
ಬೆಂಗಳೂರು: ಪತ್ರಕರ್ತರು ಹಾಗೂ ವಿವಿಧ ಹಿಂದೂ ಸಂಘಟನೆಗಳ ಮುಖಂಡರ ಹತ್ಯೆಗೆ ಸಂಚುರೂಪಿಸಿದ್ದ ಪ್ರಕರಣದಲ್ಲಿ 13 ಮಂದಿಯ ವಿರುದ್ಧ ಆರೋಪ ಸಾಬೀತಾಗಿದ್ದು, ಎನ್ಐಎ ವಿಶೇಷ ನ್ಯಾಯಾಲಯ ಶುಕ್ರವಾರ ಶಿಕ್ಷೆ ಪ್ರಮಾಣ ಪ್ರಕಟಿಸಲಿದೆ.
ಶೋಯಬ್ ಅಹಮ್ಮದ್ ಮಿರ್ಜಾ ಅಲಿಯಾಸ್ ಚೋಟು, ಅಬ್ದುಲ್ ಹಕೀಂ, ರಿಯಾಜ್ ಅಹಮ್ಮದ್, ಮಹಮ್ಮದ್ ಅಕ್ರಮ್, ಉಬೇದುಲ್ಲಾ ಬಹದ್ದೂರ್ ಅಲಿಯಾಸ್ ಇಮ್ರಾನ್, ವಾಹಿದ್ ಹುಸೇನ್, ಡಾ.ಜಾಫರ್ ಇಕ್ಬಾಲ್ ಸೊಲ್ಲಾಪುರ, ಮಹಮ್ಮದ್ ಸಾದಿಕ್ ಲಷ್ಕರ್, ಬಾಬಾ ಅಲಿಯಾಸ್ ಮೆಹಬೂಬ್, ಜಾಕೀರ್ ಅಲಿಯಾಸ್ ಉಸ್ತಾದ್, ಉಬೇದುಲ್ಲಾ ಉರ್ ರೆಹಮಾನ್ ಮತ್ತು ಡಾ.ನಹೀಂ ಸಿದ್ದಿಕಿ, ಡಾ.ಇಮ್ರಾನ್ಅಹಮದ್ ಆರೋಪಿಗಳು.
ನಗರದ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದ ಲಷ್ಕರ್-ಎ-ತೈಯಬಾ (ಎಲ್ಇಟಿ) ಹಾಗೂ ಹರ್ಕತ್ ಉಲ್ ಜಿಹಾದ್ ಅಲ್ ಇಸ್ಲಾಮಿ (ಹುಜಿ) ಭಯೋತ್ಪಾದನಾ ಸಂಘಟನೆಯ 13 ಮಂದಿ ಶಂಕಿತ ಉಗ್ರರ ವಿರುದ್ಧ ರಾಷ್ಟ್ರೀಯ ತನಿಖಾ ದಳದ (ಎನ್ಐಎ) ಅಧಿಕಾರಿಗಳು ನಗರದ ಎನ್ಐಎ ವಿಶೇಷ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ಸಲ್ಲಿಸಿದ್ದರು.
2012ರಲ್ಲಿ ರಾಜ್ಯದ ಪ್ರಮುಖ ಸಂಸದರು, ಶಾಸಕರು, ಹಿಂದೂಪರ ಸಂಘಟನೆಗಳ ಮುಖಂಡರು ಹಾಗೂ ಕೆಲ ಪತ್ರಕರ್ತರ ಹತ್ಯೆಗೆ ಸಂಚು ರೂಪಿಸಿದ್ದರು. ಅಲ್ಲದೇ ವಿದೇಶದಲ್ಲಿ ನೆಲೆಸಿರುವ ಎಲ್ಇಟಿ ಉಗ್ರರ ನೆರವಿನಿಂದ ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸಲು ಉದ್ದೇಶಿಸಿದ್ದರು. ಈ ಕಾರಣಕ್ಕಾಗಿ ಸಾಕಷ್ಟು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದ್ದರು. ಜತೆಗೆ ಕಳವು ಮಾಡಿದ ವಾಹನಗಳನ್ನು ಕೃತ್ಯಕ್ಕೆ ಬಳಸಲು ನಿರ್ಧರಿಸಿದ್ದರು ಎಂಬ ಅಂಶಗಳನ್ನು ಆರೋಪ ಪಟ್ಟಿಲ್ಲಿ ಹೇಳಲಾಗಿತ್ತು.
ಗುರುವಾರ ವಿಚಾರಣೆ ನಡೆಸಿದ ನ್ಯಾಯಾಲಯ 13 ಮಂದಿ ವಿರುದ್ಧ ಆರೋಪ ಸಾಬೀತಾಗಿದೆ ಎಂದು ಹೇಳಿದ್ದು, ಶಿಕ್ಷೆ ಪ್ರಮಾಣವನ್ನು ಶುಕ್ರವಾರಕ್ಕೆ ಕಾಯ್ದಿರಿಸಿತು.
Comments are closed.