ಕರ್ನಾಟಕ

ಮತ್ತೊಂದು ಭ್ರಷ್ಟಾಚಾರ ಬಯಲು

Pinterest LinkedIn Tumblr

bbmp_logo

ಬೆಂಗಳೂರು, ಸೆ. ೧೫- ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ ಯೋಜನೆಯಡಿ ಕೋಟ್ಯಾಂತರ ರೂ. ಅನುದಾನ ಪಡೆದು ಅನಗತ್ಯವಾಗಿ ವೆಚ್ಚ ಮಾಡಿ ಪಾಲಿಕೆಯನ್ನೇ ವಂಚಿಸುತ್ತಿದ್ದ ಅಧಿಕಾರಿಗಳ ಭ್ರಷ್ಟಾಚಾರವನ್ನು ಪತ್ತೆ ಹಚ್ಚಿರುವ ಮೇಯರ್ ಮಂಜುನಾಥ ರೆಡ್ಡಿ, ಈ ಹಗರಣವನ್ನು ಟಿವಿಸಿಸಿಗೆ ಒಪ್ಪಿಸಿ ವರದಿ ಬಂದ ನಂತರ ಸಿಐಡಿ ತನಿಖೆಗೆ ಒಪ್ಪಿಸುವಂತೆ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಹೇಳಿದ್ದಾರೆ.
ನಗರದ ವಿದ್ಯಾಪೀಠ ವೃತ್ತ, ಟಿ.ಆರ್. ಮಿಲ್ ಹಾಗೂ ಸಿದ್ದಯ್ಯ ರಸ್ತೆಯಲ್ಲಿರುವ ಪಾಲಿಕೆಯ ಆಸ್ಪತ್ರೆಗಳೊಂದಿಗೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮುಜಾಹಿದ್ ಪಾಷ ಹಾಗೂ ಹಿರಿಯ ಆರೋಗ್ಯ ವೈದ್ಯಾಧಿಕಾರಿಗಳೊಂದಿಗೆ ಹಠಾತ್ ಭೇಟಿ ನೀಡಿದ್ದ ಮೇಯರ್ ಅವರು ಆಸ್ಪತ್ರೆಗಳಲ್ಲಿ ಅನಗತ್ಯವಾಗಿ ವೆಚ್ಚ ಮಾಡುತ್ತಿರುವ ಮಾಹಿತಿ ಪಡೆದು ದಂಗಾಗಿ ಹೋಗಿದ್ದಾರೆ.
ಮೂಲಭೂತ ಸೌಕರ್ಯವಿಲ್ಲದಿದ್ದರೂ, ಸುಮಾರು ೨೦ ಕೋಟಿ ರೂ. ಗೂ ಹೆಚ್ಚು ವಸ್ತುಗಳನ್ನು ಖರೀದಿಸಲು ನಾಲ್ಕು ಏಜೆನ್ಸಿಗಳಿಂದ ಖರೀದಿಸಲು ಮುಂದಾಗಿರುವುದು ಕೂಡ ಬೆಳಕಿಗೆ ಬಂದಿದೆ.
ಕೆಲವೆಡೆ ಟೆಂಡರ್ ಇಲ್ಲದಿದ್ದರೂ, ಅನಗತ್ಯವಾಗಿ ಪೀಠೋಪಕರಣಗಳನ್ನು ಖರೀದಿಸಿರುವುದು ಮೇಯರ್ ಭೇಟಿ ಕಾಲದಲ್ಲಿ ಪತ್ತೆಯಾಗಿದೆ.
ಆಯಾ ವಾರ್ಡ್‌ನ ಪಾಲಿಕೆ ಸದಸ್ಯರ ಗಮನಕ್ಕೂ ತರದೆ ಈ ಮೂರೂ ಆಸ್ಪತ್ರೆಗಳಲ್ಲಿ ಅನಗತ್ಯವಾಗಿ ೫ ರಿಂದ ೨೦ ಲಕ್ಷ ರೂ. ಗಳವರೆಗೆ ಸಿವಿಲ್ ಕಾಮಗಾರಿಗಳಿಗೆ ವೆಚ್ಚ ಮಾಡಲಾಗಿದೆ. ಗ್ರಾನೈಟ್‌ಗೂ ಬಣ್ಣ ಬಳಿಸಲಾಗಿದೆ. ಸುಸ್ಥಿತಿಯಲ್ಲಿದ್ದ ಟೈಲ್ಸ್‌ಗಳನ್ನು ತೆಗೆದು ಮತ್ತೆ ಬೇರೆ ಟೈಲ್ಸ್‌ಗಳನ್ನು ಹಾಕಿರುವುದು ಮೇಯರ್ ಗಮನಕ್ಕೆ ಬಂದಿದೆ.
ಆಸ್ಪತ್ರೆಗಳಲ್ಲಿ ದುಂದು ವೆಚ್ಚ ಮಾಡುತ್ತಿದ್ದ ಯೋಜನೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿರುವ ಮೇಯರ್ ಅವರು, ಈ ಹಗರಣದಲ್ಲಿ ಗುತ್ತಿಗೆದಾರರು ಹಾಗೂ
ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.
ಅನೆಸ್ತೇಷಿಯಾ ತಜ್ಞರಾಗಿರುವ ಸಿಪಿಎಂ ಬಾಲಸುಂದರ್ ಅವರು, ಕಾಮಗಾರಿಗಳಿಗೆ ಸಂಬಂಧಪಟ್ಟ ಚೆಕ್‌ಗಳಿಗೆ ಸಹಿ ಹಾಕುವ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ.
ಪಾಲಿಕೆಯ ಮುಖ್ಯ ಆರೋಗ್ಯಾಧಿಕಾರಿಗಳನ್ನು ನಿರ್ಲಕ್ಷ್ಯಿಸಿ ತಾವೇ ಸಹಿ ಮಾಡುವ ಅಧಿಕಾರವನ್ನು ಇಟ್ಟುಕೊಂಡು ಯೋಜನೆಯ ಅನುದಾನದ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆಪಾದಿಸಿದರು.
ಈ ಸಂದರ್ಭದಲ್ಲಿ ಆರೋಗ್ಯಾಧಿಕಾರಿ ಡಾ. ಲೋಕೇಶ್, ಮತ್ತಿತರರು ಉಪಸ್ಥಿತರಿದ್ದರು.

Comments are closed.