ಮನೋರಂಜನೆ

ಡಿಎಂಕೆ-ಕಾಂಗ್ರೆಸ್ ಮೈತ್ರಿಕೂಟ ಸೇರಲು ಕಮಲ್ ಹಾಸನ್​ಗೆ ಆಹ್ವಾನ

Pinterest LinkedIn Tumblr


ಚೆನ್ನೈ: ದೇಶಾದ್ಯಂತ ಮೈತ್ರಿ ಕಸರತ್ತು ಮಾಡುತ್ತಿರುವ ಕಾಂಗ್ರೆಸ್ ಪಕ್ಷ ತಮಿಳುನಾಡಿನಲ್ಲಿ ಕಮಲಹಾಸನ್ ಅವರ ಮಕ್ಕಳ್ ನೀದಿ ಮೈಯಂ ಪಕ್ಷವನ್ನು ಸೆಳೆಯಲು ಯತ್ನಿಸಿದೆ. ಡಿಎಂಕೆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ಪಕ್ಷ ಈಗ ಕಮಲ್ ಹಾಸನ್ ಅವರತ್ತಲೂ ಕೈಚಾಚಿದೆ. ಸಮಾನ ಮನಸ್ಕ ಪಕ್ಷಗಳು ಒಟ್ಟು ಸೇರಿ ಮೈತ್ರಿ ಮಾಡಿಕೊಳ್ಳೋಣ ಎಂದು ಕಾಂಗ್ರೆಸ್ ಪಕ್ಷವು ಕಮಲ್ ಹಾಸನ್ ಮನವೊಲಿಸಲು ಯತ್ನಿಸಿದೆ.

ತಮಿಳುನಾಡಿನ ಕಾಂಗ್ರೆಸ್ ಉಸ್ತುವಾರಿ ಸಂಜಯ್ ದತ್ ಅವರು ಮೈತ್ರಿ ಕಸರತ್ತಿನ ನೇತೃತ್ವ ವಹಿಸಿದ್ದಾರೆ. “ರಾಹುಲ್ ಗಾಂಧಿ ಮತ್ತು ಸ್ಟ್ಯಾಲಿನ್ ಇಬ್ಬರೂ ಜಾತ್ಯತೀತ ಶಕ್ತಿಗಳನ್ನ ಒಗ್ಗೂಡಿಸಲು ಯತ್ನಿಸುತ್ತಿದ್ದಾರೆ. ಕಮಲ್ ಹಾಸನ್ ಕೂಡ ಕೋಮುವಾದಿ ಶಕ್ತಿಗಳ ವಿರುದ್ಧ ಹೇಳಿಕೆ ನೀಡುತ್ತಿರುವುದು ನಮ್ಮ ಅರಿವಿನಲ್ಲಿದೆ. ಈಗ ಎಲ್ಲಾ ಜಾತ್ಯತೀತ ಮತ್ತು ಪ್ರಜಾತಂತ್ರೀಯ ಶಕ್ತಿಗಳು ಒಗ್ಗೂಡುವ ಸಮಯ ಬಂದಿದ್ದು, ಕಮಲ್ ಹಾಸನ್ ಅವರು ಈ ಮೈತ್ರಿಕೂಟ ಸೇರುವ ನಿರ್ಧಾರ ಕೈಗೊಳ್ಳಬೇಕಿದೆ,” ಎಂದು ಸಂಜಯ್ ದತ್ ಹೇಳಿದ್ದಾರೆ.

ರಾಜಕೀಯವಾಗಿ ಕಮಲ್ ಹಾಸನ್ ಅವರು ಕಾಂಗ್ರೆಸ್ ವಿರೋಧಿಯಲ್ಲ. ಆದರೆ, ಡಿಎಂಕೆಯನ್ನು ವಿರೋಧಿಸಿಕೊಂಡು ಬಂದಿರುವ ಕಮಲ್ ಹಾಸನ್ ಅವರಿಗೆ ಡಿಎಂಕೆ ಜೊತೆ ಕಾಂಗ್ರೆಸ್ ಕೈಜೋಡಿಸಿರುವುದು ಇಷ್ಟವಿಲ್ಲ. ಡಿಎಂಕೆ ಜೊತೆಗಿನ ಮೈತ್ರಿಯನ್ನು ಕಾಂಗ್ರೆಸ್ ಕೈಬಿಟ್ಟರೆ 2019ರ ಚುನಾವಣೆಯಲ್ಲಿ ತಾನು ಮೈತ್ರಿ ಮಾಡಿಕೊಳ್ಳಲು ಸಿದ್ಧ ಎಂದು ಕಾಲಿವುಡ್ ಸೂಪರ್ ಸ್ಟಾರ್ ಇಚ್ಛೆ ವ್ಯಕ್ತಪಡಿಸಿದ್ದಾರೆ.

ಆದರೆ, ಜಾತ್ಯತೀತ ನೆಲೆಗಟ್ಟಿನಲ್ಲಿ ಡಿಎಂಕೆ-ಕಾಂಗ್ರೆಸ್ ಮೈತ್ರಿಕೂಟಕ್ಕೆ ಕಮಲ್ ಹಾಸನ್ ಅವರನ್ನು ಸೆಳೆಯಲು ಸುನೀಲ್ ದತ್ ಪ್ರಯತ್ನಿಸುತ್ತಿದ್ದಾರೆ. ಜಾತ್ಯತೀತತೆಯಷ್ಟೇ ಅಲ್ಲದೆ, ಭ್ರಷ್ಟಾಚಾರ ಹಾಗೂ ಅಮೂಲಾಗ್ರ ಅಭಿವೃದ್ಧಿ ವಿಚಾರದಲ್ಲೂ ಈ ಮೂರು ಪಕ್ಷಗಳು ಸಮಾನ ಮನಸ್ಕವಾಗಿವೆ ಎಂದು ಸುನೀಲ್ ದತ್ ಅಭಿಪ್ರಾಯಪಟ್ಟಿವೆ.

ಅತ್ತ, ರಾಹುಲ್ ಗಾಂಧಿ ಅವರೇ ಪ್ರಧಾನಿ ಆಗಬೇಕು ಎಂದು ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಅವರು ಹೇಳುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಆಪ್ಯಾಯಮಾನವಾಗಿದ್ಧಾರೆ. ಎಲ್ಲಾ ರಾಜ್ಯಗಳಲ್ಲಿ ಪ್ರಬಲ ಮೈತ್ರಿ ರಚಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ತಮಿಳುನಾಡಿನಲ್ಲಿ ಡಿಎಂಕೆ ಒಳ್ಳೆಯ ಜೊತೆಗಾರನಾಗಿದೆ. ಇದರ ಜೊತೆಗೆ ಕಮಲ್ ಹಾಸನ್ ಶಕ್ತಿ ಸೇರಿದರೆ ತಮ್ಮ ಮೈತ್ರಿಕೂಟಕ್ಕೆ ಗೆಲುವು ನಿಶ್ಚಿತ ಎಂಬುದು ಕೈ ಲೆಕ್ಕಾಚಾರ.

ತಮಿಳುನಾಡಿನಲ್ಲಿ ಜಯಲಲಿತಾ ಮತ್ತು ಕರುಣಾನಿಧಿ ನಿಧನದ ನಂತರ ರಾಜಕೀಯ ಶೂನ್ಯತೆ ನೆಲಸಿದೆ. ಅವರಿಬ್ಬರ ಸ್ಥಾನವನ್ನು ತುಂಬಲು ಹಲವರು ಪ್ರಯತ್ನಿಸುತ್ತಿದ್ದಾರೆ. ಸ್ಟಾಲಿನ್, ಎಂಕೆ ಅಳಗಿರಿ, ಪನ್ನೀರ್ ಸೆಲ್ವಂ, ಟಿಟಿವಿ ದಿನಕರನ್, ಪಳನಿಸ್ವಾಮಿ, ಕಮಲ್ ಹಾಸನ್, ರಜನಿಕಾಂತ್ ಅವರು ಪೈಪೋಟಿ ನಡೆಸುತ್ತಿದ್ಧಾರೆ. ಈಗಿನ್ನೂ ರಾಜಕೀಯ ಹೆಜ್ಜೆ ಹಾಕುತ್ತಿರುವ ಕಮಲ್ ಹಾಸನ್ ಮತ್ತು ರಜನಿಕಾಂತ್ ಅವರ ಜನಪ್ರಿಯತೆ ಎಷ್ಟಿದೆ ಎಂಬ ಸುಳಿವು ಇನ್ನೂ ಸಿಗಬೇಕಿದೆ. ಇತ್ತೀಚಿನ ಕೆಲ ಚುನಾವಣೆಗಳನ್ನು ಗಮನಿಸಿದರೆ ಸ್ಟಾಲಿನ್ ಮತ್ತು ಟಿಟಿವಿ ದಿನಕರನ್ ಅವರು ಪ್ರಬಲ ರಾಜಕೀಯ ಶಕ್ತಿಗಳಾಗಿ ಹೊಮ್ಮಬಹುದು ಎಂದೆನ್ನಲಾಗುತ್ತಿದೆ.

Comments are closed.