ಮನೋರಂಜನೆ

ಸಿಂಹಳಿ ಭಾಷೆಗೆ ಡಬ್‌ ಆದ ಮೊದಲ ಕನ್ನಡ ಚಿತ್ರ “ಕರ್ವ”

Pinterest LinkedIn Tumblr

karvaಕನ್ನಡದಲ್ಲಿ ಹಾರರ್‌ ಚಿತ್ರಗಳು ಸಂಖ್ಯೆ ಜಾಸ್ತಿಯಾಗುತ್ತಿವೆ ನಿಜ. ಆ ಪೈಕಿ ಕೆಲವು ಚಿತ್ರಗಳು ನೋಡುಗರನ್ನು ಬೆಚ್ಚಿಬೀಳಿಸುತ್ತಿರು ವುದೂ ದಿಟ. ಆದರೆ, ಕೇವಲ ಗಾಂಧಿನಗರಕ್ಕಷ್ಟೇ ಸೀಮಿತ ಗೊಂಡಿದ್ದ, ರಾಜ್ಯದ ಕೆಲ ಭಾಗಗಳಲ್ಲಿ ಮಾತ್ರ ಓಡಾಡಿಕೊಂಡಿದ್ದ ದೆವ್ವಗಳು ಇದೀಗ ಸಾಗರದಾಚೆಗೂ ಹಾರುತ್ತಿವೆ ಎಂಬುದು ವಿಶೇಷತೆಗಳಲ್ಲೊಂದು.

ಹೌದು, ನವನೀತ್‌ ಅವರ ಚೊಚ್ಚಲ ನಿರ್ದೇಶನದ ಚಿತ್ರ “ಕರ್ವ’ ಇದೀಗ ವಿದೇಶಕ್ಕೂ ಕಾಲಿಡುತ್ತಿದೆ. “ಕರ್ವ’
ಮೇ 27 ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ. ಅದರೊಂದಿಗೆ ವಿದೇಶಗಳಲ್ಲೂ ಕಾಲಿಡುವ ಮೂಲಕ ಅಲ್ಲಿನ ಮಂದಿಯನ್ನು ಬೆಚ್ಚಿಬೀಳಿಸಲು ಸಜ್ಜಾಗಿದೆ.

“ಕರ್ವ’ ಚಿತ್ರ ಶ್ರೀಲಂಕಾದಲ್ಲಿ ಚಿತ್ರೀಕರಣಗೊಂಡಿದೆ ಎಂಬ ವಿಷಯವನ್ನು ಇದೇ “ಬಾಲ್ಕನಿ’ಯಲ್ಲಿ ಹೇಳಲಾಗಿತ್ತು. ಈಗ ಅದೇ ಚಿತ್ರ ಶ್ರೀಲಂಕಾದಲ್ಲೂ ತೆರೆ ಕಾಣುತ್ತಿದೆ. ಈಗಾಗಲೇ ಶ್ರೀಲಂಕಾದ ಸಿಂಹಣಿ ಭಾಷೆಯಲ್ಲಿ ಡಬ್‌ ಆಗಿರುವ
ಚಿತ್ರ, ಕರ್ನಾಟಕದಲ್ಲಿ ರಿಲೀಸ್‌ ಆದ ಒಂದು ವಾರದ ನಂತರ ಶ್ರೀಲಂಕಾದಲ್ಲೂ ತೆರೆ ಕಾಣಲಿದೆ ಎಂದು ವಿವರ ಕೊಡುತ್ತಾರೆ ನಿರ್ದೇಶಕ ನವನೀತ್‌.

ಮಾಸ್‌ ಹೀರೋಗಳ ಪಕ್ಕಾ ಕಮರ್ಷಿಯಲ್‌ ಸಿನಿಮಾಗಳು ವಿದೇಶದಲ್ಲೂ ತೆರೆಕಾಣುವುದು ಸಾಮಾನ್ಯ. ಆದರೆ, ಹಾರರ್‌ ಚಿತ್ರವೊಂದು, ವಿದೇಶದಲ್ಲೂ ಬಿಡುಗಡೆಯಾಗುತ್ತಿದೆ ಎಂಬುದು ವಿಶೇಷವೇ ಸರಿ, ಶ್ರೀಲಂಕಾ ದೇಶವಷ್ಟೇ ಅಲ್ಲ, ಇಂಗ್ಲೆಂಡ್‌ ಸೇರಿದಂತೆ ಇತರೆ ದೇಶಗಳಲ್ಲೂ “ಕರ್ವ’ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಮಾಪಕ ಕೃಷ್ಣಚೈತನ್ಯ
ನಿರ್ಧರಿಸಿದ್ದಾರೆ. ಇಂತಹ ಚಿತ್ರಗಳು ಸಾಮಾನ್ಯವಾಗಿ, ಒಂದು ಕಾಡು ಅಥವಾ ಒಂದು ಪಾಳುಬಿದ್ದ ಬಂಗಲೆಯಲ್ಲಿ
ಚಿತ್ರೀಕರಣಗೊಳ್ಳುತ್ತವೆ. ಆದರೆ, “ಕರ್ವ’ ಶ್ರೀಲಂಕಾ ನೆಲದಲ್ಲೂ ಅಲ್ಲಿನ ಬೀಚ್‌, ಸಿಟಿಗಳಲ್ಲೂ ಚಿತ್ರೀಕರಣಗೊಂಡಿದೆ. ಅದೇ ಕಾರಣಕ್ಕೆ ಸಿಂಹಳಿ ಭಾಷೆಯಲ್ಲಿ ಡಬ್‌ ಆಗಿ ಅಲ್ಲೂ ತೆರೆಕಾಣುತ್ತಿದೆ.

ಈ ಚಿತ್ರದಲ್ಲಿ ದೇವರಾಜ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರೆ, ಆರ್‌. ಜೆ.ರೋಹಿತ್‌, ತಿಲಕ್‌, ಅನು,
ಅನಿಷಾ ಹಾಗು ಬಾಲಿವುಡ್‌ ಬೆಡಗಿ ಪೂನಂ ಸಿಂಗರ್‌ ಕೂಡ ನಟಿಸಿದ್ದಾರೆ. ಮೋಹನ್‌ ಈ ಚಿತ್ರಕ್ಕೆ ಕ್ಯಾಮೆರಾ ಹಿಡಿದರೆ, ರವಿ ಬಸ್ರೂರ್ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಯಾವುದೇ ಹಾಡುಗಳಿಲ್ಲ. ಆದರೆ, ಹಿನ್ನೆಲೆ ಸಂಗೀತಕ್ಕೆ ರವಿ ಬಸ್ರೂರ್ ಕೆಲಸ ಮಾಡಿದ್ದಾರೆ. ಮೋಹನ್‌ ಬಿ.ಕೆರೆ ಅವರ ಕಲಾನಿರ್ದೇಶನವಿದೆ. ಡಿಫ‌ರೆಂಟ್‌ ಡ್ಯಾನಿ ಸಾಹಸ ಮಾಡಿದ್ದಾರೆ. ಜಯಣ್ಣ “ಕರ್ವ’ ಚಿತ್ರವನ್ನು ರಾಜ್ಯಾದ್ಯಂತ ಸುಮಾರು 100 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ವಿತರಣೆ ಮಾಡುತ್ತಿದ್ದಾರೆ.
-ಉದಯವಾಣಿ

Comments are closed.