ಕರ್ನಾಟಕ

ಜೆಡಿಎಸ್ ಭಿನ್ನಮತ; ಜಮೀರ್, ಚಲುವರಾಯಸ್ವಾಮಿ, ಬಾಲಕೃಷ್ಣ ಸೇರಿದಂತೆ 8 ಶಾಸಕರ ಅಮಾನತು

Pinterest LinkedIn Tumblr

JDS

ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ವಿಪ್‌ ಉಲ್ಲಂಘಿಸಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿದ ಎಂಟು ಜನ ಶಾಸಕರನ್ನು ಜೆಡಿಎಸ್ ಪಕ್ಷದಿಂದ ಅಮಾನತು ಮಾಡಲಾಗಿದೆ.

ಇಂದು ಅರಮನೆ ಮೈದಾನದಲ್ಲಿ ನಡೆದ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಯ ಹಿನ್ನೆಲೆಯಲ್ಲಿ 8 ಶಾಸಕರನ್ನು ಅಮಾನತುಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ಉಪನಾಯಕ ವೈಎಸ್ ವಿ ದತ್ತಾ ತಿಳಿಸಿದ್ದಾರೆ.

ಶಾಸಕರಾದ ಜಮೀರ್ ಅಹಮದ್ ಖಾನ್, ಚಲುವರಾಯಸ್ವಾಮಿ, ಎಚ್.ಸಿ ಬಾಲಕೃಷ್ಣ, ಕೆ. ಗೋಪಾಲಯ್ಯ, ಭೀಮಾ ನಾಯ್ಕ್ ಹಾಗೂ ರಮೇಶ್ ಬಂಡಿಸಿದ್ದೇಗೌಡ ಮತ್ತು ಇಕ್ಬಾಲ್ ಅನ್ಸಾರಿ, ಅಖಂಡ ಶ್ರೀನಿವಾಸ ಮೂರ್ತಿ ಅವರುಗಳನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ ಎಂದು ಅಮಾನತು ನಿರ್ಣಯವನ್ನು ವೈಎಸ್ ವಿ ದತ್ತಾ ಮಂಡಿಸಿದರು. ಇನ್ನೂ ಬಂಡಾಯ ಶಾಸಕರ ಅಮಾನತಿಗೆ ಕಾರ್ಯಕರ್ತರು ಹರ್ಷ ವ್ಯಕ್ತ ಪಡಿಸಿದ್ದಾರೆ.

ಇನ್ನೂ ಇಂದು ನಡೆದ ಪದಾಧಿಕಾರಿಗಳ ಸಭೆಯಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಗೈರಾಗಿದ್ದರು. ವಿಧಾನ ಪರಿಷತ್ ಹಾಗೂ ರಾಜ್ಯಸಭಾ ಚುನಾವಣೆ ಸಮಯದಲ್ಲಿ ಪಕ್ಷದಲ್ಲಿ ತೀವ್ರಗೊಂಡ ಭಿನ್ನಮತದ ಶಮನಕ್ಕೆ ದೇವೇಗೌಡ ಹಾಗೂ ಕುಮಾರಸ್ವಾಮಿ ಮುಂದಾಗಿದ್ದರು. ಆದರೆ, ಕೊನೆ ಕ್ಷಣದವರೆಗೂ ನಡೆಸಿದ ಕಸರತ್ತು ಫಲ ನೀಡದ ಕಾರಣ ಶಿಸ್ತು ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Comments are closed.