
ಮಂಡ್ಯ: ಮದ್ದೂರಿನ ಸ್ಥಳೀಯ ಜೆಡಿಎಸ್ ಮುಖಂಡ ತೊಪ್ಪನಹಳ್ಳಿ ಪ್ರಕಾಶ್(48) ಅವರನ್ನು ಹಾಡಹಗಲೇ ಬರ್ಬರವಾಗಿ ಹತ್ಯೆಗೈಯ್ಯಲಾಗಿದೆ. ಮದ್ದೂರಿನ ಟಿಬಿ ಸರ್ಕಲ್ ಬಳಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಪ್ರಕಾಶ್ ಅವರನ್ನು ಕೊಚ್ಚಿ ಕೊಲೆಗೈದಿದ್ದಾರೆ. ಪ್ರಕಾಶ್ ಅವರು ಮಾಜಿ ಮಂಡ್ಯ ಜಿ.ಪಂ. ಅಧ್ಯಕ್ಷೆ ಲಲಿತಾ ಅವರ ಪತಿಯಾಗಿದ್ದಾರೆ. ಹಳೆ ವೈಷಮ್ಯವೇ ಈ ಹತ್ಯೆಗೆ ಕಾರಣ ಎನ್ನಲಾಗುತ್ತಿದೆ. ಪ್ರಕಾಶ್ ಹತ್ಯೆ ಖಂಡಿಸಿ ಜೆಡಿಎಸ್ ಕಾರ್ಯಕರ್ತರು ಮದ್ದೂರಿನಲ್ಲಿ ಇಂದು ಸಂಜೆಯಿಂದಲೂ ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಹಲವು ಗಂಟೆಗಳ ಕಾಲ ಪ್ರತಿಭಟನೆಗಳಿಂದಾಗಿ ಮದ್ದೂರಿನ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಹಾಗೆಯೇ ಮದ್ದೂರು ನಗರದಾದ್ಯಂತ ಉದ್ರಿಕ್ತ ವಾತಾವರಣ ಸೃಷ್ಟಿಯಾಗಿದೆ.
ಜೆಡಿಎಸ್ ಮುಖಂಡ ಪ್ರಕಾಶ್ ಹತ್ಯೆಗೆ ಸಿಎಂ ಹೆಚ್ಡಿಕೆ ಕೆಂಡಾಮಂಡಲವಾಗಿದ್ದಾರೆ. ಹಂತಕರನ್ನು ಮುಲಾಜಿಲ್ಲದೆ ಶೂಟೌಟ್ ಮಾಡಿ ಎಂದು ಹೇಳುವ ಮಟ್ಟಕ್ಕೆ ಕುಮಾರಸ್ವಾಮಿ ಅವರು ಒಂದು ಹಂತದಲ್ಲಿ ಉದ್ವೇಗಗೊಂಡಿದ್ದರು.
ಜಾಮೀನು ನಿರಾಕರಣೆಯೇ ಕೊಲೆಗೆ ಕಾರಣವಾಯ್ತಾ?
ಎರಡು ವರ್ಷಗಳ ಹಿಂದೆ ತೊಪ್ಪನಹಳ್ಳಿಯಲ್ಲಿ ಇಬ್ಬರು ಜೆಡಿಎಸ್ ಕಾರ್ಯಕರ್ತರ ಕೊಲೆಯಾಗಿತ್ತು. ಮುತ್ತುರಾಜು ಮತ್ತು ಪ್ರಸನ್ನ ಎಂಬಿಬ್ಬರು ಆ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದರು. ಈ ಕೇಸ್ ದಾಖಲಿಸಿದ್ದು ಪ್ರಕಾಶ್ ಅವರೆಯೇ. ಮುತ್ತುರಾಜು ಮತ್ತು ಪ್ರಸನ್ನ ಈ ಇಬ್ಬರಿಗೂ ಹೈಕೋರ್ಟ್ನಲ್ಲಿ ಎರಡೆರಡು ಬಾರಿ ಜಾಮೀನು ನಿರಾಕರಣೆಯಾಗಿತ್ತು. ಇದೇ ಹತಾಶೆಯಲ್ಲಿ ಪ್ರಕಾಶ್ ಅವರನ್ನು ಹತ್ಯೆಗೈದಿರಬಹುದೆಂದು ಶಂಕಿಸಲಾಗಿದೆ.
Comments are closed.