ಉಡುಪಿ: ಉಡುಪಿಯಲ್ಲಿ ಸೋಮವಾರ ಮತ್ತೆ 73 ಕರೋನ ಪಾಸಿಟಿವ್ ಪತ್ತೆಯಾಗಿದ್ದು ಜಿಲ್ಲೆಯ ಜನ ಭಯದಲ್ಲೇ ದಿನ ಕಳೆಯುವಂತಾಗಿದೆ. ರಾಜ್ಯ ಸರಕಾರದ ಸೂಚನೆಯಂತೆ 7 ದಿನ ಕ್ವಾರಂಟೈನ್ ಪೊರೈಸಿದವರನ್ನು ಕೋವಿಡ್ -19 ಪರೀಕ್ಷೆಯ ವರದಿ ಬರುವ ಮೊದಲೇ ಕ್ವಾರಂಟೈನ್ ಸೆಂಟರ್ ನಿಂದ ಮನೆಗೆ ಹೋಗಲು ಬಿಟ್ಟಿದ್ದು ನಿತ್ಯ ಪಾಸಿಟಿವ್ ಕೇಸುಗಳ ಸಂಖ್ಯೆ ಜಾಸ್ಥಿಯಾಗುತ್ತಲಿದೆ.

ಕಳೆದ ತಿಂಗಳು ಹೊರರಾಜ್ಯಗಳಿಂದ ಉಡುಪಿಗೆ ಆಗಮಿಸಿರುವ 7,500ಕ್ಕೂ ಅಧಿಕ ಜನರು ಜಿಲ್ಲೆಯ ಪಾಲಿಗೆ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದಾರೆ. ಸೋಮವಾರ ಬಂದಿರುವ ಫಲಿತಾಂಶದಲ್ಲಿ ಕೇವಲ ಮಹಾರಾಷ್ಟ್ರದಿಂದಲೇ ಬಂದಿರುವ 61 ಜನರಲ್ಲಿ ಕರೋನಾ ಪತ್ತೆಯಾಗಿದೆ. ಈ ಪೈಕಿ ಆರು ಮಕ್ಕಳಿದ್ದು ಸಂಪರ್ಕ ಪತ್ತೆಯಾಗದ 37 ಪಾಸಿಟಿವ್ ಕೇಸ್ ಗಳು ಇವೆ ಎಂದು ಅರೋಗ್ಯ ಇಲಾಖೆ ಮಾಹಿತಿ ನೀಡಿದೆ. ಈ 37 ಜನರನ್ನು ಪತ್ತೆ ಹಚ್ಚುವುದು ಜಿಲ್ಲಾಡಳಿತಕ್ಕೆ ಭಾರಿ ತಲೆನೋವಾಗಿದ್ದು, ಇದರಲ್ಲಿ ಈಗಾಗಲೇ 22 ಸೋಂಕಿತರ ವಿಳಾಸವನ್ನು ಪತ್ತೆಹಚ್ಚುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ. ಆದರೆ ಐದು ಜನರು ಮಾತ್ರ ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿದ್ದು ಇವರನ್ನು ಪತ್ತೆ ಹಚ್ಚುವುದು ಜಿಲ್ಲಾಡಳಿತಕ್ಕೆ ಸವಾಲಾಗಿದೆ. ಫೋನ್ ಸ್ವಿಚ್ ಆಫ್ ಮಾಡಿದ ಸೋಂಕಿತರನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ತೊಡಗಿದೆ.
ಮುಂಬೈ ಜೊತೆ ದುಬೈನಿಂದ ಬಂದವರು ಕೂಡ ಜಿಲ್ಲೆಗೆ ವೈರಸ್ ಹೊತ್ತು ತಂದಿದ್ದು ಇಂದು ಬಂದ ವರದಿಯಲ್ಲಿ ಮೂವರು ದುಬಾಯಿ ಲಿಂಕ್ ಹೊಂದಿರುವುದು ಖಚಿತವಾಗಿದೆ. ದುಬೈನಿಂದ ಬಂದ ಕರೋನಾ ಸೋಂಕಿತರ ಸಂಖ್ಯೆ ಹದಿನಾಲ್ಕಕ್ಕೆ ಏರಿಕೆಯಾಗಿದೆ. ಇತ್ತ ಮಹಾರಾಷ್ಟ್ರದಿಂದ ಉಡುಪಿಗೆ ಬಂದವರ ಪೈಕಿ ಈವರೆಗೆ 222 ಜನರಲ್ಲಿ ಕರೋನವೈರಸ್ ಕಂಡುಬಂದಿದೆ.
ಪಾಸಿಟಿವ್ ಕೇಸ್ ಗಳು ಈ ರೀತಿ ಹೆಚ್ಚುತ್ತಿದ್ದರೂ ಎಲ್ಲವನ್ನೂ ಎದುರಿಸುತ್ತೇವೆ ಎಂದು ಸಜ್ಜಾಗಿ ಕುಳಿತಿದ್ದ ಉಡುಪಿ ಜಿಲ್ಲಾಡಳಿತಕ್ಕೆ ಇದೀಗ ಪೊಲೀಸರಿಗೆ ಸೋಂಕು ಅಂಟಿರುವುದು ಭಾರಿ ಹಿನ್ನಡೆ ಉಂಟು ಮಾಡಿದೆ. ಕಳೆದ ಕೆಲ ದಿನಗಳ ಹಿಂದೆ ಕಾರ್ಕಳ ಅಜೆಕಾರು ಮತ್ತು ಬ್ರಹ್ಮಾವರ ಠಾಣೆಯ 4 ಪೊಲೀಸರಿಗೆ ಕೊರೋನಾ ಪಾಸಿಟಿವ್ ಕಂಡುಬಂದಿದೆ. ಶಂಕರನಾರಾಯಣ ಠಾಣೆಯ ಮಹಿಳಾ ಸಿಬ್ಬಂದಿಗೆ ಒಬ್ಬರಿಗೆ ಕೋರೋನಾ ಬಂದ ಕಾರಣ ಪೊಲೀಸ್ ಸ್ಟೇಷನ್ ಕಂಟೋನ್ಮೆಂಟ್ ಝೋನ್ ಆಗಿ ಪರಿವರ್ತನೆಗೊಂಡಿದೆ. ಇನ್ನು ಉಡುಪಿ ನಗರ ಭಾಗದಲ್ಲಿರುವ ಸಶಸ್ತ್ರ ಮೀಸಲು ಪಡೆಯ ವಸತಿಗೃಹ ಕೂಡ ನಿರ್ಬಂಧಿತ ಪ್ರದೇಶ ವಾಗುವ ಸಾಧ್ಯತೆ ಇದೆ ಏಕೆಂದರೆ ಸಶಸ್ತ್ರ ಮೀಸಲು ಪಡೆಯ ನಾಲ್ಕು ಜನ ಪೊಲೀಸರಿಗೆ ಕೊರೋನಾ ಪಾಸಿಟಿವ್ ಇದೆ.
Comments are closed.