ಉಡುಪಿ: ಇತ್ತೀಚಿನ ದಿನದಲ್ಲಿ ಉಡುಪಿ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಇಳಿಕೆಯಾಗುತ್ತಿದ್ದು ಸಂತಸದ ವಿಚಾರ. ಆದರೆ ಜನರು ಜಾಗರುಕತೆ ತಪ್ಪಬಾರದು.ಸರಕಾರದ ಮಾರ್ಗ ಸೂಚಿ ಅನುಸರಿಸದೇ ಇರುವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುತ್ತದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಎಚ್ಚರಿಸಿದ್ದಾರೆ.

‘ಈ ಹಿಂದೆ ಕೊರೊನಾ ಪರೀಕ್ಷೆಗೆ ಒಳಪಟ್ಟ ನೂರು ಜನರಲ್ಲಿ 30 ಜನರಿಗೆ ಪಾಸಿಟಿವ್ ಬರುತ್ತಿದ್ದವು. ಆದರೆ ಈಗ 100 ಜನರಲ್ಲಿ ಕೇವಲ ಇಬ್ಬರಿಗೆ ಮಾತ್ರ ಸೊಂಕು ಕಂಡು ಬರುತ್ತಿದೆ. ಈ ನಡುವೆ ಈಗ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ, ಸಭೆಗಳು ಮತ್ತು ಕಾರ್ಯಗಳನ್ನು ನಡೆಸಲಾಗುತ್ತಿದೆ. ಆದರೆ ಕೆಲವು ವಿವಾಹ ಕಾರ್ಯಕ್ರಮಗಳಲ್ಲಿ, ಮಾರ್ಗಸೂಚಿಗಳನ್ನು ಅನುಸರಿಸುತ್ತಿಲ್ಲ. ಹೆಚ್ಚು ಜನರು ಸೇರುತ್ತಾರೆ. ಆದ್ದರಿಂದ, ಕಾರ್ಯಕ್ರಮಗಳಿಗಾಗಿ ತಹಶೀಲ್ದಾರ್ರಿಂದ ಅನುಮತಿ ಪಡೆಯುವ ವ್ಯಕ್ತಿಗಳ ಮೇಲೆ ನಿಗಾ ಇರಿಸಲು ಓರ್ವ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲು ನಾವು ಚಿಂತನೆ ನಡೆಸಿದ್ದೇವೆ’ ಎಂದು ತಿಳಿಸಿದರು.

ಮೆಹೆಂದಿ ಸೇರಿದಂತೆ ಇತರೆ ಕಾರ್ಯಕ್ರಮಗಳಲ್ಲಿ ಹೆಚ್ಚು ಜನ ಸೇರಿಸುತ್ತಿರುವುದು ತಪ್ಪು. ಮಾರ್ಗಸೂಚಿ ಉಲ್ಲಂಘಿಸಿದವರ ವಿರುದ್ಧ ಕ್ರಮಕ್ಕೆ ತಹಶಿಲ್ದಾರ್ ಅವರಿಗೆ ಸೂಚಿಸಲಾಗಿದೆ. ಒಂದೊಮ್ಮೆ ಅನುಮತಿ ನೀಡಲು ನಿಗಾ ಇರಿಸಲು ನಿಯೋಜಿಸಿದ ಅಧಿಕಾರಿಯು ಕರ್ತವ್ಯ ಲೋಪವೆಸಗಿದರೆ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲಾಗುತ್ತದೆ.
ಅಂಗಡಿ ಮಾಲಿಕರಿಗೆ ನೈತಿಕತೆ ಇರಲಿ…
ಅಂಗಡಿ ಮುಂಗಟ್ಟುಗಳಲ್ಲಿ ಜನ ಗುಂಪುಗೂಡುವುದು ಕಂಡುಬರುತ್ತಿದ್ದು ಅದು ಸರಿಯಲ್ಲ. ಕೆಲ ಅಂಗಡಿ ಮಾಲಿಕರು ಕೂಡ ಇದಕ್ಕೆ ಸಹಕರಿಸುತ್ತಿದ್ದು ಮಾಸ್ಕ್ ದಾರಣೆ ಮಾಡದೇ ಬೇಜವಬ್ದಾರಿ ತೋರುತ್ತಿದ್ದಾರೆ. ಮಾಲೀಕರೆ ಹೀಗೆ ಮಾಡಿದರೆ ಗ್ರಾಹಕರು ಕಾನೂನು ಪಾಲನೆ ಮಾಡೋದಿಲ್ಲ. ಅವರಿಗೆ ಹೇಳುವ ನೈತಿಕತೆ ಮೈಗೂಡಿಸಿಕೊಳ್ಳಿ. ಮಾರ್ಗಸೂಚಿ ಉಲ್ಲಂಘಿಸುವ ಇಂತಹ ಅಂಗಡಿಯನ್ನು ಕೊರೋನಾ ಮುಗಿಯುವ ತನಕ ಪರವಾನಿಗೆ ರದ್ಧು ಮಾಡಲಾಗುತ್ತದೆ.
ಮಾಸ್ಕ್ ದಂಡದ ಬಗ್ಗೆ ಡಿಸಿ ಮಾತು…
ಮಾಸ್ಕ್ ಧರಿಸದೇ ಇರುವರಿಗೆ ದಂಡ ವಿಧಿಸಲು ಸರಕಾರ ಆದೇಶಿಸಿದಂತೆ ಜಿಲ್ಲೆಯಲ್ಲಿ ಆ ಕಾರ್ಯ ನಡೆಯುತ್ತಿದೆ. ಆದರೆ ದಂಡ ವಿಧಿಸುವುದು ಮಾತ್ರವೇ ನಮ್ಮ ಕಾಯಕವಲ್ಲ.. ಅಜಾಗರುಕತೆಯಿಂದ ಬೇರೆಯವರ ಆರೋಗ್ಯದ ಜೊತೆ ಆಟವಾಡುವ ಜನರಿಗೆ ಯಾವುದೇ ಅವಕಾಶ ಕೊಡುವುದಿಲ್ಲ. ತಮ್ಮ ಆರೋಗ್ಯದ ಜೊತೆ ಬೇರೆಯವರ ಆರೋಗ್ಯ ಕಾಳಜಿ ವಹಿಸಬೇಕು.
ಇನ್ನು ಬಸ್ ವ್ಯವಸ್ಥೆಯಲ್ಲಿ ನಿರ್ದಿಷ್ಟವಾಗಿ ನಿಯಮ ಪಾಲಿಸಲು ಆದೇಶಿಸಲಾಗಿದೆ. ಪ್ರತಿ ಟ್ರಿಪ್ ಬಳಿಕ ಸ್ಯಾನಿಟೈಸ್ ಮಾಡಲು ಮಾಲೀಕರಿಗೆ ಸೂಚಿಸಲಾಗಿದೆ. ಬಸ್ ಡ್ರೈವರ್, ಕಂಡಕ್ಟರ್ ಮಾಸ್ಕ್ ಧರಿಸಬೇಕು. ಇಲ್ಲವಾದಲ್ಲಿ ಮುಲಾಜಿಲ್ಲದೆ ಕೇಸ್ ಹಾಕಲಾಗುತ್ತದೆ ಎಂದು ಡಿಸಿ ಖಡಕ್ ಆಗಿ ಆದೇಶ ನೀಡಿದ್ದಾರೆ.
Comments are closed.