ಆರೋಗ್ಯ

ರಾಜ್ಯದ ಪ್ರಪ್ರಥಮ ಆನೆಕಾಲು ರೋಗ (ಫೈಲೇರಿಯಾ) ಮುಕ್ತ ಜಿಲ್ಲೆಯಾಗುವತ್ತ ಉಡುಪಿ ಜಿಲ್ಲೆ

Pinterest LinkedIn Tumblr

ಉಡುಪಿ(ವಿಶೇಷ ವರದಿ): ಹಲವು ಕ್ಷೇತ್ರಗಳಲ್ಲಿ ಪ್ರಥಮ ಸ್ಥಾನ ಸಾಧನೆಯ ಸರದಾರನಾದ ಉಡುಪಿ ಜಿಲ್ಲೆಯ ಮುಕುಟಕ್ಕೆ ಮತ್ತೊಂದು ಗರಿ ಏರಲಿದೆ. ಉಡುಪಿ ಜಿಲ್ಲೆಯು ರಾಜ್ಯದ ಆನೆಕಾಲು ರೋಗ (ಪೈಲೇರಿಯಾ) ಮುಕ್ತ ಮೊದಲನೇ ಜಿಲ್ಲೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಉಡುಪಿ ಜಿಲ್ಲೆಯು ಫೈಲೇರಿಯಾ ರೋಗದಿಂದ ಸಂಪೂರ್ಣವಾಗಿ ಮುಕ್ತವಾಗಿದ್ದು, ಇದಕ್ಕೆ ವಿಶ್ವ ಆರೋಗ್ಯ ಸಂಸ್ಥೆಯ ಅನುಮೋದನೆ ದೊರೆಯುವುದಷ್ಟೆ ಬಾಕಿ ಇದ್ದು, ಈ ಕುರಿತಂತೆ ಅಗತ್ಯ ವರದಿ ಮತ್ತು ದಾಖಲೆಗಳನ್ನು ವಿಶ್ವ ಆರೋಗ್ಯ ಸಂಸ್ಥೆಗೆ ಕಳುಹಿಸಲಾಗಿದೆ, ವಿಶ್ವ ಆರೋಗ್ಯ ಸಂಸ್ಥೆಯ ಅನುಮೋದನೆ ದೊರೆಯಲು ಕನಿಷ್ಟ ಎರಡು ವರ್ಷ ತಗುಲಲಿದ್ದು, ಆ ಮೂಲಕ ಉಡುಪಿ ಜಿಲ್ಲೆಯು ರಾಜ್ಯದಲ್ಲೆ ಮೊಟ್ಟ ಮೊದಲ “ಫೈಲೇರಿಯಾ ಮುಕ್ತ ಜಿಲ್ಲೆ” ಎನ್ನುವ ಕೀರ್ತಿಗೆ ಭಾಜನವಾಗಲಿದೆ.

(ಸಾಂದರ್ಭಿಕ ಚಿತ್ರ)

ಫೈಲೇರಿಯಾ (ಆನೆಕಾಲು) ಕ್ಯೂಲೆಕ್ಸ್ ಎಂಬ ಸೊಳ್ಳೆಯ ಕಡಿತದಿಂದಾಗುವ ರೋಗವಾಗಿದ್ದು, ಇದು ಸಾಂಕ್ರಾಮಿಕವಲ್ಲ. ಫೈಲೇರಿಯಾ ಹುಳುವಿರುವ ವ್ಯಕ್ತಿಯನ್ನು ಕ್ಯೂಲೆಕ್ಸ್ ಸೊಳ್ಳೆ ಕಚ್ಚಿದಾಗ ರಕ್ತದಲ್ಲಿರುವ ಹುಳ ಸೊಳ್ಳೆಯ ದೇಹವನ್ನು ಪ್ರವೇಶಿಸುತ್ತದೆ. ಈ ಸೊಳ್ಳೆ ಆರೋಗ್ಯವಂತ ವ್ಯಕ್ತಿಯನ್ನು ಕಚ್ಚಿದಾಗ ಜಂತು ಹುಳವು ಆ ವ್ಯಕ್ತಿಯ ದೇಹವನ್ನು ಪ್ರವೇಶಿಸುತ್ತದೆ. ಕಡಿತಕ್ಕೊಳಗಾದ ವ್ಯಕ್ತಿಗೆ ಫೈಲೇರಿಯಾ ರೋಗ ಬರಲು ಕನಿಷ್ಟ 3 ರಿಂದ ಗರಿಷ್ಟ 10 ವರ್ಷಗಳು ತಗಲಬಹುದು. ವ್ಯಕ್ತಿಯ ದೇಹದೊಳಕ್ಕೆ ಪ್ರವೇಶಿಸಿದ ಹುಳವು ದುಗ್ಧರಸಗ್ರಂಥಿಗಳಲ್ಲಿ ಶೇಖರಣೆಯಾಗಿ, ರಕ್ತ ಪರಿಚಲನೆಯಾಗದೆ ಅಲ್ಲಿಂದ ಮುಂದಿನ ದೇಹದ ಭಾಗವು ಸಂಪೂರ್ಣವಾಗಿ ಊದಿಕೊಳ್ಳತೊಡಗುತ್ತದೆ. ವ್ಯಕ್ತಿಯ ದೇಹದೊಳಗಿರುವ ಹುಳ ಸಾವನ್ನಪ್ಪಿದರೂ ದೇಹದ ಊತ ಶಾಶ್ವತವಾಗಿ ಉಳಿದುಕೊಳ್ಳುತ್ತದೆ. ಮುಖ್ಯವಾಗಿ ಕಾಲು, ಕೈ, ಎದೆಯ ಭಾಗಗಳಲ್ಲಿ ಊದುವಿಕೆ ಕಾಣಿಸಿಕೊಳ್ಳುತ್ತದೆ.

ಉಡುಪಿ ಜಿಲ್ಲೆಯಲ್ಲಿ ಹಳೆಯ ಫೈಲೇರಿಯಾ ಪ್ರಕರಣಗಳನ್ನು ಹೊರತು ಪಡಿಸಿ ಯಾವುದೇ ಹೊಸ ಪ್ರಕರಣಗಳು ದಾಖಲಾಗಿಲ್ಲ. ಹೊರ ಜಿಲ್ಲೆ ಮತ್ತು ಹೊರರಾಜ್ಯದಿಂದ ಬರುವ ವಲಸೆ ಕಾರ್ಮಿಕರಲ್ಲಿ ರೋಗದ ಹುಳುಗಳು ಇರುವ ಸಾಧ್ಯತೆಗಳಿದ್ದು, ಇಂತಹವರನ್ನು ನಿಯಮಿತವಾಗಿ ಪತ್ತೆ ಹಚ್ಚಿ ಪರೀಕ್ಷೆಗೊಳಪಡಿಸುವ ಕಾರ್ಯ ನಡೆಸಲಾಗುತ್ತದೆ. ವಲಸೆ ಕಾರ್ಮಿಕರನ್ನು ಪತ್ತೆ ಹಚ್ಚಲು ಕಟ್ಟಡ ನಿರ್ಮಾಣ ಮಾಡಲು ಆರೋಗ್ಯ ಇಲಾಖೆಯ ಕಡೆಯಿಂದ ಎನ್.ಓ.ಸಿ ತೆಗೆದುಕೊಳ್ಳುವುದು ಕಡ್ಡಾಯಗೊಳಿಸುವಂತೆ ಇದರ ಜೊತೆಗೆ ನಗರ ಸಭೆಯಿಂದ ಸಿವಿಕ್ ಬೈಲಾವನ್ನೂ ರಚಿಸಿ ಅನುಮೋದನೆಗಾಗಿ ರಾಜ್ಯ ಸರಕಾರಕ್ಕೆ ಕಳುಹಿಸಿಕೊಡಲಾಗಿದೆ. ಮುಂದಿನ ದಿನಗಳಲ್ಲಿ ಬೈಲಾದ ಕಟ್ಟಳೆಗಳನ್ನು ಉಲ್ಲಂಘಿಸಿದವರ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ.

ಉಡುಪಿ ಫೈಲೇರಿಯಾದ ಮುಕ್ತ ಜಿಲ್ಲೆಯಾದದ್ದು ಹೇಗೆ?
ಫೈಲೇರಿಯಾದ ಮೇಲೆ ಸಂಪೂರ್ಣ ಹತೋಟಿಯನ್ನು ತರಲು 2004 ರಲ್ಲಿ ಭಾರತ ಸರಕಾರವು Mass Drug Administration (MDA) ಹಮ್ಮಿಕೊಳ್ಳಲಾಯಿತು. ಈ ಸಂಧರ್ಭದಲ್ಲಿ ಉಡುಪಿ ಜಿಲ್ಲೆಯ ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ಆಲ್ಬೆಂಡಜೋಲ್ ಮತ್ತು ಡಿ.ಇ.ಸಿ ಮಾತ್ರೆಗಳನ್ನು ನೀಡಲಾಯಿತು. ಆ ನಂತರ Post MDA ಸರ್ವೆ ನಡೆಸಿ, ಪ್ರಸರಣ ಮೌಲ್ಯಮಾಪನ (TAS) ನಡೆಸಲಾಯಿತು. ಪ್ರಸರಣ ಮೌಲ್ಯವು 1%ಕ್ಕಿಂತ ಹೆಚ್ಚಿದ್ದಲ್ಲಿ ಇನ್ನೂ ನಿಖರ ವರದಿಗಾಗಿ Immune Chromatic Test (ICT) ಗೊಳಪಡಿಸಲಾಗುತ್ತದೆ. 2005 ರಿಂದ 2012ರವರೆಗೆ ಒಂದೇ ಒಂದು ಬಾರಿಯೂ ಜಿಲ್ಲೆಯ TAS ಸರ್ವೆಯಲ್ಲಿ ಪ್ರಸರಣ ಮೌಲ್ಯವು 1% ಕ್ಕಿಂತ ಹೆಚ್ಚಾಗಿಲ್ಲ. ICT ಪರೀಕ್ಷೆಗಳಿಗೆ ಜಿಲ್ಲೆಯ ಶಾಲೆಗಳನ್ನು ಯಾದೃಚ್ಛಿಕವಾಗಿ ಆಯ್ಕೆ ಮಾಡಿ, ಶಾಲಾ ಮಕ್ಕಳ ರಕ್ತದ ನಮೂನೆಗಳನ್ನು ಪರೀಕ್ಷೆಗೊಳಪಡಿಸಲಾಗುತ್ತದೆ. ಈ ಎಲ್ಲಾ ಪ್ರಕ್ರಿಯೆಗಳು ಸ್ವಯಂಚಾಲಿತ ಸಾಫ್ಟ್‍ವೇರ್ ಮೂಲಕವೇ ನಡೆಯುತ್ತದೆ. ಇದರ ಜೊತೆಗೆ ಕ್ಯೂಲೆಕ್ಸ್ ಸೊಳ್ಳೆಗಳನ್ನೂ ಪರೀಕ್ಷಿಸಿ ಅವುಗಳ ಒಳಗೆ ಜಂತುಹುಳಗಳಿವೆಯೆ ಎನ್ನುವುದನ್ನೂ ಪತ್ತೆ ಹಚ್ಚಲಾಗುತ್ತದೆ. ಈ ಎಲ್ಲಾ ಪರೀಕ್ಷೆಗಳನ್ನು ನಡೆಸುವ ಕಿಟ್‍ಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಒದಗಿಸುತ್ತದೆ.

2014, 2016, ಮತ್ತು 2019 ರಲ್ಲಿ ನಡೆಸಿದ TAS ಮತ್ತು Post MDA ಸರ್ವೆಗಳಲ್ಲಿ ಮೂರೂ ಬಾರಿಯೂ ಉಡುಪಿಯು ತೇರ್ಗಡೆ ಹೊಂದಿದ್ದು, ಸ್ಥಳೀಯವಾಗಿ ಫೈಲೇರಿಯಾ ರೋಗ ಇಲ್ಲವೆನ್ನುವುದು ಕಂಡುಬಂದಿದೆ. ಉಡುಪಿ ಜಿಲ್ಲೆಯು ಅಧಿಕೃತವಾಗಿ ಫೈಲೇರಿಯಾ ಮುಕ್ತ ಜಿಲ್ಲೆಯಾಗಬೇಕಿದ್ದಲ್ಲಿ ಈ ಪ್ರಮಾಣಪತ್ರಕ್ಕೆ ವಿಶ್ವ ಆರೋಗ್ಯ ಸಂಸ್ಥೆಯ ಅನುಮೋದನೆ ದೊರೆಯಬೇಕಾಗಿದೆ. ಪ್ರಮಾಣಪತ್ರವನ್ನು ವಿಶ್ವ ಆರೋಗ್ಯ ಸಂಸ್ಥೆಗೆ ಕಳುಹಿಸಲಾಗಿದ್ದು, ಮುಂದಿನ ಎರಡು ವರ್ಷಗಳವರೆಗೆ ಜಿಲ್ಲೆಯನ್ನು ಫೈಲೇರಿಯಾ ಮುಕ್ತವಾಗಿಡುವ ನಿಟ್ಟಿನಲ್ಲಿ ಕಾರ್ಯಗಳು ನಡೆಯಲಿವೆ. ರಾಜ್ಯದಲ್ಲಿ 2019 ರ ಆಗಸ್ಟಲ್ಲಿಯೇ ಈ ಸಾಧನೆ ಮಾಡಿದ ಪ್ರಥಮ ಜಿಲ್ಲೆ ಉಡುಪಿಯಾಗಿದ್ದು, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಉಡುಪಿಯ ನಂತರದಲ್ಲಿವೆ ಎಂದು ಜಿಲ್ಲಾ ಆಶ್ರಿತ ರೋಗವಾಹಕ ನಿಯಂತ್ರಣಾಧಿಕಾರಿ ಡಾ.ಪ್ರಶಾಂತ್ ಭಟ್ ತಿಳಿಸಿದರು. (ಪ್ರಶಾಂತ್ ಭಟ್ ಮೊ. 9972533545

Comments are closed.