
ದಾವಣಗೆರೆ: ರಸ್ತೆ ವಿಭಜಕಕ್ಕೆ ಚಲಿಸುತ್ತಿದ್ದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಾಲ್ಲೂಕಿನ ಮಲ್ಲಾಶೆಟ್ಟಿಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಇಂದು ಬೆಳಗ್ಗೆ ನಡೆದಿದೆ.
ಧರ್ಮಶೀಲಾ (40), ಚಾರುಲ (28) ಸಾವನ್ನಪ್ಪಿದ ದುರ್ದೈವಿಗಳು. ವಿವಾಹ ಕಾರ್ಯಕ್ರಮಕ್ಕೆಂದು ಬೆಂಗಳೂರಿನಿಂದ ದಾವಣಗೆರೆಗೆ ಬರುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಗಾಯಗೊಂಡ ನಾಲ್ವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತಕ್ಕೊಳಗಾದವರು ಬೆಂಗಳೂರಿನ ರಿಲಯನ್ಸ್ ಉದ್ಯೋಗಿಗಳಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.