ಅಂತರಾಷ್ಟ್ರೀಯ

ಅಮೆರಿಕಾದ ಟೈಮ್​​​ ನಿಯತಕಾಲಿಕೆಯಲ್ಲಿ ಭಾರತೀಯ ಪ್ರತಿಭೆಗಳ ಕಮಾಲು..!

Pinterest LinkedIn Tumblr


ನ್ಯೂಯಾರ್ಕ್​: ಅಮೆರಿಕಾದ ಜನಪ್ರಿಯ ನಿಯತಕಾಲಿಕೆ ‘ಟೈಮ್​​​ ಮ್ಯಾಗಜಿನ್​’ ಪ್ರತಿವರ್ಷ ಪ್ರಭಾವಿ ವ್ಯಕ್ತಿಗಳ ಪರಿಚಯ ಮಾಡಿಕೊಡುತ್ತದೆ. ಅಂತೆಯೇ 2018ರಲ್ಲಿ 25 ಯುವ ಪ್ರತಿಭೆಗಳ ಸಾಧನೆಯನ್ನು ಹೇಳ ಹೊರಟಿದ್ದು, ಆ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳ ಜೊತೆಗೆ, ಅಸಾಮಾನ್ಯ ಯುವ ಪ್ರತಿಭೆಗಳನ್ನು ಪಟ್ಟಿ ಮಾಡಲಾಗಿದೆ.

ಈ ವರ್ಷದ ನಿಯತಕಾಲಿಕೆ ಬಹಳಷ್ಟು ವಿಶೇಷವಾಗಿದ್ದು, ಭಾರತೀಯ ಮೂಲದ ಮೂವರು ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಲಾಗಿದೆ. ರಿಷಭ್​ ಜೈನ್​, ಕಾವ್ಯ ಕೊಪ್ಪರಾಪು, ಅಮಿಕಾ ಜಾರ್ಜ್​ ಅವರ ಸಾಧನೆ ಯುವಜನತೆಗೆ ಸ್ಪೂರ್ತಿದಾಯಕವಾಗಿದೆ.

19 ವರ್ಷದ ಅಮಿಕಾ ಜಾರ್ಜ್​ ಬಡತನವನ್ನು ನಿರ್ಮೂಲನೆ ಮಾಡಲು ಪಣ ತೊಟ್ಟಿರುವ ಯುವಪ್ರತಿಭೆ. ಬಡತನದ ಕಾರಣದಿಂದ ಸ್ಯಾನಿಟರಿ ಪ್ಯಾಡ್​ಗಳನ್ನು ಪಡೆಯಲಾಗದ ಮಹಿಳೆಯರಿಗೆ ಮತ್ತು ಹುಡುಗಿಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್​ಗಳು ಹಾಗೂ ನೈರ್ಮಲ್ಯ ಉತ್ಪನ್ನಗಳನ್ನು ವಿತರಿಸುವ ಮಹತ್ತರ ಕಾರ್ಯಕ್ಕೆ ಮುಂದಾಗಿದ್ದಾರೆ.

ಅಮಿಕಾ #FreePeriods ಎಂಬ ಅಭಿಯಾನವನ್ನು ಆರಂಭಿಸಿದರು. ಬಡತನ ನಿರ್ಮೂಲನೆ ಮಾಡಲು ಸಹಾಯ ಮಾಡುವ 2 ಲಕ್ಷ ಜನರ ಸಹಿಗಳನ್ನು ಸಂಗ್ರಹಿಸಿದರು. ನಂತರದ ದಿನಗಳಲ್ಲಿ ಈ ಅಭಿಯಾನಕ್ಕೆ ಇಂಗ್ಲೆಂಡ್​ ಸರ್ಕಾರದ ಬೆಂಬಲಬವೂ ಸಹ ಸಿಕ್ಕಿ, ಮೊದಲ ಬಾರಿಗೆ ದೇಣಿಗೆ ನೀಡುವ ಕಾರ್ಯಕ್ಕೆ ಉತ್ತೇಜನ ನೀಡಿತು.

14 ವರ್ಷದ ರಿಷಭ್ ಜೈನ್​ ಪ್ಯಾಂಕ್ರಿಯಾಟಿಕ್​ ಕ್ಯಾನ್ಸರ್​ನ್ನು ಗುಣಪಡಿಸುವ ಸಾಫ್ಟ್​​ವೇರ್​​ನ್ನು ಅಭಿವೃದ್ಧಿಪಡಿಸಿದ್ದಾರೆ. ಈತ ಕಂಡುಹಿಡಿದ ‘ಅಲ್ಗಾರಿದಮ್​’ ಪ್ಯಾಂಕಿಯಾಟ್ರಿಕ್​ ಕ್ಯಾನ್ಸರ್​​ನ್ನು ಗುಣಪಡಿಸಲು ಸಹಕಾರಿಯಾಗಿದೆ.

18 ವರ್ಷದ ಕಾವ್ಯ ಕೊಪ್ಪರಾಪು ಹಾರ್ವರ್ಡ್​​ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮುಗಿಸಿದ್ದಾರೆ. ಇವರು ಮೆದುಳು ಕ್ಯಾನ್ಸರ್​ನ್ನು ಗುಣಪಡಿಸುವ ಸಾಫ್ಟ್​ವೇರ್​ನ್ನು ಕಂಡುಹಿಡಿದಿದ್ದಾರೆ. ಕಳೆದ 30 ವರ್ಷಗಳಿಂದ ಮೆದುಳು ಕ್ಯಾನ್ಸರ್​ನಿಂದ ಬಳಲುತ್ತಿರುವ ರೋಗಿಗಳನ್ನು ಗುಣಪಡಿಸಬಹುದಾಗಿದೆ.

ಇವರ ಮಹತ್ತರ ಸಾಧನೆಯನ್ನು ಗುರುತಿಸಿರುವ ‘ಟೈಮ್​​​​ ನಿಯತಕಾಲಿಕೆ’ ವಿಶೇಷ ಗೌರವ ಸಲ್ಲಿಸಿದೆ. ಹೀಗೆ ಅಸಾಮಾನ್ಯ ಸಾಧನೆ ಮಾಡಿರುವ ಪ್ರತಿಭೆಗಳನ್ನು ವಿಶ್ವದಾದ್ಯಂತ ಹುಡುಕಿ ಅವರಿಗೆ ವಿಶೇಷ ಗೌರವ ಸಲ್ಲಿಸುವ ಕಾರ್ಯದಲ್ಲಿ ಟೈಮ್​ ನಿಯತಕಾಲಿಕೆ ನಿರತವಾಗಿದೆ.

Comments are closed.