ಬೆಂಗಳೂರು: ಒಂದು ಪದಾಧಿಕಾರಿ ಹುದ್ದೆಗೆ ಹತ್ತಾರು ಜನ ಆಕಾಂಕ್ಷಿಗಳಿದ್ದಾರೆ. ಅವರಿಗೆಲ್ಲ ಯಾವ ರೀತಿ ಸ್ಥಾನ ಕಲ್ಪಿಸೋದು ಅಂತ ಅವರೇ ಉತ್ತರಿಸಲಿ ಎಂದು ಹೇಳುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಕೆಎಸ್ ಈಶ್ವರಪ್ಪ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುಧವಾರ ಡಾಲರ್ಸ್ ಕಾಲೋನಿಯ ನಿವಾಸದಲ್ಲಿ ಮಾತಕತೆ ನಡೆಸಿ, ಮಂಗಳವಾರ ಪಕ್ಷದ ಕಚೇರಿಯಲ್ಲಿ ಕೆಎಸ್ ಈಶ್ವರಪ್ಪ ನೇತೃತ್ವದಲ್ಲಿ ನಡೆದಿದ್ದ ಸಭೆಯ ವಿವರಗಳನ್ನು ಪಡೆದುಕೊಂಡು ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಹಾಜರಿದ್ದರು.
ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಿನ್ನೆ ಬಿಜೆಪಿ ಕಚೇರಿಯಲ್ಲಿ ನಡೆದಿರೋದು ಅತೃಪ್ತರ ಸಭೆ ಅಲ್ಲ. ಪಕ್ಷದಲ್ಲಿ ಗೊಂದಲ ಇರೋದು ನಿಜ. ಈಶ್ವರಪ್ಪ ನಮ್ಮ ದೊಡ್ಡ ನಾಯಕರು, ಅವರ ಸಲಹೆಗಳನ್ನು ಪರಿಗಣಿಸುತ್ತೇನೆ. ಪದಾಧಿಕಾರಿಗಳ ಪಟ್ಟಿ ಪುನಾರಚನೆ ಇಲ್ಲ. ಅದೇ ರೀತಿ ಎಲ್ಲರಿಗೂ ಸ್ಥಾನ ಕೊಡಲು ಸಾಧ್ಯವಿಲ್ಲ ಎಂದು ಈಶ್ವರಪ್ಪಗೆ ಟಾಂಗ್ ನೀಡಿದರು.
ಕೆಎಸ್.ಈಶ್ವರಪ್ಪ, ಸಿ.ಟಿ.ರವಿ, ಅರವಿಂದ ಲಿಂಬಾವಳಿಗೆ ಸೂಕ್ತ ಸ್ಥಾನ ನೀಡಲಾಗಿದೆ. ಹಾಗಾಗಿ ಅಸಮಾಧಾನದ ಪ್ರಶ್ನೆ ಎಲ್ಲಿದೆ ಎಂದು ಬಿಎಸ್ ವೈ ಪ್ರಶ್ನಿಸಿದರು.
ನನ್ನಿಂದ ಯಾರಿಗೂ ತೊಂದರೆಯಾಗಲ್ಲ: ಶೋಭಾ ಕರಂದ್ಲಾಜೆ
ನನ್ನಿಂದ ಯಾರಿಗೂ ತೊಂದರೆಯಾಗಲ್ಲ. ಪಕ್ಷದ ಪರವಾಗಿ ಕೆಲಸ ಮಾಡ್ತೇನೆ ಅಷ್ಟೇ…ಪಕ್ಷದ ಅಧ್ಯಕ್ಷರು ಕೊಟ್ಟ ಕೆಲಸ ಮಾಡುತ್ತಿದ್ದೇನೆ. ಪದಾಧಿಕಾರಿಗಳ ನೇಮಕದಲ್ಲಿ ನನ್ನ ಕೈವಾಡ ಇಲ್ಲ. ನನ್ನ ಮೇಲಿನ ಆರೋಪ ಸತ್ಯಕ್ಕೆ ದೂರವಾದ ಸಂಗತಿ. ತೊಂದರೆಯಾದರೆ ಅವರೊಂದಿಗೆ ಮಾತನಾಡಲು ನಾನು ಸಿದ್ಧ. ಎಲ್ಲ ಬೆಳವಣಿಗೆಗಳನ್ನು ಕೇಂದ್ರದ ವರಿಷ್ಠರ ಗಮನಕ್ಕೆ ತಂದಿದ್ದೇವೆ. ಪಕ್ಷದ ಅಧ್ಯಕ್ಷರು ಎಲ್ಲರನ್ನು ಸಮಾಧಾನ ಮಾಡುತ್ತಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ ನೀಡಿದ್ದಾರೆ.
ಮಂಗಳವಾರ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಮುಖಂಡ ಕೆಎಸ್ ಈಶ್ವರಪ್ಪ ನೇತೃತ್ವದಲ್ಲಿ ನಡೆದಿದ್ದ ಸಭೆಯಲ್ಲಿ, ಪಕ್ಷ ಸಂಘಟನೆ ವಿಷಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮತ್ತು ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಅವರು ಎಲ್ಲರನ್ನು ಒಟ್ಟಿಗೆ ಕರೆದೊಯ್ಯದೆ ಏಕಪಕ್ಷೀಯ ಹಾಗೂ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದು ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದರು.
-ಉದಯವಾಣಿ
Comments are closed.