ಕರ್ನಾಟಕ

ಬಿಜೆಪಿ ಅಧಿಕಾರ ಹಿಡಿಯುವ ಭ್ರಮೆಯಲ್ಲಿದೆ : ಸಿದ್ದರಾಮಯ್ಯ

Pinterest LinkedIn Tumblr

siddಮೈಸೂರು, ಮೇ 23- ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಭ್ರಮೆಯಲ್ಲಿದೆ. ಮುಂದಿನ 2018ರ ಚುನಾವಣೆಯಲ್ಲೂ ನಾವೇ ಅಧಿಕಾರ ಹಿಡಿಯಲಿದ್ದೇವೆ. ಬಿಜೆಪಿ ಯಾವುದೇ ಕಾರಣಕ್ಕೂ ಅಧಿಕಾರ ಹಿಡಿಯುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಸಿದ್ದರಾಮಯ್ಯ ಅವರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರ, ಮಹದಾಯಿ ಇನ್ನಿತರ ಸಮಸ್ಯೆಗಳ ಬಗ್ಗೆ ಬಿಜೆಪಿಯವರು ಕೇಂದ್ರದ ಮೇಲೆ ಯಾವುದೇ ಒತ್ತಡ ಹಾಕುತ್ತಿಲ್ಲ. ಸುಮ್ಮನೆ ಬುರುಡೆ ಬಿಟ್ಟುಕೊಂಡು ತಮಟೆ ಬಾರಿಸುತ್ತ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಯಡಿಯೂರಪ್ಪ ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ಜೈಲಿಗೆ ಹೋಗಿ ಬಂದಿರುವ ವಿಚಾರ ಜನತೆಗೆ ತಿಳಿದಿದೆ. ಬಿಜೆಪಿ ಬಗ್ಗೆಯೂ ತಿಳಿದಿದೆ. ಮುಂದಿನ ಚುನಾವಣೆಯಲ್ಲೂ ಕಾಂಗ್ರೆಸ್ ಬಹುಮತದೊಂದಿಗೆ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ ರಾಜ್ಯದಲ್ಲಿ ಸಮಾವೇಶ ಮಾಡುತ್ತಿದೆ. ಆದರೆ, ಬರ ನಿರ್ವಹಣೆಗಾಗಿ 2273 ಕೋಟಿ ರೂ.ಗಳನ್ನು ಕೋರಿದ್ದರೂ ಕೇಂದ್ರ ನಮಗೆ ಅಷ್ಟು ಹಣ ನೀಡಿಲ್ಲ. ಬದಲಿಗೆ ಬೇರೆ ರಾಜ್ಯಗಳಿಗಿಂತ ನಮಗೆ ಕಡಿಮೆ ಹಣ ಒದಗಿಸಿದೆ. ಮಹದಾಯಿ ವಿಷಯದಲ್ಲಿ ಪರಿಹಾರ ಕಂಡುಕೊಳ್ಳಲು ತಾರತಮ್ಯ ನೀತಿ ಅನುಸರಿಸುತ್ತಿದೆ. ಬಿಜೆಪಿ ಮುಖಂಡರಾಗಲಿ, ಸಂಸದರಾಗಲಿ ಯಾರೂ ಇದನ್ನು ಪ್ರಶ್ನೆ ಮಾಡುತ್ತಿಲ್ಲ. ಕೇವಲ ಇಲ್ಲಿನ ಅಧಿಕಾರದ ಬಗ್ಗೆ ಮಾತ್ರ ಮಾತನಾಡುತ್ತಾರೆ ಎಂದು ಟೀಕಿಸಿದರು.

ಕಾಂಗ್ರೆಸ್ ಮುಕ್ತ ಭಾರತ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಐದು ರಾಜ್ಯಗಳ ಚುನಾವಣೆಯಲ್ಲಿ ಹೆಚ್ಚು ಕಡೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ. ಅದು ಹೇಗೆ ಸಾಧ್ಯವಾಯಿತು. ದೇಶಾದ್ಯಂತ ಎಷ್ಟು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ ಎಂದು ಪ್ರಶ್ನಿಸಿದರು. ಬರದ ಬಗ್ಗೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ವರದಿ ನೀಡಲು ಸೂಚಿಸಿದ್ದೇನೆ. ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಸಿದ್ದರಾಮಯ್ಯಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಅಸ್ಸೋಂ ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಳೆದ 15 ವರ್ಷಗಳಿಂದ ಅಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದು, ಜನರೇ ಬಿಜೆಪಿಗೆ ಈ ಬಾರಿ ಅಧಿಕಾರ ಕೊಟ್ಟಿದ್ದಾರೆ ಎಂದರು. ದಲಿತ ಸಿಎಂ ಬಗ್ಗೆ ಕೇಳಿದ ಪ್ರಶ್ನೆಗೆ ದಲಿತರಾಗಬೇಕೋ ಅಥವಾ ಬೇರೆ ಯಾರಾದರೂ ಮುಖ್ಯಮಂತ್ರಿಯಾಗಬೇಕೋ ಎಂಬ ಬಗ್ಗೆ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ. ಈ ಬಗ್ಗೆ ಸುಮ್ಮನೆ ಚರ್ಚೆ ಬೇಡ ಎಂದು ಪ್ರತಿಕ್ರಿಯಿಸಲು ನಿರಾಕರಿಸಿದರು. ಇದೇ ವೇಳೆ ಸಾರ್ವಜನಿಕರು ನೀಡಿದ ಅಹವಾಲುಗಳನ್ನು ಮುಖ್ಯಮಂತ್ರಿ ಸ್ವೀಕರಿಸಿ ಅವರ ಸಮಸ್ಯೆ ಬಗೆಹರಿಸುವಂತೆ ಭರವಸೆ ನೀಡಿದರು.

Comments are closed.