ಕರ್ನಾಟಕ

ಕಾಂಗ್ರೆಸ್ ಬ್ರಹ್ಮಾಸ್ತ್ರ ಠುಸ್; ಅತೃಪ್ತ ಶಾಸಕರ ಮನವೊಲಿಕೆ ಅಸಾಧ್ಯ!

Pinterest LinkedIn Tumblr


ಮುಂಬೈ (ಜು.20): ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಸೋಮವಾರಕ್ಕೆ ಮುಂದೂಡಲ್ಪಟ್ಟಿದೆ. ಶನಿವಾರ ಹಾಗೂ ಭಾನುವಾರ ಅತೃಪ್ತರನ್ನು ಮನವೊಲಿಕೆಗೆ ಕಾಂಗ್ರೆಸ್​​ ಮುಂದಾಗಲಿದ್ದು, ಈ ಮೂಲಕ ಸರ್ಕಾರ ಉಳಿಸಿಕೊಳ್ಳಲು ತಂತ್ರ ರೂಪಿಸಿದೆ. ಆದರೆ, ಕಾಂಗ್ರೆಸ್​ಗೆ ಇದ್ದ ಕೊನೆಯ ಅಸ್ತ್ರವೂ ಇದೀಗ ಟುಸ್​ ಆಗಿದೆ.

ಅತೃಪ್ತ ಶಾಸಕರು ಮುಂಬೈನಲ್ಲಿ ಉಳಿದುಕೊಂಡಿದ್ದಾರೆ. ಈ ಮಧ್ಯೆ ಶ್ರೀಮಂತ ಪಾಟೀಲ್​ ಕೂಡ ಮುಂಬೈಗೆ ತೆರಳಿದ್ದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಬಿಜೆಪಿಯವರು ಶ್ರೀಮಂತ ಪಾಟೀಲ್​ರನ್ನು ಅಪಹರಣ ಮಾಡಿದ್ದಾರೆ ಎಂದು ವಿಧಾನಸಭೆಯಲ್ಲಿ ಕಾಂಗ್ರೆಸ್​​ ಗದ್ದಲ ಎಬ್ಬಿಸಿತ್ತು. ಅವರನ್ನು ಸಂಪರ್ಕಿಸಲು ಕಾಂಗ್ರೆಸ್​​ ಪ್ರಯತ್ನ ಪಡುತ್ತಲೇ ಇದೆ. ಆದರೆ ಅದು ಸಾಧ್ಯವಾಗಿಲ್ಲ. ಈಗ ಕಾಂಗ್ರೆಸ್​ನ ಕೊನೆಯ ಪ್ರಯತ್ನವೂ ವಿಫಲವಾಗಿದೆ.

ಮಹಾರಾಷ್ಟ್ರದಲ್ಲಿ ಯಶೋಮತಿ ಠಾಕೂರ್ ಕಾಂಗ್ರೆಸ್​​ನ ಪ್ರಭಾವಿ ನಾಯಕಿ. ಅವರು ಮಹಾರಾಷ್ಟ್ರ ಕಾಂಗ್ರೆಸ್​​ನ ಕಾರ್ಯಾಧ್ಯಕ್ಷೆಯೂ ಹೌದು. ಹಾಗಾಗಿ ಮುಂಬೈನ ಸೇಂಟ್ ಜಾರ್ಜ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶ್ರೀಮಂತ ಪಾಟೀಲ್ ಅವರನ್ನು ಭೇಟಿ ಮಾಡುವಂತೆ ರಾಜ್ಯ ನಾಯಕರು ಕೋರಿದ್ದರು. ಈ ನಿರ್ದೇಶನದ ಮೇರೆಗೆ ಅವರು ಆಸ್ಪತ್ರೆಗೆ ತೆರಳಿದ್ದರು.

ಆದರೆ, ಶ್ರೀಮಂತ ಪಾಟೀಲ ಭೇಟಿಗೆ ಪೊಲೀಸರು ಯಶೋಮತಿಗೆ ಅವಕಾಶ ನೀಡಲಿಲ್ಲ. ಇದೇ ವೇಳೆ ಶ್ರೀಮಂತ ಪಾಟೀಲ್​ ಪುತ್ರ ಕೂಡ ವಿರೋಧ ವ್ಯಕ್ತಪಡಿಸಿದ್ದರು. ಪೊಲೀಸರು ಹಾಗೂ ಪಾಟೀಲ್ ಪುತ್ರನ ವರ್ತನೆ ವಿರುದ್ಧ ಯಶೋಮತಿ ಕಿಡಿ ಕಾಡಿದ್ದಾರೆ.

“ನಿಮ್ಮ ತಂದೆಗೆ‌ ಸಿರೀಯಸ್ ಇದ್ರೆ ಈ ಆಸ್ಪತ್ರೆಯಲ್ಲಿ ಏಕೆ ಅಡ್ಮಿಟ್‌ ಮಾಡಿದ್ದೀರಾ? ಮುಂಬೈನಲ್ಲಿ ಸಾಕಷ್ಟು ಉತ್ತಮ ಆಸ್ಪತ್ರೆಗಳಿವೆ. ಅಲ್ಲಿಗೆ ಅವರನ್ನು ಸೇರಿಸೋಣ,” ಎಂದು ಯಶೋಧ ಹೇಳಿದ್ದರು. ಇದಕ್ಕೆ ಉತ್ತರಿಸಿದ್ದ ಪಾಟೀಲ್​ ಮಗ, “ಇಲ್ಲ ನಮ್ಮ ತಂದೆಗೆ ಇಲ್ಲಿಯೇ ಉತ್ತಮ ಚಿಕಿತ್ಸೆ ದೊರೆಯುತ್ತದೆ. ಇದೇ ಆಸ್ಪತ್ರೆಲೀ ಇರಲಿ. ಯಾರ ಭೇಟಿಗೂ ಅವಕಾಶ ನೀಡದಂತೆ ವೈದ್ಯರು ಹೇಳಿದ್ದಾರೆ,” ಎಂದಿದ್ದರು.

ಇದೇ ವೇಳೆ ಮಧ್ಯ ಪ್ರವೇಶ ಮಾಡಿದ ಪೋಲಿಸ್ ಸಿಬ್ಬಂದಿ ವಿರುದ್ಧವೂ ಯಶೋಮತಿ ಸಿಟ್ಟಾಗಿದ್ದಾರೆ. ಇಷ್ಟಾದರೂ ಶ್ರೀಮಂತ ಪಾಟೀಲ್​ರನ್ನು ಪೊಲೀಸರು ಅವರಿಗೆ ಅವಕಾಶ ನೀಡಿಲ್ಲ. ಅಲ್ಲಿಗೆ ಕಾಂಗ್ರೆಸ್​ನ ಕೊನೆಯ ಅಸ್ತ್ರವೂ ವಿಫಲವಾದಂತಾಗಿದೆ.

Comments are closed.