ಕರಾವಳಿ

ಪೊಲೀಸರ ಹೆಸರಲ್ಲಿ ನಕಲಿ ಫೇಸ್ಬುಕ್ ಐಡಿ ಮಾಡಿ ಹಣ ಕೇಳುತ್ತಿದ್ದಾರೆ ವಂಚಕರು..!

Pinterest LinkedIn Tumblr

ಉಡುಪಿ: ಕಳೆದ ಕೆಲ ತಿಂಗಳಿನಿಂದ ಹೊಸದೊಂದು ಗೋಲ್ಮಾಲ್ ಬೆಳಕಿಗೆ ಬಂದಿದೆ. ಪೊಲೀಸರ ಹೆಸರು, ಫೋಟೋ ಸಹಿತ ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ಖಾತೆ ತೆರೆದು ಒಂದಷ್ಟು ಮಂದಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಾರೆ‌‌. ಆಮೇಲೆ ನಡೆಯೋದು ಬೇರೆ…

ಎಸ್….ನಿಜಕ್ಕೂ ಇಂತಹದ್ದೊಂದು ಸಕ್ರೀಯ ಜಾಲ ಉಡುಪಿ ಜಿಲ್ಲೆ ಸೇರಿದಂತೆ ಎಲ್ಲೆಡೆ ಕಾರ್ಯಾಚರಿಸುತ್ತಿದೆಯೇ ಎಂಬ ದಟ್ಟ ಅನುಮಾನ ಕಾಡುತ್ತಿದೆ. ಅದಕ್ಕೆ ಜ್ವಲಂತ ಉದಾಹರಣೆ ಎಂಬಂತೆ ಜ.12 ರಂದು ಕುಂದಾಪುರದ ಪತ್ರಕರ್ತರೊಬ್ಬರಿಗೆ ಬಂದ ಫ್ರೆಂಡ್ ರಿಕ್ವೆಸ್ಟ್ ಹಾಗೂ ಮೆಸೆಂಜರ್ ಮೂಲಕ ಬಂದ ಹಣದ ಬೇಡಿಕೆ. ಅದು 15 ಸಾವಿರ ಮೊತ್ತ.

ಮಂಗಳವಾರ ಬೆಳ್ಳಂಬೆಳಿಗ್ಗೆ ಮೊಬೈಲ್ ಹಿಡಿದು ಫೇಸ್ಬುಕ್ ತೆರೆದ ಪತ್ರಕರ್ತನಿಗೆ ಬಂದಿದ್ದು ಉಡುಪಿ ಇನ್ಸ್‌ಪೆಕ್ಟರ್ (Manjunath CPI) ಮಂಜುನಾಥ್ ಹೆಸರಲ್ಲಿ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ಅದನ್ನು ಸ್ವೀಕರಿಸಿದ ಕೆಲವೇ ಕ್ಷಣದಲ್ಲಿ ಅತ್ತ ಕಡೆಯಿಂದ Hi, Good Morning ಎಂಬ ಮೆಸ್ಸೆಜ್ ಬರುತ್ತೆ‌. ಪತ್ರಕರ್ತ ಸಾರ್ ಹೇಗಿದ್ದೀರಿ ಎಂದು ಕೇಳಿದ್ದೆ ನನಗೆ ನಿಮ್ಮಿಂದ ಉಪಕಾರಬಾಗಬೇಕು ಎಂದು ಉತ್ತರ ಬರುತ್ತೆ. ಪತ್ರಕರ್ತ ತನ್ನ ಮೊಬೈಲ್ ನಂಬರ್ ನೀಡಿ ಕರೆ ಮಾಡಿ ಅಂದಾಗ ತನಗೆ ತುರ್ತಾಗಿ 15 ಸಾವಿರ ಹಣ ಬೇಕಿದೆ, ನಾಳೆ ವಾಪಾಸ್ ಕೊಡುವೆ ಎಂದು ಆಂಗ್ಲ ಭಾಷೆಯಲ್ಲಿ ಸಂದೇಶ ಬರುತ್ತೆ. ಪತ್ರಕರ್ತ ಕರೆ ಮಾಡಿ ಸರ್ ಎಂದಾಗ ಆ ಕಡೆಯಿಂದ ಫೋನ್ ಫೇ ಇದೆಯಾ ಎಂದು ಕೇಳುತ್ತಾನೆ.. ಈ ಸಂದೇಶಗಳನ್ನು ಗಮನಿಸಿದ ಪತ್ರಕರ್ತ ಅನುಮಾನಗೊಂಡು ಉಡುಪಿ ಇನ್ಸ್‌ಪೆಕ್ಟರ್ ಅವರಿಗೆ ಕರೆ ಮಾಡಿ ವಿಚಾರದ ಬಗ್ಗೆ ಕೇಳಿದಾಗ ಇದೊಂದು ಜಾಲ. ಹಣ ಕಳಿಸಬೇಡಿ ಎಂದು ಸ್ಪಷ್ಟನೆ ನೀಡಿದ್ದಾರೆ.

ಉಡುಪಿ ಸಿಪಿಐ ಮಂಜುನಾಥ್ ಹೆಸರಲ್ಲಿ ಈ ಹಿಂದೆಯೂ ನಕಲಿ ಫೇಸ್ಬುಕ್ ಖಾತೆ ತೆರೆದು ಹಣ ಕೇಳಿದ ಬಗ್ಗೆ ಅವರೆ ದೂರು ನೀಡಿದ್ದರು. ಆದರೆ ಈ ವಂಚನೆ ಮತ್ತೆ ಮುಂದುವರಿಯುತ್ತಿರುವುದು ಜನರಲ್ಲಿ ಗೊಂದಲವುಂಟು ಮಾಡಿದೆ. ಸೈಬರ್ ಕ್ರೈಮ್ ವಿಭಾಗವಾದ ಸೆನ್ ಪೊಲೀಸರು ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ಆರೋಪಿಗಳ ಪತ್ತೆ ಮಾಡಬೇಕಿದೆ‌.

(ವರದಿ- ಯೋಗೀಶ್ ಕುಂಭಾಸಿ)

Comments are closed.