ಪುಣೆ : ಮೂರು ವಾರಗಳ ಹಿಂದೆ ಎವರೆಸ್ಟ್ ಶಿಖರವೇರಿದ ಪ್ರಥಮ ಭಾರತೀಯ ದಂಪತಿ ಎಂಬ ಸಾಧನೆಯ ಸಂಭ್ರಮವನ್ನು ಆಚರಿಸಿಕೊಂಡಿದ್ದ ಪೊಲೀಸ್ ದಂಪತಿ ದಿನೇಶ್ ಮತ್ತು ತಾರಕೇಶ್ವರಿ ರಾಠೊಡ್ ಇದೀಗ ತಮ್ಮ “ಮೋಸದ ಸಾಧನೆ’ಗಾಗಿ ತನಿಖೆಯನ್ನು ಎದುರಿಸುತ್ತಿದ್ದಾರೆ.
ದಿನೇಶ್ – ತಾರಕೇಶ್ವರಿ ದಂಪತಿ ಜೊತೆಗಿದ್ದ ಪರ್ವತಾರೋಹಿಗಳು “ಈ ದಂಪತಿ ಎವರೆಸ್ಟ್ ಶಿಖರವನ್ನು ಏರಿದ್ದೇ ಇಲ್ಲ; ಎವರೆಸ್ಟ್ ಶಿಖರದಲ್ಲಿ ತಾವು ನಿಂತಿರುವಂತೆ ಕಾಣಿಸುವ ಸೃಷ್ಟಿಸಿದ ಫೋಟೋವನ್ನು ಹಾಕಿಕೊಂಡಿದ್ದಾರೆ’ ಎಂದು ದೂರು ನೀಡಿದ್ದಾರೆ.
“ದಿನೇಶ್ – ತಾರಕೇಶ್ವರಿ ಪೊಲೀಸ್ ದಂಪತಿಯ ಎವರೆಸ್ಟ್ ಶಿಖರಾರೋಹಣದ ಸುಳ್ಳು ಸಾಧನೆಯ ವಿರುದ್ಧ ದೂರು ನೀಡಲು ಅವರ ಜತೆಗಿದ್ದ ಪರ್ವತಾರೋಹಿಗಳು ನನ್ನನ್ನು ಸಂಪರ್ಕಿಸಿದ್ದಾರೆ. ಅವರ ಅಭಿಪ್ರಾಯಗಳ ಆಧಾರದಲ್ಲಿ ನಾನು ಕೆಲವು ಪರ್ವತಾರೋಹಿ ತಜ್ಞರನ್ನು ಮಾತನಾಡಿಸಿದ್ದೇನೆ. ಅಂತೆಯೇ ಸಹಾಯಕ ಪೊಲೀಸ್ ಕಮಿಷನರ್ ಅವರಿಗೆ ಈ ಪ್ರಕರಣದ ಬಗ್ಗೆ ತನಿಖೆ ಕೈಗೊಳ್ಳುವಂತೆ ಸೂಚಿಸಿದ್ದೇನೆ’ ಎಂದು ಪುಣೆಯ ಪೊಲೀಸ್ ಕಮಿಷನರ್ ರಶ್ಮೀ ಶುಕ್ಲಾ ಹೇಳಿರುವುದಾಗಿ ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ.
ಎವರೆಸ್ಟ್ ಶಿಖರವೇರಿದ ಸುಳ್ಳು ಫೋಟೋ ಮತ್ತು ಆ ಕುರಿತ ತನಿಖೆಯ ಬಗ್ಗೆ ಪ್ರಶ್ನಿಸಲಾದಾಗ ತಾರಕೇಶ್ವರಿ ರಾಠೊಡ್ ಅವರು “ಈ ವಿಷಯವು ಈಗ ಪುಣೆ ಪೊಲೀಸರು ಮತ್ತು ನೇಪಾಲ ಸರಕಾರದಿಂದ ತನಿಖೆಯಲ್ಲಿರುವುದರಿಂದ ನಾನು ಯಾವುದೇ ಪ್ರತಿಕ್ರಿಯೆ ನೀಡುವಂತಿಲ್ಲ’ ಎಂದು ಹೇಳಿ ಜಾರಿಕೊಂಡಿದ್ದಾರೆ.
ಆದರೆ ಈ ಪ್ರಕರಣ ಬಗ್ಗೆ ನೇಪಾಲ ಸರಕಾರ ತನಿಖೆಯನ್ನು ಆರಂಭಿಸಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಮಾಧ್ಯಮಕ್ಕೆ ಇನ್ನೂ ಸಾಧ್ಯವಾಗಿಲ್ಲ.
ಕಳೆದ ಮೇ 23ರಂದು ಎವರೆಸ್ಟ್ ಶಿಖರವೇರಿದ ಸಾಧನೆ ಮಾಡಿರುವ ದೇಶದ ಮೊದಲ ದಂಪತಿ ಎಂದು ಇದೇ ಜೂನ್ 6ರಂದು ದೇಶದ ಬಹುತೇಕ ಹೆಚ್ಚಿನ ಪತ್ರಿಕೆಗಳು ರಾಠೊಡ್ ದಂಪತಿಯ ಸಾಧನೆಯನ್ನು ಫೋಟೋ ಸಹಿತವಾಗಿ ಕೊಂಡಾಡಿದ್ದವು.
ಆದರೆ ಈ ಸಾಧನೆ ಸುಳ್ಳೆಂದೂ ಅದನ್ನು ತೋರಿಸುವ ಫೋಟೋ ಸೃಷ್ಟಿಸ್ಪಲ್ಪಟ್ಟದ್ದೆಂದೂ ಇದೇ ಜೂನ್ 16ರಂದು ಪರ್ವತಾರೋಹಿಗಳಾದ ಅಂಜಲಿ ಕುಲಕರ್ಣಿ, ಶರದ್ ಕುಲಕರ್ಣಿ, ಸುರೇಂದ್ರ ಶೇಳ್ಕೆ, ಆನಂದ್ ಬಾನ್ಸೋಡ್, ಶ್ರೀಕಾಂತ್ ಚವಾಣ್, ರೂಪಾಲಿ ಚವಾಣ್, ಮನೀಶಾ ವಾಗ್ಮಾರೆ ಮತ್ತು ಅಮಿತ್ ಸಿಂಗ್ ಅವರು ಪುಣೆಯ ಪೊಲೀಸ್ ಕಮಿಷನರ್ ಕಾರ್ಯಾಲಯದಲ್ಲಿ ದೂರು ದಾಖಲಿಸಿದ್ದರು.
-ಉದಯವಾಣಿ
Comments are closed.