ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಹತ್ತು ಹಲವು ಜನಪರ ಯೋಜನೆಗಳನ್ನು ಜಾರಿ ಮಾಡಿ ಸಾಮಾಜಿಕ ನ್ಯಾಯ ಎತ್ತಿ ಹಿಡಿಯುವ ಕೆಲಸ ಮಾಡಿದ್ದರೂ ವಿಪಕ್ಷ ಬಿಜೆಪಿ ಸುಳ್ಳು ಆರೋಪಗಳನ್ನು ಹೊರಿಸಿ ತಾವು ಬಂಡಲ್ಬಾಜಿಗಳು ಎಂಬುದನ್ನು ಸಾಬೀತು ಮಾಡಿದೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಆರೋಪಿಸಿದ್ದಾರೆ.
ಬಿಜೆಪಿ ಆರೋಪ ಪಟ್ಟಿಗೆ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದ ಅವರು, ಯಡಿಯೂರಪ್ಪ ನಂಬರ್ 1 ಬಂಡಲ್ಬಾಜಿ, ಜಗದೀಶ್ ಶೆಟ್ಟರ್ ನಂಬರ್ 2 ಹಾಗೂ ಈಶ್ವರಪ್ಪನಂಬರ್ 3. ಇವರು ನೂರು ಬಾರಿ ಸುಳ್ಳು ಹೇಳಿ ಗೊಬೆಲ್ಸ್ ಸಿದ್ಧಾಂತ ಪ್ರತಿಪಾದಿಸಲು ಹೊರಟಿದ್ದಾರೆ ಎಂದು ದೂರಿದರು.
ಬಿಜೆಪಿ ಸರಕಾರದಲ್ಲಿ ಮೂರು ವರ್ಷಗಳಲ್ಲಿ ಭ್ರಷ್ಟಾಚಾರದ ಕಾರಣ ಯಡಿಯೂರಪ್ಪಅಧಿಕಾರ ಕಳೆದುಕೊಂಡು ಜೈಲು ಸೇರಿದ್ದರು. ಸಚಿವರು, ಶಾಸಕರು ನಾನಾ ಆರೋಪಗಳಿಗೆ ಗುರಿಯಾಗಿದ್ದರು. ಆದರೆ ಸಿದ್ದರಾಮಯ್ಯ ಸರಕಾರ ಅನ್ನಭಾಗ್ಯ, ಕ್ಷೀರಭಾಗ್ಯ, ಋಣಮುಕ್ತ ಭಾಗ್ಯ, ಮನಸ್ವಿನಿ, ಮೈತ್ರಿ, ಎಸ್ಸಿ, ಎಸ್ಸಿ ಸಮುದಾಯಕ್ಕೆ ಅನುದಾನ ನಿಗದಿಯಂತಹ ಉತ್ತಮ ಕೆಲಸ ಮಾಡಿದೆ.
ಕಾಂಗ್ರೆಸ್ ಸರಕಾರ ಹಗರಣ ಮುಕ್ತ ಎಂದು ಸಮರ್ಥಿಸಿಕೊಂಡರು. ಬಿಜೆಪಿ ಸರಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿತ್ತು. ರಾಜ್ಯಕ್ಕೆ ಅಂಟಿಕೊಂಡ ಕಳಂಕ ಇಡೀ ದೇಶದಲ್ಲಿ ಚರ್ಚೆಯಾಗಿತ್ತು. ಅಂದು ರಾಜ್ಯಕ್ಕೆ ಕೆಟ್ಟ ಹೆಸರು ತಂದವರು ಇದೀಗ ಕಾಂಗ್ರೆಸ್ ಸರಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದರು.
-ಉದಯವಾಣಿ