
ಕುಣಿಗಲ್: ಬೈಕ್ ಮತ್ತು ಸೈಕಲ್ ನಡುವೆ ಸಂಭವಿಸಿದ ಅಪಘಾತದಲ್ಲಿ ದಕ್ಷ ಜಿಲ್ಲಾಧಿಕಾರಿ ದಿವಂಗತ ಡಿ.ಕೆ.ರವಿ ಅವರ ಸಹೋದರ ತೀವ್ರ ಗಾಯಗೊಂಡಿರುವ ಘಟನೆ ಹುಲಿಯೂರುದುರ್ಗ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ತಾಲ್ಲೂಕಿನ ದೊಡ್ಡಕೊಪ್ಪಲು ಗ್ರಾಮದ ನಿವಾಸಿ ಡಿ.ಕೆ.ರಮೇಶ್ ತೀವ್ರ ಗಾಯಗೊಂಡಿರುವ ಬೈಕ್ ಸವಾರ. ಈತ ನಿನ್ನೆ ಜಮೀನಿನ ವಿಚಾರವಾಗಿ ತಾಲ್ಲೂಕಿನ ಕಚೇರಿಗೆ ಬಂದು ಸ್ವಗ್ರಾಮಕ್ಕೆ ಹಿಂದಿರುಗುತ್ತಿದ್ದರು. ಹುಲಿಯೂರುದುರ್ಗ ಬೈಪಾಸ್ ರಸ್ತೆ ಸಂಪಲಾಪುರದ ಬಳಿ ಸೈಕಲ್ ತಳ್ಳಿಕೊಂಡು ಹೋಗತ್ತಿದ್ದ ಭೈರಪ್ಪ ಮತ್ತು ಮರಿಯಪ್ಪ ಹಿಂಬದಿಯಿಂದ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಡಿ.ಕೆ.ರಮೇಶ್ ಅವರ ತಲೆಗೆ ತೀವ್ರಪೆಟ್ಟಾಗಿದ್ದು , ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೈಕಲ್ ಸವಾರರಿಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಹುಲಿಯೂರುದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.