ಮನೋರಂಜನೆ

ಬಲ್ಗೇರಿಯಾದಲ್ಲಿ ಜಾಗ್ವಾರ್‌ ಫೈಟ್‌

Pinterest LinkedIn Tumblr

Jaguar-Shooting-In-Bulgariaಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಬಲ್ಗೇರಿಯಾಗೆ ಸದ್ದಿಲ್ಲದೆ ಪ್ರಯಾಣ ಬೆಳೆಸಿದ್ದಾರೆ. ಯಾಕೆ ಗೊತ್ತಾ? “ಜಾಗ್ವಾರ್‌’ ಚಿತ್ರದ ಹೊಡೆದಾಟದ ದೃಶ್ಯಗಳಿಗೆ ಲೊಕೇಶನ್‌ ಹುಡುಕುವುದಕ್ಕೆ. ಇತ್ತೀಚೆಗೆ ಕುಮಾರಸ್ವಾಮಿ ಮತ್ತು ನಿರ್ದೇಶಕ ಮಹದೇವ್‌ ಇಬ್ಬರೂ, ಬಲ್ಗೇರಿಯಾದ ರಾಜಧಾನಿ ಸೋμಯಾಗೆ ಚಿತ್ರದ ಪ್ರಮುಖ ಚೇಸಿಂಗ್‌ ಮತ್ತು ಹೊಡೆದಾಟದ ದೃಶ್ಯಗಳಿಗೆ ಚಿತ್ರೀಕರಣ ಮಾಡುವುದಕ್ಕೆ ಲೊಕೇಶನ್‌ ನೋಡುವುದಕ್ಕೆ ಹೋಗಿದ್ದಾರೆ.

ಬಲ್ಗೇರಿಯಾಗೆ ಯಾಕೆ ಎಂಬ ಪ್ರಶ್ನೆ ಬರಬಹುದು. ಚೇಸಿಂಗ್‌ ಮತ್ತು ಹೊಡೆದಾಟದ ದೃಶ್ಯಗಳಿಗೆ ಹಾಲಿವುಡ್‌ ಚಿತ್ರದವರು ಸಹ ಅಲ್ಲಿಗೇ ಹೋಗುವುದು. ಇನ್ನು ಅಲ್ಲಿ ಚಿತ್ರೀಕರಣ ಮಾಡುವುದು ಸುಲಭ ಮತ್ತು ಸ್ವಲ್ಪ ಕಡಿಮೆ ವೆಚ್ಚದಲ್ಲಿ ಚಿತ್ರೀಕರಣ ಮಾಡಬಹುದಂತೆ. ಅದೇ ಕಾರಣಕ್ಕೆ ಬಲ್ಗೇರಿಯಾದಲ್ಲಿ ಚಿತ್ರೀಕರಣ ಮಾಡುವ ಯೋಚನೆಯನ್ನು
ಕುಮಾರಸ್ವಾಮಿ ಹಾಕಿಕೊಂಡಿದ್ದಾರೆ. ಅಷ್ಟೇ ಅಲ್ಲ, ಅಲ್ಲಿನ ಜನಪ್ರಿಯ ಸಾಹಸ ನಿರ್ದೇಶಕ ಕಲಾಯೋನ್‌ ವೊಡೆಂಚಿರಾವ್‌ ಅವರ ಹತ್ತಿರ ಸಾಹಸ ದೃಶ್ಯಗಳನ್ನು ಸಂಯೋಜಿಸುತ್ತಿದ್ದಾರಂತೆ.

ಈ ಕಲಾಯೋನ್‌ ವೊಡೆಂಚಿರಾವ್‌ ಅಲಿಯಾಸ್‌ ಕಾಲಾ, “ಗೆಟ್‌ ಅವೆ’, “ಕಿಲ್ಲಿಂಗ್‌ ಸೀಸನ್‌’, “ಅಸಾಸಿನ್ಸ್‌ ಬುಲೆಟ್‌’,
“ದಿ ಫಾರಿನರ್‌’ ಮುಂತಾದ ಹಲವು ಹಾಲಿವುಡ್‌ ಚಿತ್ರಗಳಿಗೆ ಮತ್ತು ಶಾರೂಖ್‌ ಖಾನ್‌ ಅಭಿನಯದ “ದಿಲ್‌ವಾಲೆ’ ಚಿತ್ರಕ್ಕೆ ಸಾಹಸ ಸಂಯೋಜನೆಯನ್ನು ಮಾಡಿದ್ದಾರೆ.

ಈಗ ಮೊದಲ ಬಾರಿಗೆ ಕನ್ನಡ ಚಿತ್ರ ವೊಂದರ ಸಾಹಸ ದೃಶ್ಯಗಳ ನಿರ್ದೇಶನ ಮಾಡುತ್ತಿದ್ದಾರೆ. ಈ ಸಾಹಸ ದೃಶ್ಯಗಳಲ್ಲಿ ಚೇಸಿಂಗ್‌, ಫೈಟಿಂಗ್‌, ಸ್ಮಾಶಿಂಗ್‌ ಎಲ್ಲವೂ ಇದ್ದು, ಬಲ್ಗೇರಿಯಾ ಸರ್ಕಾರ ಸಂಪೂರ್ಣ ಸಹಕಾರ ಕೊಡುವುದಕ್ಕೆ ಮುಂದಾಗಿದೆಯಂತೆ. ಅಲ್ಲಿನ ನಗರ ಆಡಳಿತ ಮತ್ತು ಪ್ರವಾಸೋದ್ಯಮ ಇಲಾಖೆಯು, ಚಿತ್ರತಂಡಕ್ಕೆ ಯಾವುದೇ ಸಮಸ್ಯೆಯಾಗದಂತೆ ಸಹಕರಿಸುವುದಕ್ಕೆ ಒಪ್ಪಿಕೊಂಡಿರುವುದರಿಂದ, ಅಲ್ಲೇ ಚಿತ್ರೀಕರಣ ಮಾಡುವುದಕ್ಕೆ ಕುಮಾರಸ್ವಾಮಿ ನಿರ್ಧರಿಸಿದ್ದಾರೆ. ಈ ಫೈಟ್‌ ಒಟ್ಟಾರೆ ಒಂದು ತಿಂಗಳ ಕಾಲ ನಡೆಯಲಿದೆ. ಮೊದಲಿಗೆ 15 ದಿವಸ ತಾಲೀಮಾದರೆ, ಇನ್ನು 15 ದಿವಸ ಚಿತ್ರೀಕರಣ ಮಾಡಲಾಗುತ್ತದಂತೆ.

ಸುಮಾರು ಎರಡು ಸಾವಿರ ತಂತ್ರಜ್ಞರು, 4 ಫ್ಲೈಕ್ಯಾಮ್‌ಗಳು, 12 ಕ್ಯಾಮೆರಾಗಳು ಈ ಸಾಹಸ ದೃಶ್ಯಗಳ ಭಾಗವಾಗಲಿವೆ. ಈ ಫೈಟ್‌ಗಾಗಿ ಮುಂದಿನ ತಿಂಗಳ ಒಂದರಿಂದ ತಾಲೀಮು ನಡೆಯಲಿದೆಯಂತೆ. ನಿರ್ದೇಶಕರು ಅತ್ತ ಬಲ್ಗೇರಿಯಾಗೆ ಹೋಗಿ ಉಸ್ತುವಾರಿ ನೋಡಿಕೊಂಡರೆ, ಇತ್ತ ನಿಖೀಲ್‌ ಮತ್ತು ನಾಯಕಿ ಫ್ರಾನ್ಸ್‌ನಲ್ಲಿ ಎರಡು ಹಾಡುಗಳ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ಶೋಭಿ ಮಾಸ್ಟರ್‌ ಸಂಯೋಜಿಸುತ್ತಿರುವ ಆ ಹಾಡುಗಳ ಚಿತ್ರೀಕರಣ ಮುಗಿಸಿ, ನಿಖಿಲ್‌ ನೇರವಾಗಿ ಬಲ್ಗೇರಿಯಾಗೆ ಹೋಗಿ, ಮೊದಲ ಐದು ದಿನಗಳ ಕಾಲ ತಾಲೀಮು ಮುಗಿಸಿ, ನಂತರ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರಂತೆ. ಈಗಾಗಲೇ ಶೇ 60ರಷ್ಟು ಚಿತ್ರೀಕರಣ ಮುಗಿಸಿರುವ “ಜಾಗ್ವಾರ್‌’ ಚಿತ್ರತಂಡ, ಫ್ರಾನ್ಸ್‌ ಮತ್ತು ಬಲ್ಗೇರಿ ಯಾದಲ್ಲಿ ಚಿತ್ರೀಕರಣ ಮುಗಿಸಿ, ಜುಲೈನಲ್ಲಿ ವಾಪಸ್ಸಾಗಲಿದೆ.
-ಉದಯವಾಣಿ

Comments are closed.