ಬೆಂಗಳೂರು: ಮದ್ಯದ ಅಮಲಿನಲ್ಲಿ ಆಫ್ರಿಕಾ ವಿದ್ಯಾರ್ಥಿನಿ ಮರಿಯಾ ನಡೆಸಿದ ರಂಪಾಟದಿಂದ ಎಚ್ಚೆತ್ತಿರುವ ರಾಜಧಾನಿಯ ಪೊಲೀಸರು, ಅಕ್ರಮವಾಗಿ ನೆಲೆಸಿರುವ ಆಫ್ರಿಕನ್ ಪ್ರಜೆಗಳ ಗಡಿಪಾರು ಕಾರ್ಯಕ್ಕೆ ಮುಂದಾಗಿದ್ದಾರೆ.
ವಿದ್ಯಾಭ್ಯಾಸ, ವೈದ್ಯಕೀಯ ಸೌಲಭ್ಯ, ಉದ್ಯೋಗ ಹಾಗೂ ಇನ್ನಿತರ ನೆಪದಲ್ಲಿ ವೀಸಾ ಪಡೆದು ಬೆಂಗಳೂರಿಗೆ ಎಂಟು ಸಾವಿರ ಆಫ್ರಿಕಾನ್ ಪ್ರಜೆಗಳು ಬಂದಿದ್ದಾರೆ. ಈ ಪೈಕಿ 600 ವಿದ್ಯಾರ್ಥಿಗಳು ವೀಸಾ ಅವಧಿ ಮುಗಿದರೂ ಅಕ್ರಮವಾಗಿ ವಾಸವಾಗಿದ್ದು, ಇವರನ್ನು ಪತ್ತೆಹಚ್ಚಿ ಗಡಿಪಾರು ಮಾಡಲು
ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಕೆ.ವಿ.ಶರತ್ ಚಂದ್ರ ತಿಳಿಸಿದ್ದಾರೆ.
ಮಾದಕ ಸೇವಿಸಿದ್ದರ ಬಗ್ಗೆ ಮಾಹಿತಿಯಿಲ್ಲ: ಕಂಠಪೂರ್ತಿ ಮದ್ಯ ಸೇವನೆ ಮಾಡಿ ದಾಂಧಲೆ ನಡೆಸಿದ್ದ ನೈಜೀರಿಯಾ ಪ್ರಜೆ ಮರಿಯಾ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಆಕೆಯನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾದಕ ವಸ್ತು ಸೇವನೆ ಮಾಡಿರುವ ಬಗ್ಗೆ ವೈದ್ಯರಿಂದ ಯಾವುದೇ ವರದಿ ಲಭ್ಯವಾಗಿಲ್ಲ. ಈ ಪ್ರಕರಣದ ಸಂಬಂಧ ತನಿಖೆ ನಡೆಸಿ ವರದಿ ಕೊಡಲು ಉಪ್ಪಾರಪೇಟೆ ಇನ್‌ಸ್ಪೆಕ್ಟರ್ ಯು.ಟಿ.ಕೃಷ್ಣಕುಮಾರ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸೋಮವಾರ ಮದ್ಯದ ಅಮಲಿನಲ್ಲಿ ಸ್ನೇಹಿತನೊಂದಿಗೆ ಸಾರ್ವಜನಿಕವಾಗಿಯೇ “ಮುತ್ತಿನಾಟ’ಕ್ಕೆ ತೊಡಗಿದ್ದ ಮಾರಿಯಾ ಅದಕ್ಕೆ ಆಕ್ಷೇಪಿಸಿದ್ದ ಸ್ಥಳೀಯರೊಂದಿಗೆ ಜಗಳಕ್ಕಿಳಿದಿದ್ದಳು. ಅಲ್ಲದೆ, ವಿಚಾರಿಸಲು ಬಂದಿದ್ದ ಪೊಲೀಸರನ್ನೂ ಅಟ್ಟಾಡಿಸಿದ್ದಳು. ಹೀಗಾಗಿ ಆಕೆಯನ್ನು ಚಿಕಿತ್ಸೆಗಾಗಿ ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ನಿಮ್ಹಾನ್ಸ್‌ಗೆ ಕಳುಹಿಸಲಾಗಿತ್ತು.
ಸೋಮವಾರ ಗಾಂಧಿನಗರದ ನ್ಯಾಷನಲ್ ಮಾರ್ಕೆಟ್, ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ದಾಂಧಲೆ ನಡೆಸಿ ಬಳಿಕ ನಿಮ್ಹಾನ್ಸ್‌ಗೆ ದಾಖಲಾಗಿದ್ದ ಮರಿಯಾ, ಆಫ್ರಿಕಾ ಖಂಡದ ಐವರಿ ಕೋಸ್ಟ್ ಮೂಲದವಳು. ವಿದ್ಯಾಭ್ಯಾಸದ ವೀಸಾ ಪಡೆದು ಬೆಂಗಳೂರಿಗೆ ಬಂದಿದ್ದು, ಖಾಸಗಿ ಕಾಲೇಜಿನಲ್ಲಿ ಬಿಬಿಎಂ ವ್ಯಾಸಂಗ
ಮಾಡುತ್ತಿದ್ದಳು.
ಮಾರಿಯಾಗೆ ನಿಮ್ಹಾನ್ಸ್‌ನಲ್ಲಿ ಕೌನ್ಸಲಿಂಗ್: ಸೋಮವಾರ ರಾತ್ರಿ ಮಾರಿಯಾ ನಿಮ್ಹಾನ್ಸ್‌ಗೆ ದಾಖಲಾದಾಗ ಮದ್ಯದ ಅಮಲಿನಲ್ಲಿದ್ದಳು. ಹೀಗಾಗಿ ಅಮಲು ಇಳಿಸುವ ಚುಚ್ಚುಮದ್ದು ಕೊಡಲಾಗಿತ್ತು. ಪ್ರಜ್ಞೆ ಬಂದ ಬಳಿಕ ಮಂಗಳವಾರ ಆಕೆಗೆ ಮನೋವೈದ್ಯರಿಂದ ಕೌನ್ಸೆಲಿಂಗ್ ನೀಡಲಾಗಿದೆ. ಬಳಿಕ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾರಿಯಾ ಸಂಪೂರ್ಣವಾಗಿ ಚೇತರಿಸಿಕೊಂಡ ಬಳಿಕ ಆಕೆಯನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗುವುದು. ವೀಸಾ ಮತ್ತು ಐಡಿ ಕಾರ್ಡ್‌ಗಳು ಮನೆಯಲ್ಲಿ ಇರುವುದಾಗಿ ಆಕೆ ಹೇಳಿಕೆ ನೀಡಿದ್ದಾಳೆ. ಸಂಪೂರ್ಣ ಚೇತರಿಕೆ ಕಂಡ ಬಳಿಕ ಆಕೆಯ ಮನೆ ಮತ್ತು ಕಾಲೇಜಿಗೆ ತೆರಳಿ ದಾಖಲಾತಿಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಉಪ್ಪಾರಪೇಟೆ ಪೊಲೀಸರು ತಿಳಿಸಿದ್ದಾರೆ.
-ಉದಯವಾಣಿ
Comments are closed.