
ನವದೆಹಲಿ: ಉರಿ ಉಗ್ರ ದಾಳಿ ಪ್ರಕರಣದ ಬಳಿಕ ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವಿನ ಸಂಬಂಧ ಸಂಪೂರ್ಣ ಹಳಸಿದ್ದು, ಯಾವುದೇ ಕ್ಷಣದಲ್ಲಿ ತನ್ನ ಮೇಲೆ ಭಾರತ ಮುಗಿ ಬೀಳಬಹುದು ಎಂದೆಣಿಸಿರುವ ಪಾಕಿಸ್ತಾನ ಸೇನೆ ಭಾರಿ ತಯಾರಿಯನ್ನೇ ನಡೆಸುತ್ತಿದೆ.
ಉರಿ ಉಗ್ರ ದಾಳಿ ಹಿನ್ನಲೆಯಲ್ಲಿ ಉಭಯ ದೇಶಗಳ ನಾಯಕರ ವಾಕ್ಸಮರ ಮುಂದುವರೆದಿರುವಂತೆಯೇ ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟಿರುವ ಪಾಕಿಸ್ತಾನ ಭಾರತ ತನ್ನ ಮೇಲೆ ಮುಗಿ ಬೀಳಬಹುದು ಎಂದು ಭಾವಿಸಿ ಸೈನಿಕ ತಾಲೀಮನ್ನು ಕೂಡ ಆರಂಭಿಸಿದೆ ಎಂದು ಹೇಳಲಾಗುತ್ತಿದೆ. ಇದರ ಮೊದಲ ಭಾಗವಾಗಿ ನಿನ್ನೆ ಪಾಕಿಸ್ತಾನ ಸೇನೆಗೆ ಸೇರಿದ ಜೆಟ್ ವಿಮಾನವೊಂದು ಹೆದ್ದಾರಿಯಲ್ಲಿ ಲ್ಯಾಂಡಿಂಗ್ ಮಾಡುವ ಮೂಲಕ ತಾಲೀಮು ನಡೆಸಿದೆ.
ಒಂದು ವೇಳೆ ಭಾರತ ಪಾಕಿಸ್ತಾನ ವಿರುದ್ಧ ವಾಯು ದಾಳಿ ನಡೆಸಿದರೆ ಅದರ ಮೊದಲ ಗುರಿಯೇ ಪಾಕಿಸ್ತಾನದ ವಾಯು ನೆಲೆಗಳಾಗಿರಲಿದೆ. ಅಲ್ಲಿನ ರನ್ ವೇ ಗಳ ಮೇಲೆ ಬಾಂಬ್ ದಾಳಿ ನಡೆಸಿದರೆ ಅವು ನಾಶವಾಗುತ್ತವೆ. ಆಗ ಪಾಕಿಸ್ತಾನದ ಯುದ್ಧ ವಿಮಾನಗಳು ನಿಷ್ಕ್ರಿಯವಾಗಲಿವೆ. ಇದೇ ಕಾರಣಕ್ಕೆ ಪಾಕಿಸ್ತಾನ ಸೇನೆ ಹೆದ್ದಾರಿಯಲ್ಲಿ ಜೆಟ್ ವಿಮಾನವನ್ನು ಲ್ಯಾಂಡಿಂಗ್ ಮತ್ತು ಟೇಕ್ ಆಫ್ ಮಾಡಲಾಗಿದೆ ಮತ್ತು ರಾಜಧಾನಿ ಇಸ್ಲಾಮಾಬಾದ್ ಹೆದ್ದಾರಿಯಲ್ಲಿ ಆ ತಾಲೀಮು ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಯುದ್ಧ ಸನ್ನಾಹ ಅಲ್ಲಗಳೆದ ಪಾಕಿಸ್ತಾನ ಸೇನೆ
ಆದರೆ ಜೆಟ್ ಲ್ಯಾಂಡಿಂಗ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ ವಾಯುಸೇನಾ ವಕ್ತಾರ ಜಾವೆದ್ ಮೊಹಮದ್ ಅಲಿ ಅವರು, ಇದು ಯಾವುದೇ ರೀತಿಯ ಯುದ್ಧ ಸನ್ನಾಹವಲ್ಲ. ಬದಲಿಗೆ ಸಾಮಾನ್ಯ ಸೈನಿಕ ತಾಲೀಮಷ್ಟೇ. ಒಂದು ವೇಳೆ ಪಾಕಿಸ್ತಾನ ಸೇನೆಯ ವಾಯುನೆಲೆಗಳು ಕಾರಣಾಂತರಗಳಿಂದ ಅಲಭ್ಯವಾದರೆ ಅಥವಾ ಬಳಕೆ ಮಾಡಲಾಗದಷ್ಟು ತೊಂದರೆಯಾದರೆ ಈ ವೇಳೆ ಬದಲೀ ವ್ಯವಸ್ಥೆ ಏನು ಎಂಬುದರ ಕುರಿತು ಈ ತಾಲೀಮು ನಡೆಸಲಾಗಿದೆ. ಭಾರತದೊಂದಿಗಿನ ಸಂಬಂಧ ಪ್ರಸ್ತುತ ಕೊಂಚ ಹಳಸಿದೆ. ಈ ಹೊತ್ತಿನಲ್ಲೇ ಈ ತಾಲೀಮು ನಡೆಯುತ್ತಿದೆ. ಇದೇ ಕೇವಲ ಕಾಕತಾಳೀಯವಷ್ಟೇ ಎಂದು ಹೇಳಿದ್ದಾರೆ.
Comments are closed.