಪ್ಪಿತ್ತಸ್ತರ ವಿರುದ್ಧ ಕಠಿಣ ಕಾನೂನು ಕ್ರಮ ಜರೂಗಿಸ ಬೇಕು. ಆದರೆ ಇಂತಹ ಪ್ರಕರಣಗಳನ್ನು ಸಿಓಡಿ ಅಥವಾ ಸಿಬಿಐಗೆ ಒಪ್ಪಿಸದೆ ನಮ್ಮ ಪೊಲೀಸರೆ ಅವಸರ ಮಾಡದೆ ಎಲ್ಲಾ ಪುರಾವೆಗಳನ್ನು ಕಲೆ ಹಾಕಿಕೊಂಡು ನೈಜ್ಯ ಆರೋಪಿಗಳನ್ನು ಪತ್ತೆಹಚ್ಚ ಬೇಕು ಎಂದು ಸಲಹೆ ನೀಡಿದ ಪೂಜಾರಿಯವರು ಪ್ರಕರಣದಲ್ಲಿ ಆರೋಪಿಗಳು ಸುಲಭವಾಗಿ ಪಾರಾಗಲು ಸಾದ್ಯವಾಗುವ ರೀತಿಯಲ್ಲಿ ವಾದ ಮಂಡಿಸಲು ವಿಫಲರಾಗುವ ಪ್ರಾಸಿಕ್ಯೂಟರ್ ಮೇಲೆಯೂ ಕ್ರಮ ಜರಗಿಸಬೇಕು ಎಂದು ಪೂಜಾರಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕುದ್ರೋಳಿ ಶ್ರೀ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್ ಸಾಯಿರಾಂ, ಉಪಾಧ್ಯಕ್ಷ ರಾಘವೇಂದ್ರ ಕೂಳೂರು, ಕೋಶಾಧಿಕಾರಿ ಪದ್ಮರಾಜ್, ಆರ್ ( ಎಡ್ವಕೇಟ್), ಟ್ರಸ್ಟಿಗಳಾದ ಡಾ. ಬಿ.ಜಿ ಸುವರ್ಣ, ಹರಿಕೃಷ್ಣ ಬಂಟ್ವಾಳ್, ದೇವದಾಸ್, ದೇವೇಂದ್ರ ಪೂಜಾರಿ, ಮಹೇಶ್ಚಂದ್ರ, ಲೀಲಾಕ್ಷ ಕರ್ಕೇರ ಮುಂತಾದವರು ಉಪಸ್ಥಿತರಿದ್ದರು.