ಮನೋರಂಜನೆ

ರಾಕಿಂಗ್ ಸ್ಟಾರ್ ಹೂಳೆತ್ತಿಸಿದ್ದ ಕೆರೆಯಿಂದ ಬರ ಮಾಯ!

Pinterest LinkedIn Tumblr


­ಕೊಪ್ಪಳ : ಜಿಲ್ಲೆಯಲ್ಲಿ ಕಳೆದ 20 ವರ್ಷಗಳಲ್ಲಿಯೇ ಭೀಕರ ಬರ ಆವರಿಸಿದೆ. ಹನಿ ನೀರಿಗೂ ತತ್ವಾರ ಎದುರಾಗಿದೆ. ಬಹುತೇಕ ಕೆರೆ-ಕಟ್ಟೆಗಳು ಒಣಗಿ ಹೋಗಿವೆ. ಆದರೆ, ನಟ ಯಶ್‌ ಅವರು ತಮ್ಮ ಯಶೋಮಾರ್ಗ ಸಂಸ್ಥೆಯಿಂದ ಹೂಳು ತೆಗೆಸಿದ್ದ ಯಲಬುರ್ಗಾ ತಾಲೂಕಿನ ತಲ್ಲೂರು ಕೆರೆ ಭೀಕರ ಬರದಲ್ಲಿಯೂ ತುಂಬಿಕೊಂಡು ಕಂಗೊಳಿಸುತ್ತಿದೆ. ಇದರಿಂದ ಸುತ್ತ ಹತ್ತಾರು ಗ್ರಾಮಗಳ ಬಾಯಾರಿಕೆ ನೀಗಿದೆಯಲ್ಲದೆ ಅಂತರ್ಜಲ ವೃದ್ಧಿಯಾಗಿದ್ದರಿಂದ ಬೆಳೆಗಳು ಕಂಗೊಳಿಸುತ್ತಿವೆ.

ರಾಜ್ಯಾದ್ಯಂತ ಯಶ್‌ ಅವರು ನಟಿಸಿರುವ ‘ಕೆಜಿಎಫ್‌’ ಚಿತ್ರದ ಸದ್ದು ಜೋರಾಗಿಯೇ ಇರುವ ವೇಳೆಯಲ್ಲಿಯೇ ಅವರ ಸಮಾಜಿಮುಖಿ ಕಾರ್ಯವೂ ವ್ಯಾಪಕ ಪ್ರಶಂಸೆಗೆ ಪಾತ್ರವಾಗುತ್ತಿದ್ದು, ಅನೇಕ ರೈತರ ಬದುಕಿಗೆ ದಾರಿಯಾಗಿದೆ. ತಲ್ಲೂರು ಕೆರೆ ಬಹುದೊಡ್ಡ ಕೆರೆಯಾಗಿದ್ದರೂ ಹಲವು ವರ್ಷಗಳಿಂದ ನಿರ್ವಹಣೆ ಇಲ್ಲದೆ ಹೂಳು ತುಂಬಿಕೊಂಡಿತ್ತು. ಹನಿ ನೀರೂ ಇರಲಿಲ್ಲ. ನಟ ಯಶ್‌ ಸುಮಾರು 1.5 ಕೋಟಿಗೂ ಹೆಚ್ಚು ಹಣ ವಿನಿಯೋಗಿಸಿ, ತಮ್ಮ ಯಶೋಮಾರ್ಗ ಸಂಸ್ಥೆಯ ಮೂಲಕ ತಲ್ಲೂರು ಕೆರೆಯ ಹೂಳು ತೆಗೆಸಿದ್ದರು. ಕೆರೆಯ ಹೂಳು ತೆಗೆಯುವ ವೇಳೆಯಲ್ಲಿಯೇ 2017ರ ಏಪ್ರಿಲ್‌ ಬಿರು ಬೇಸಿಗೆಯಲ್ಲಿಯೇ ಕೆರೆಯ ಅಡಿಯಲ್ಲಿ ನೀರು ಬಂದು, ಅಚ್ಚರಿ ಮೂಡಿಸಿತ್ತು.

ಭೀಕರ ಬರದಲ್ಲಿಯೂ ಬತ್ತದ ಕೆರೆ: ಈಗ ಜಿಲ್ಲಾದ್ಯಂತ ಭೀಕರ ಬರ ಆವರಿಸಿದರೂ ಕೆರೆಯ ನೀರು ಬತ್ತಿಲ್ಲ. ಸುತ್ತಮುತ್ತಲ ಪ್ರದೇಶದಲ್ಲಿ ಅಂತರ್ಜಲ ಹೆಚ್ಚಳವಾಗಿದೆ. ಗೆದಗೇರಿ ಗ್ರಾಮದ ರುದ್ರಪ್ಪ ನಡುಲಮನಿ ಅವರ ಬೋರ್‌ವೆಲ್‌ನಲ್ಲಿ 8 ವರ್ಷಗಳಿಂದಲೂ ನೀರಿರಲಿಲ್ಲ. 4 ಎಕರೆಯಲ್ಲಿ ಬೆಳೆದಿದ್ದ ಮಾವು ನೀರಿಲ್ಲದೆ ಒಣಗಿ ಹೋಗಿತ್ತು. ತಲ್ಲೂರು ಕೆರೆಯ ಹೂಳು ತೆಗೆದು, ನೀರು ತುಂಬಿಕೊಳ್ಳುತ್ತಿದ್ದಂತೆ ರುದ್ರಪ್ಪ ನಡುಲಮನಿ ಅವರ ಬೋರ್‌ವೆಲ್‌ ರೀಚಾಜ್‌ರ್‍ ಆಗಿದೆ. ಈಗ ಪುನಃ ನೀರಾವರಿ ಮಾಡುತ್ತಿದ್ದು, ಮೆಕ್ಕೆಜೋಳವನ್ನು ಅತ್ಯುತ್ತಮವಾಗಿ ಬೆಳೆದಿದ್ದಾರೆ.

ಅಷ್ಟೇ ಯಾಕೆ? ಹತ್ತು ವರ್ಷಗಳ ಹಿಂದೆ ಗೆದಗೇರಿ ಗ್ರಾಮದ ಮರಿಯಪ್ಪ ಹರಿಜನ ಬೋರ್‌ವೆಲ್‌ ಕೊರೆಯಿಸಿದ್ದರು. ಹನಿ ನೀರೂ ಬಂದಿರಲಿಲ್ಲ. ಕೆರೆ ತುಂಬಿದ ಬಳಿಕ ಈಗ ಮರಿಯಪ್ಪ ಅವರ ಪಾಳುಬಿದ್ದ ಬೋರ್‌ವೆಲ್‌ನಲ್ಲಿ ನೀರು ಬಂದಿದೆ. ಅದಕ್ಕೆ ಪಂಪ್‌ಸೆಟ್‌ ಅಳವಡಿಸಿ, ನೀರಾವರಿ ಮಾಡಲು ಪ್ರಾರಂಭಿಸಿದ್ದಾರೆ. ಮೆಕ್ಕೆಜೋಳ ಬಂಪರ್‌ ಬೆಳೆ ಬಂದಿದ್ದು, ಸೂರ್ಯಕಾಂತಿ ಬಿತ್ತನೆಗೆ ತಯಾರಿ ನಡೆಸಿದ್ದಾರೆ.

ಇವು ಕೇವಲ ಉದಾಹರಣೆ ಅಷ್ಟೇ ಕೆರೆಯ ಸುತ್ತಲೂ ಇರುವ ತಲ್ಲೂರು, ಕುಟುಗುಂಟಿ, ಚಿಕ್ಕಮ್ಯಾಗೇರಿ, ಸಾಲಬಾವಿ, ಜರಕುಂಟಿ, ಕುದರಿಮೋತಿ, ಮದ್ಲೂರು ಸೇರಿದಂತೆ ಯಲಬುರ್ಗಾ ಪಟ್ಟಣದವರೆಗೂ ಅಂತರ್ಜಲ ವೃದ್ಧಿಯಾಗಿದೆ. ರೈತರು ಭೀಕರ ಬರ ಇದ್ದರೂ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.

ಶುಭ ಹಾರೈಕೆ: ಯಶ್‌ ಅಭಿನಯದ ‘ಕೆಜಿಎಫ್‌’ ಬಿಡುಗಡೆಯಾಗಿರುವ ಹಿನ್ನೆಲೆಯಲ್ಲಿ ತಲ್ಲೂರು ಕೆರೆಯ ಭಾಗದ ರೈತರು ಶುಭ ಹಾರೈಸಿದ್ದಾರೆ. ರೈತರ ಬದುಕು ಹಸನ ಮಾಡಿದ, ಬರದಿಂದ ಬಳಲಿದ್ದ ರೈತರ ಬದುಕಿಗೆ ದಾರಿ ಮಾಡಿಕೊಟ್ಟಅವರ ಚಲನಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದ್ದಾರೆ.

ಸರ್ಕಾರ ಬರ ಪರಿಹಾರ ನೀಡುವ ಬದಲು ಇಂಥ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವಂತಾಗಬೇಕು. ನಟ ಯಶ್‌ ಅವರು ಹೂಳು ತೆಗೆಸಿದ ಕೆರೆ ಭೀಕರ ಬರದಲ್ಲಿಯೂ ತುಂಬಿದ್ದು, ಅಂತರ್ಜಲ ವೃದ್ಧಿಯಾಗಲು ಸಹಾಯವಾಗಿದೆ. ಹತ್ತಾರು ಹಳ್ಳಿಗಳ ಬಾಯಾರಿಕೆ ನೀಗಿದೆ. ಇಂಥ ಬರದಲ್ಲಿಯೂ ತಲ್ಲೂರು ಕೆರೆ ಜನ, ಜಾನುವಾರುಗಳಿಗೂ ಆಸರೆಯಾಗಿರುವುದಂತೂ ಸತ್ಯ.

-ರಮೇಶ ಬಳೂಟಗಿ, ಜಲ ಕಾರ್ಯಕರ್ತ

Comments are closed.