
ಬೆಂಗಳೂರು: ಕಳೆದ ಎರಡು ಬಾರಿ ಸಂಪುಟ ವಿಸ್ತರಣೆಯಾದಾಗ ಅವಕಾಶ ವಂಚಿತರಾಗಿದ್ದ ಬಿಜೆಪಿ ಹಿರಿಯ ಶಾಸಕ ಉಮೇಶ್ ಕತ್ತಿಗೆ ಈ ಬಾರಿ ಅದೃಷ್ಟ ಒಲಿದು ಬಂದಿದೆ. ನಾಳೆ ನಡೆಯಲಿರುವ ಸಂಪುಟ ವಿಸ್ತರಣೆಯಲ್ಲಿ ಉಮೇಶ್ ಕತ್ತಿ ಸಚಿವರುವುದು ಖಚಿತವಾಗಿದೆನ್ನಲಾಗುತ್ತಿದೆ.
ನಾಳೆ ಸಂಜೆ 4ಕ್ಕೆ ನೂತನ ಸಚಿವರ ಪದಗ್ರಹಣ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಉಮೇಶ್ ಕತ್ತಿಗೆ ಸಿಎಂ ಬುಲಾವ್ ನೀಡಿದ್ದಾರೆ. ಸಿಎಂ ಸೂಚನೆ ಮೇರೆಗೆ ಕತ್ತಿ ಬೆಳಗಾವಿಯಿಂದ ಬೆಂಗಳೂರಿಗೆ ಹೊರಟಿದ್ದಾರೆ. ಇಂದು ಸಂಜೆ ಸಿಎಂ ಬಿಎಸ್ವೈ ಅವರನ್ನು ಕತ್ತಿ ಭೇಟಿಯಾಗಲಿದ್ದಾರೆ.
ಕಳೆದ ಬಾರಿ ಸಂಪುಟ ವಿಸ್ತರಣೆಯಾದಾಗ ಉಮೇಶ್ ಕತ್ತಿ ಹೆಸರು ಕೈಬಿಡಲಾಗಿತ್ತು. ಇದರಿಂದ ಕತ್ತಿ ಸಹಜವಾಗಿಯೇ ಬೇಸರಿಸಿಕೊಂಡಿದ್ದರು. ಮುಂದಿನ ದಿನಗಳಲ್ಲಿ ಉಮೇಶ್ ಕತ್ತಿ ಅವರಿಗೆ ಸಚಿವ ಸ್ಥಾನ ಸಿಗುವುದು ಪಕ್ಕಾ ಎಂದು ಸ್ವತಃ ಸಿಎಂ ಬಿಎಸ್ ಯಡಿಯೂರಪ್ಪ ಅವರೇ ಮಾಧ್ಯಮಗಳಿಗೆ ತಿಳಿಸಿದ್ದರು. ಈ ಬಾರಿಯ ವಿಸ್ತರಣೆಯಲ್ಲಿ ಕತ್ತಿಯನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಸಿಎಂ ಮನಸ್ಸು ಮಾಡಿದ್ದಾರೆ.
ಮೂವರು ಹಾಲಿ ಸಚಿವರನ್ನು ಸಂಪುಟದಿಂದ ಕೈಬಿಡಲಾಗುತ್ತಿದೆ. ಅಬಕಾರಿ ಸಚಿವ ಆರ್ ನಾಗೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಮತ್ತು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಸಚಿವ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗುತ್ತಿದೆ. ಇನ್ನೊಂದು ಮೂಲದ ಪ್ರಕಾರ, ನಾಳೆ ಸಂಜೆ ನಾಲ್ವರು ಶಾಸಕರು ಮಂತ್ರಿಮಂಡಲಕ್ಕೆ ಸೇರ್ಪಡೆಯಾಗಿ ಪದಗ್ರಹಣ ಮಾಡಲಿದ್ದಾರೆ. ಎಂಟಿಬಿ ನಾಗರಾಜ್ ಮತ್ತು ಆರ್ ಶಂಕರ್ ಅವರಿಗೆ ಮಂತ್ರಿಸ್ಥಾನ ನಿಶ್ಚಿತ ಎನ್ನಲಾಗುತ್ತಿದೆ. ಮುನಿರತ್ನ ಅವರಿಗೆ ಸಚಿವ ಸ್ಥಾನ ಸಿಗುವುದು ಅನುಮಾನ ಎಂಬ ಮಾತೂ ಕೇಳಿಬರುತ್ತಿದೆ.
Comments are closed.