
ಬೆಂಗಳೂರು: ಸಂಪುಟದಿಂದ ಕೈಬಿಟ್ಟ ಹಿನ್ನೆಲೆಯಲ್ಲಿ ಕೋಪಗೊಂಡಿರುವ ರಮೇಶ್ ಜಾರಕಿಹೊಳಿ ಇಂದು ಬೆಂಗಳೂರಿನಲ್ಲಿ ತಮ್ಮ ಆಪ್ತ ಶಾಸಕರೊಂದಿಗೆ ಸಭೆ ನಡೆಸಿ, ಸಮ್ಮಿಶ್ರ ಸರ್ಕಾರದ ವಿರುದ್ಧ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.
ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆಗೆ ಕೊಡೋ ಮಾತಿಗೆ ಈಗಲೂ ಬದ್ಧ. ನನಗೆ ನಾಲ್ಕು ದಿನ ಸಮಯ ಕೊಡಿ. ನಾಲ್ಕು ದಿನದಲ್ಲಿ ನನ್ನ ನಿರ್ಧಾರ ಪ್ರಕಟಿಸುತ್ತೇನೆ. ಕಳೆದ ಒಂದು ವಾರದಲ್ಲಿ ಮಾಧ್ಯಮಗಳು ಹೀರೋನ ವಿಲನ್ ಮಾಡಿವೆ. ವಿಲನ್ನ ಹೀರೋ ಮಾಡಿವೆ. ವಿಲನ್ ಯಾರು? ಹೀರೋ ಯಾರು? ಅನ್ನೋದನ್ನು ಹೇಳುತ್ತೇನೆ ಎಂದರು.
ವೇಣುಗೋಪಾಲ್ ಸೇರಿ ಪಕ್ಷದ ಯಾವ ಮುಖಂಡರನ್ನು ಭೇಟಿಯಾಗಲ್ಲ. ನನ್ನ ಜೊತೆ ಎಷ್ಟು ಶಾಸಕರು ಇದ್ದಾರೆ ಅನ್ನೋದನ್ನು ನಿಮಗ್ಯಾಕೆ ಹೇಳ್ಬೇಕು. ಎಷ್ಟು ಜನ ಇದ್ದಾರೆ ಅನ್ನೋದನ್ನು ಮುಂದಿನ ದಿನದಲ್ಲಿ ಬಹಿರಂಗಪಡಿಸುತ್ತೇನೆ ಎಂದ ರಮೇಶ್ಗೆ ಬಿಜೆಪಿಗೆ ಹೋಗುತ್ತೀರಾ ಎಂದು ಮಾಧ್ಯಮದವರು ಪ್ರಶ್ನಿಸಿದರು. ಈ ಪ್ರಶ್ನೆಗೆ ಕೋಪಗೊಂಡ ಅವರು, ಅದರ ಬಗ್ಗೆ ನಿಮಗ್ಯಾಕೆ ಹೇಳ್ಬೇಕು, ಬೇಕಿದ್ದರೆ ನೀವೇ ಹೋಗಿ. ಮಾಧ್ಯಮಗಳೇ ದ್ರೋಹಿಗಳು ಎಂದು ಮಾಧ್ಯಮಗಳ ವಿರುದ್ಧವೂ ಕೆಂಡಾಮಂಡಲರಾದರು. ನಂತರ ಮತ್ತೆ ನಿಮ್ಮ ಮುಂದೆ ಬಹಳ ವಿಚಾರ ಹಂಚಿಕೊಳ್ಳಬೇಕಿದೆ. ನಿಮ್ಮ ಮುಂದೆ ಬರ್ತೇನೆ ಎಂದು ಹೇಳುವ ಮೂಲಕ ತಮ್ಮ ಮುಂದಿನ ನಡೆಯ ನಿಗೂಢತೆಯನ್ನು ಕಾಯ್ದಿರಿಸಿಕೊಂಡರು.
ಸಚಿವ ಸ್ಥಾನ ನೀಡುವಂತೆ ಹಿರಿಯ ನಾಯಕರ ಬಳಿ ಒತ್ತಾಯಿಸಬೇಕೇ ಅಥವಾ ಸಮ್ಮಿಶ್ರ ಸರ್ಕಾರಕ್ಕೆ ನೀಡಿದ ಬೆಂಬಲ ಹಿಂಪಡೆಯಬೇಕೆ ಎಂಬುದರ ಕುರಿತು ಸಭೆಯಲ್ಲಿ ಮಹತ್ವದ ಚರ್ಚೆ ನಡೆಸಲಿದ್ದಾರೆ. ಈ ವೇಳೆ ಯಾವ ನಿರ್ಧಾರಕ್ಕೆ ಒಮ್ಮತ ಬರುತ್ತದೆಯೋ ಆ ರೀತಿಯಲ್ಲಿ ಎಲ್ಲ ಶಾಸಕರು ಮುಂದುವರೆಯುವ ಆಲೋಚನೆಯಲ್ಲಿದ್ದಾರೆ. ಹಾಗಾಗಿ, ಇಂದಿನ ಸಭೆ ಭಾರೀ ಕುತೂಹಲ ಮೂಡಿಸಿದೆ. ಅಷ್ಟೇ ಅಲ್ಲ, ಮೈತ್ರಿ ಸರ್ಕಾರದ ಭವಿಷ್ಯ ಇಂದಿನ ಸಭೆಯಲ್ಲಿ ನಿರ್ಧಾರವಾಗಲಿದೆ ಎನ್ನುವ ಮಾತುಗಳು ಕೇಳಿ ಬದಿವೆ. ಸಭೆಗೆ ಈಗಾಗಲೇ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಆಗಮಿಸಿದ್ದಾರೆ.
ಸಭೆಯ ಕುರಿತು ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಭೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅಸಮಾಧಾನ ಹೊಂದಿರುವ ಶಾಸಕರೊಂದಿಗೆ ನಾನು ಮಾತನಾಡಿ, ಸಮಸ್ಯೆ ಬಗೆಹರಿಸುತ್ತೇವೆ. ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದಾರೆ.
Comments are closed.