
ಬೆಂಗಳೂರು: ಆತ್ಮಹತ್ಯೆಗೆ ಶರಣಾದ ರೈತರ ಮಕ್ಕಳಿಗೆ ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಉಚಿತ ಶಿಕ್ಷಣ ನೀಡಲು ಸರ್ಕಾರ ಆದೇಶಿಸಿದೆ.
ಈ ಸಂಬಂಧ ಕಾಲೇಜು ಶಿಕ್ಷಣ ಇಲಾಖೆಗೆ ಆದೇಶ ಪ್ರತಿಯನ್ನು ಸರ್ಕಾರ ಕಳುಹಿಸಿದೆ. ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳಿಗೆ ಸ್ನಾತಕೋತ್ತರ ಪದವಿವರೆಗೆ ಉಚಿತ ಶಿಕ್ಷಣ ಒದಗಿಸುವ ಯೋಜನೆಯನ್ನು ಜಾರಿಗೊಳಿಸಿ ಎಂದು ಸೂಚಿಸಿದೆ. ಇನ್ನು ರಾಜ್ಯದಲ್ಲಿರುವ ಎಲ್ಲಾ ಕಾಲೇಜುಗಳಿಗೂ ಆದೇಶದ ಪ್ರತಿಯನ್ನು ಕಳುಹಿಸಲಾಗುವುದು ಎಂದು ಕಾಲೇಜು ಶಿಕ್ಷಣ ಇಲಾಖೆ ತಿಳಿಸಿದೆ.
ಆದರೆ, ಈ ಸೌಲಭ್ಯವನ್ನು ಪಡೆಯಲು ವಿದ್ಯಾರ್ಥಿಗಳೇ ಖುದ್ದಾಗಿ ಅರ್ಜಿಯನ್ನು ಸಲ್ಲಿಸಬೇಕು. ಸರ್ಕಾರವಾಗಲಿ ಅಥವಾ ಇಲಾಖೆಯಾಗಲಿ ರೈತರ ಮಕ್ಕಳನ್ನು ಗುರುತಿಸಿ ಉಚಿತ ಶಿಕ್ಷಣ ನೀಡವುದಿಲ್ಲ. ಮೃತ ರೈತರ ಮಕ್ಕಳು ತಾವಾಗೇ ಅರ್ಜಿ ಸಲ್ಲಿಸಿ ಈ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ಇಲಾಖೆ ತಿಳಿಸಿದೆ.
ಸರ್ಕಾರಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಾ, ಸರ್ಕಾರಿ ವಸತಿಗಳಲ್ಲಿ ಆಶ್ರಯ ಪಡೆದಿರುವ ರೈತರ ಮಕ್ಕಳ ಶುಲ್ಕ ಮತ್ತು ಸೌಕರ್ಯಗಳ ಶುಲ್ಕವನ್ನು ಮನ್ನಾ ಮಾಡಲಾಗಿದೆ. ಅನುದಾನಿತ ಮತ್ತು ಅನುದಾನ ರಹಿತ ಖಾಸಗಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿಗಳನ್ನು ಸಲ್ಲಿಸಿ ಪಾವತಿಸಿದ ಶುಲ್ಕವನ್ನು ಹಿಂಪಡೆಯಬಹುದು.
ವಿದ್ಯಾರ್ಥಿಗಳು ಶುಲ್ಕವನ್ನು ಪಾವತಿಸಬೇಕು ಎಂದು ಖಾಸಗಿ ಕಾಲೇಜುಗಳು ಹೇಳಿದರೆ, ಆ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ ಎಂದು ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.
ಸರ್ಕಾರದ ಆದೇಶದ ಪ್ರಕಾರ ಈ ಯೋಜನೆ ಪ್ರಾಥಮಿಕ ಶಿಕ್ಷಣದಿಂದ ಸ್ನಾತಕೋತ್ತರ ಪದವಿವರೆಗೆ ಅನ್ವಯಿಸುತ್ತದೆ. ಮೃತಪಟ್ಟ ರೈತರ ಮಕ್ಕಳ ಗುರುತಿಗಾಗಿ ಯಾವುದೇ ನಿಯಮಗಳನ್ನು ರಚಿಸಿಲ್ಲ ಎಂದ ಅವರು, ಈ ಸೌಲಭ್ಯ ಪಡೆಯಲು ವಿದ್ಯಾರ್ಥಿಗಳು, ತಮ್ಮ ಕುಟುಂಬದಲ್ಲಿ ಆತ್ಮಹತ್ಯೆಗೆ ಶರಣಾದ ರೈತನ ಮರಣ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಹೇಳಿದ್ದಾರೆ.