ವಿಜಯಪುರ( ಜೂ. 22): ಅಕ್ಕನ ನಿಶ್ಚಿತಾರ್ಥದಲ್ಲಿ ಖುಷಿಯಿಂದ ಪಾಲ್ಗೊಂಡು ಸಂಭ್ರಮಿಸಿದ್ದ 17 ವರ್ಷದ ಯುವತಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಹೀಗಾಗಿ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಿಗೆ ಆತಂಕ ಶುರುವಾದರೆ, ವಿಜಯಪುರ ಜಿಲ್ಲಾಡಳಿತಕ್ಕೆ ಹೊಸ ತಲೆನೋವು ಪ್ರಾರಂಭವಾಗಿದೆ.
ಗುಮ್ಮಟ ನಗರಿ ವಿಜಯಪುರದಲ್ಲಿ ನಡೆದ ಈ ಘಟನೆ ಜನ ಬೆಚ್ಚಿ ಬೀಳುವಂತೆ ಮಾಡಿದೆ. ಯುವತಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿರುವುದು ಆಕೆಯ ಸಂಬಂಧಿಕರು ಮಾತ್ರವಲ್ಲ, ಕಾರ್ಯಕ್ರಮದಲ್ಲಿ ಪಾಲ್ಗೊಂಡವರು ಹಾಗೂ ವಿಜಯಪುರ ಜಿಲ್ಲಾಡಳಿತಕ್ಕೂ ತಲೆನೋವು ತಂದಿದೆ.
P-8306 ಯುವತಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಈಕೆಯಿಂದಲೇ ಈಗ ಆತಂಕ ಶುರುವಾಗಿದೆ. ಈ ಬಾಲಕಿಗೆ ಕೆಮ್ಮು, ಜ್ವರ ಕಾಣಿಸಿಕೊಂಡ ಹಿನ್ನೆಲೆ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಳು. ಬಳಿಕ ಆಕೆಯ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿದ್ದ ಆರೋಗ್ಯ ಇಲಾಖೆ ಸಿಬ್ಬಂದಿ, ಯುವತಿಗೆ ಹೋಂ ಕ್ವಾರಂಟೈನ್‌ಗೆ ಸೂಚಿಸಿದ್ದರು.
ಆದರೆ, ಹೋಂ ಕ್ವಾರಂಟೈನ್‌ಗೆ ಸೂಚಿಸಿದ್ದ ಮರುದಿನವೇ ಈಕೆಯ ಅಕ್ಕನ ನಿಶ್ಚಿತಾರ್ಥ ಕಾರ್ಯಕ್ರಮ ನಡೆದಿತ್ತು. ಈ ಎಂಗೇಜ್‌ಮೆಂಟ್ ಕಾರ್ಯಕ್ರಮದಲ್ಲಿ ಈ ಯುವತಿ ಎಲ್ಲಾ ಕಡೆ ಖುಷಿ-ಖುಷಿಯಾಗಿ ಓಡಾಡಿದ್ದಾಳೆ. ಈ ಎಂಗೇಜ್‌ಮೆಂಟ್ ಕಾರ್ಯಕ್ರಮದ ನಂತರ ಈ ಬಾಲಕಿಯ ಕೊರೋನಾ ವರದಿ ಪಾಸಿಟಿವ್ ಬಂದಿದೆ. ಇದು ಎಂಗೇಜ್‌ಮೆಂಟ್ ನಡೆದವರ ಮನೆಯಲ್ಲಿ ಕೊರೋನಾ ಆತಂಕಕ್ಕೆ ಕಾರಣವಾಗಿದೆ.
ಕೊರೋನಾ ಇರುವುದು ಗೊತ್ತಿಲ್ಲದೆ ಈಕೆ ನಿಶ್ಚಿತಾರ್ಥದಲ್ಲಿ ಭಾಗವಹಿಸಿದ್ದರಿಂದ ಈಗ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡವರಲ್ಲಿ ಆತಂಕ ಶುರುವಾಗಿದೆ. ಸಂಭ್ರಮದಲ್ಲಿ ಓಡಾಡಿದ್ದ ಯುವತಿಗೆ ಈಗ ಕೊರೋನಾ ಶಾಕ್ ನೀಡಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮತ್ತು ಈ ಹುಡುಗಿಯ ಸಂಪರ್ಕಕ್ಕೆ ಬಂದಿರುವ 150ಕ್ಕೂ ಹೆಚ್ಚು ಜನರಲ್ಲಿ ಈಗ ಕೊರೋನಾ ಟೆನ್ಶನ್ ಶುರವಾಗಿದೆ.
ಈ ಎಂಗೇಜ್‌ಮೆಂಟ್ ಕಾರ್ಯಕ್ರಮಕ್ಕೆ ಬಂದಿದ್ದವರಿಗಾಗಿ ವಿಜಯಪುರ ಜಿಲ್ಲಾಡಳಿತ ಈಗ ಹುಡುಕಾಟ ಶುರು ಮಾಡಿದೆ. ಬಾಲಕಿಯ ಸಂಪರ್ಕಕ್ಕೆ ಬಂದಿದ್ದವರಲ್ಲಿ ಈಗಾಗಲೇ 130 ಜನರ ಗಂಟಲು ದ್ರವದ ಮಾದರಿಯನ್ನು ವಿಜಯಪುರ ಆರೋಗ್ಯ ಇಲಾಖೆ ಸಂಗ್ರಹಿಸಿದೆ. ಇದೀಗ ಈ ಬಾಲಕಿ ವಾಸಿಸುತ್ತಿದ್ದ ಮನೆ ಸುತ್ತಲಿನ ಏರಿಯಾವನ್ನು ಸಂಪೂರ್ಣವಾಗಿ ಸೀಲ್‌ಡೌನ್ ಮಾಡಲಾಗಿದೆ.ಈ ಎಂಗೇಜಮೆಂಟ್ಗೆ ಬಂದು ಹೋದವರು ಮತ್ತು ಇನ್ನೂ ಈ ಬಾಲಕಿಯ ಸಂಪರ್ಕಕ್ಕೆ ಬಂದಿದ್ದವರಿಗಾಗಿ ಹಾಗೂ ಇತರರಿಗಾಗಿ ಅಧಿಕಾರಿಗಳು ಹುಡುಕಾಟ ಆರಂಭಿಸಿದ್ದಾರೆ. ವಿಜಯಪುರ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಈ ಎಂಗೇಜ್‌ಮೆಂಟ್ ತೀವ್ರ ತಲೆನೋವು ತಂದಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿಜಯಪುರ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ, ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಸುಮಾರು 130 ಜನರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿಗಾಗಿ ಕಾಯಲಾಗುತ್ತಿದೆ. ಬಾಲಕಿಯನ್ನು ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
Comments are closed.