ಮನೋರಂಜನೆ

ಕಬೀರಗೆ ಶಿವರಾಜಕುಮಾರ್‌ ನೃತ್ಯ ನಿರ್ದೇಶನ

Pinterest LinkedIn Tumblr

Kabira-(4)ಶಿವರಾಜಕುಮಾರ್‌ ಈಗ ಇನ್ನೂ ಒಂದು ಹೊಸ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಇದುವರೆಗೂ ನಾಯಕ ಮತ್ತು ಗಾಯಕರಾಗಿ ಗುರುತಿಸಿಕೊಂಡಿದ್ದ ಅವರು, ಇದೀಗ “ಸಂತೆಯಲ್ಲಿ ನಿಂತ ಕಬೀರ’ ಚಿತ್ರದ ಮೂಲಕ ನೃತ್ಯ ನಿರ್ದೇಶಕರೂ ಆಗಿದ್ದಾರೆ ಎನ್ನುವುದು ವಿಶೇಷ. ಆ ಚಿತ್ರದಲ್ಲಿ ಒಂದು ಹಾಡಿಗೆ ಅವರು ನೃತ್ಯ ನಿರ್ದೇಶನವನ್ನೂ ಮಾಡಿದ್ದಾರೆ.

ಹೌದು, ಚಿತ್ರದ ಒಂದು ಹಾಡಿಗೆ ಒಬ್ಬ ನೃತ್ಯ ನಿರ್ದೇಶಕ, ನೃತ್ಯ ಸಂಯೋಜನೆ ಮಾಡುವ ಬದಲು ಹೊಸಬರು ಯಾರಾದರೂ ಮಾಡಿದರೆ ಫ್ರೆಶ್‌ ಆಗಿರುತ್ತದೆ ಎಂದು ಚಿತ್ರತಂಡದ ಅಭಿಪ್ರಾಯವಂತೆ. ಈ ಕುರಿತು ಶಿವರಾಜಕುಮಾರ್‌ ಅವರೊಂದಿಗೆ ಚರ್ಚಿಸಿದಾಗ, ಅವರೇ ನೃತ್ಯ ನಿರ್ದೇಶನ ಮಾಡುವುದಕ್ಕೆ ಒಪ್ಪಿಕೊಂಡಿದ್ದಾರೆ. ಇದು ಮಾಮೂಲೀ ಡ್ಯಾನ್ಸ್‌ ಇರುವ ಹಾಡಲ್ಲ. ನಾಯಕ ಮತ್ತು ನಾಯಕಿ ಬಹಳ ಸಹಜವಾಗಿ ಹಾಡುವಂತಹ ಹಾಡಿದು. ಹಾಗಾಗಿ ಶಿವರಾಜಕುಮಾರ್‌ ಅವರು ಇದಕ್ಕೆ ಯಾವುದೇ ವಿಶೇಷ ತಯಾರಿ ಮಾಡಿಕೊಳ್ಳದೆಯೇ, ಲೊಕೇಶನ್‌ಗೆ ತಕ್ಕ ಹಾಗೆ ಸಹಜವಾಗಿ ನೃತ್ಯ ನಿರ್ದೇಶನ ಮಾಡಿಸಿದ್ದಾರಂತೆ. ಈ ಹಾಡನ್ನು ಚಿಕ್ಕಮಗಳೂರಿನ ಬೆಟ್ಟ ಗುಡ್ಡಗಳ ಬಳಿ ಮೂರು ದಿವಸಗಳ ಕಾಲ ಚಿತ್ರೀಕರಣ ಮಾಡಲಾಗಿದೆ.

“ನಮಗೆ ರೆಗ್ಯುಲರ್‌ ನೃತ್ಯ ನಿರ್ದೇಶಕರು ಬೇಕಿರಲಿಲ್ಲ. ಫ್ರೆಶ್‌ ಆಗಿ ಏನಾದರೂ ಬೇಕಾಗಿತ್ತು. ಅದಕ್ಕೆ ಸರಿಯಾಗಿ ಶಿವಣ್ಣ, ಅಲ್ಲಿನ ಲೊಕೇಶನ್‌ ಗಳಿಗೆ ತಕ್ಕ ಹಾಗೆ ಆ ಹಾಡನ್ನು ಕಟ್ಟಿಕೊಟ್ಟಿದ್ದಾರೆ’ ಎನ್ನುತ್ತಾರೆ ನರೇಂದ್ರ ಬಾಬು. ಬರೀ ಅಷ್ಟೇ ಅಲ್ಲ, ಚಿತ್ರದ ಮೇಕಿಂಗ್‌ನಲ್ಲಿ ಶಿವರಾಜಕುಮಾರ್‌ ಅವರ ಪಾತ್ರ ಬಹಳ ದೊಡ್ಡದಿತ್ತು ಎನ್ನುತ್ತಾರೆ ಬಾಬು. “ಎಷ್ಟೋ ಬಾರಿ ಅವರೇ ಪೊಸಿಷನ್‌ ಕೊಡುತ್ತಿದ್ದರು.

ಚಿತ್ರೀಕರಣ ನೋಡೋಕೆ ಬಂದ ಜನರನ್ನ ಕಂಟ್ರೋಲ್‌ ಮಾಡುತ್ತಿದ್ದರು. ಎಷ್ಟೋ ಬಾರಿ ಅವರೇ ಟ್ರಾಲಿ ತಳ್ಳುತ್ತಿದ್ದರು. ಇದೆಲ್ಲದರ ಜೊತೆಗೆ ನಟನೆ ಮಾಡುತ್ತಾ, ನಮ್ಮ ತಂಡಕ್ಕೆ ಒಂದಿಷ್ಟು ಸಲಹೆಗಳನ್ನು ಕೊಡುತ್ತಾ, ಜೊತೆಗೆ ಒಂದು
ಹಾಡಿನ ನೃತ್ಯ ನಿರ್ದೇಶನವನ್ನೂ ಮಾಡಿದ್ದಾರೆ’ ಎಂದು ಹೇಳುತ್ತಾರೆ ಅವರು.

“ಸಂತೆಯಲ್ಲಿ ನಿಂತ ಕಬೀರ’ ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಬಹುತೇಕ ಮುಗಿದಿದ್ದು, ಬಹುಶಃ ಜೂನ್‌ ಅಥವಾ ಜುಲೈ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಈಗಾಗಲೇ ಇಸ್ಮಾಯಿಲ್‌ ದರ್ಬಾರ್‌ ಅವರು ಸಂಗೀತ ಸಂಯೋಜಿಸಿರುವ ಹಾಡುಗಳು ಬಿಡುಗಡೆಯಾಗಿವೆ, ಭೀಷ್ಮ ಸಹಾನಿ ಅವರ “ಕಬೀರಾ ಖಡೇ ಬಾಜಾರ್‌ ಮೇ’ ಎಂಬ ನಾಟಕದಿಂದ ಸ್ಫೂರ್ತಿಗೊಂದು ಗೋಪಾಲ್‌ ವಾಜಪೇಯಿ ಅವರು ಕನ್ನಡಕ್ಕೆ ಬರೆದಿರುವ “ಸಂತೆಯಲ್ಲಿ ನಿಂತ ಕಬೀರ’ ನಾಟಕವೇ ಈ ಚಿತ್ರಕ್ಕೆ ಸ್ಫೂರ್ತಿ. ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಗೋಪಾಲ ವಾಜಪೇಯಿ ಬರೆದಿದ್ದಾರೆ. ಇನ್ನು
ಶಿವರಾಜಕುಮಾರ್‌ ಅವರು ಕಬೀರ ಪಾತ್ರವನ್ನು ಮಾಡಿದರೆ, ಶರತ್‌ ಕುಮಾರ್‌ ಅವರು ಸಿಖಂದರ್‌ ಲೋಧಿಯಾಗಿ ಕಾಣಿಸಿಕೊಂಡಿದ್ದಾರೆ.

ಜೊತೆಗೆ ಅನಂತ್‌ನಾಗ್‌, ಸನುಷಾ ಸಂತೋಷ್‌, ಭಾಗೀರಥಿ ಬಾಯಿ ಕದಂ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
-ಉದಯವಾಣಿ

Comments are closed.