ಕರಾವಳಿ

ಮೊಯ್ಲಿ ಹಾಗೂ ಎಂಜಿನಿಯರ್ ವೇಣುಗೋಪಾಲ್ ವಿರುದ್ಧ ನ್ಯಾಯಾಂಗ ನಿಂದನೆ : ಕ್ಷಮೆಯಾಚಿಸಲು ಕೆ.ಎನ್. ಸೋಮಶೇಖ ಆಗ್ರಹ

Pinterest LinkedIn Tumblr

yettinahole_Press_2

ಮಂಗಳೂರು : ಎತ್ತಿನಹೊಳೆ ಯೋಜನೆಗೆ ಇದ್ದ ಎಲ್ಲ ಅಡೆತಡೆ ನಿವಾರಣೆಯಾಗಿದೆ ಎಂದು ಚಿಕ್ಕಬಳ್ಳಾಪುರ ಸಂಸದ ವೀರಪ್ಪಮೊಯ್ಲಿ ಹಾಗೂ ಕರ್ನಾಟಕ ನೀರಾವರಿ ನಿಗಮ(ಕೆಎನ್‍ಎನ್‍ಎಲ್)ದ ಮುಖ್ಯ ಎಂಜಿನಿಯರ್ ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ದಾರೆ.ಆದರೆ ಇದು ಸತ್ಯಕ್ಕೆ ದೂರವಾದ ವಿಚಾರವಾಗಿದ್ದು ಮೊಯ್ಲಿಯವರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು, ಇಲ್ಲವಾದಲ್ಲಿ ಅವರ ವಿರುದ್ಧ ನ್ಯಾಯಾಂಗ ನಿಂದನೆಯ ದೂರು ದಾಖಲಿಸಲಾಗುವುದು ಎಂದು ಪಶ್ಚಿಮ ಘಟ್ಟ ಸಂರಕ್ಷಣಾ ಸಮಿತಿ ಸಂಚಾಲಕ ಬೆಂಗಳೂರಿನ ಕೆ.ಎನ್. ಸೋಮಶೇಖರ್ ಹೇಳಿದ್ದಾರೆ.

ಶುಕ್ರವಾರ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆಗೆ ಅರಣ್ಯ ಇಲಾಖೆಯಾಗಲೀ, ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದಿಂದಾಗಲೀ ಅನುಮತಿ ದೊರಕಿಲ್ಲ. ನ್ಯಾಯಾಧಿಕರಣವು ಪ್ರಕರಣದ ವಿಚಾರಣೆಯನ್ನು ನಡೆಸುತ್ತಿದೆ. ವಿಚಾರಣೆ ಪೂರ್ಣಗೊಳ್ಳುವವರೆಗೆ ಯಥಾಸ್ಥಿತಿಯನ್ನು ಕಾಪಾಡುವಂತೆ ಸೂಚಿಸಿದೆ. ಆದರೆ ಎತ್ತಿನಹೊಳೆ ಯೋಜನೆ ಪರವಾಗಿರುವ ಮಾಜಿ ಮುಖ್ಯಮಂತ್ರಿ, ಚಿಕ್ಕಬಳ್ಳಾಪುರ ಸಂಸದ ಡಾ. ಎಂ. ವೀರಪ್ಪ ಮೊಯ್ಲಿ ಹಾಗೂ ಕರ್ನಾಟಕ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ವೇಣುಗೋಪಾಲ್ ಎತ್ತಿನಹೊಳೆ ಯೋಜನೆಗೆ ಇದ್ದ ಎಲ್ಲ ಅಡೆತಡೆ ನಿವಾರಣೆಯಾಗಿದೆ ಎಂದು ಹೇಳುವ ಮೂಲಕ ನ್ಯಾಯಾಂಗ ನಿಂದನೆಗೈದಿದ್ದು, ಈ ಬಗ್ಗೆ 15 ದಿನಗಳೊಳಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸದಿದ್ದರೆ ದೂರು ದಾಖಲಿಸುವುದಾಗಿ ಹೇಳಿದರು.

yettinahole_Press_3

ಈ ವರ್ಷ ಜನವರಿಯಲ್ಲಿ ಎನ್‌‌ಜಿಟಿಯಲ್ಲಿ ಎತ್ತಿನಹೊಳೆ ವಿಚಾರ ವಿಚಾರಣೆಗೆ ಬಂದಾಗ, ಫೆಬ್ರವರಿಯಲ್ಲಿ ನ್ಯಾಯಾಲಯವು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿತ್ತು. ಆಗ ನಾನು ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ, ಪುರುಷೋತ್ತಮ ಚಿತ್ರಾಪುರ, ಯತಿರಾಜು ಮತ್ತು ಕಿಶೋರ್ ಹಾಸನ ಸಲ್ಲಿಸಿದ ಅರ್ಜಿಯನ್ನು ಒಟ್ಟಿಗೆ ವಿಚಾರಣೆ ನಡೆಸುತ್ತಿದೆ. ಮುಂದಿನ ವಿಚಾರಣೆಯನ್ನು ಜು.4ಕ್ಕೆ ಮುಂದೂಡಲಾಗಿದೆ. ಈ ಯೋಜನೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿರುವುದಾಗಿ ಅರ್ಜಿದಾರರು ಶಂಕೆ ವ್ಯಕ್ತಪಡಿಸಿದ್ದರು. ಅಲ್ಲದೆ ಈ ಯೋಜನೆಯಿಂದ ಬಯಲುಸೀಮೆಗೆ 24 ಟಿಎಂಸಿ ನೀರು ಪೂರೈಸಲು ಸಾಧ್ಯವಾಗದು ಎಂಬುದನ್ನು ನ್ಯಾಯಾಲಯಕ್ಕೆ ಮನದಟ್ಟು ಮಾಡಲಾಗಿದೆ ಎಂದು ಅವರು ಹೇಳಿದರು.

yettinahole_Press_4

ನ್ಯಾಯಾಧಿಕರಣವು ಪ್ರಕರಣದ ವಿಚಾರಣೆಯನ್ನು ನಡೆಸುತ್ತಿದ್ದು, ವಿಚಾರಣೆ ಪೂರ್ಣಗೊಳ್ಳುವವರೆಗೆ ಯಥಾಸ್ಥಿತಿಯನ್ನು ಕಾಪಾಡುವಂತೆ ಸೂಚಿಸಿದೆ. ಈ ನಡುವೆ, ವೀರಪ್ಪ ಮೊಯ್ಲಿ ಹಾಗೂ ಮುಖ್ಯ ಎಂಜಿನಿಯರ್ ವೇಣುಗೋಪಾಲ್ ಅವರು ಕಾಮಗಾರಿ ನಡೆಸಲು ಅನುಮತಿ ಸಿಕ್ಕಿದೆ ಎಂದು ಬಹಿರಂಗವಾಗಿ ಹೇಳಿದ್ದಾರೆ. ಹೀಗೆ ಬಯಲುಸೀಮೆಯ ಜನತೆಯನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ. ಇದಕ್ಕಾಗಿ ಕ್ಷಮೆ ಕೋರುವಂತೆ ವಕೀಲರ ಮೂಲಕ 15 ದಿನಗಳ ಗಡುವು ವಿಧಿಸಿ ಇವರಿಬ್ಬರಿಗೆ ನೋಟಿಸ್ ನೀಡಲಾಗಿದೆ ಎಂದರು .

ಪತ್ರಿಕಾಗೋಷ್ಠಿಯಲ್ಲಿ ಸಹ್ಯಾದ್ರಿ ಸಂಚಯದ ಸಂಚಾಲಕ ದಿನೇಶ್ ಹೊಳ್ಳ, ಸದಸ್ಯರಾದ ಶಶಿಧರ ಶೆಟ್ಟಿ, ಕಟೀಲು ದಿನೇಶ್ ಪೈ ಉಪಸ್ಥಿತರಿದ್ದರು.

Comments are closed.