ಬೆಂಗಳೂರು, ಮೇ ೧೨- ಮುಂಬರುವ ದಿನಗಳಲ್ಲಿ ಬಿಎಸ್ಸಿ, ನರ್ಸಿಂಗ್ ಕೋರ್ಸ್ ಆರಂಭಿಸುವ ಚಿಂತನೆ ಸರ್ಕಾರಕ್ಕಿದ್ದು, ಈ ನಿಟ್ಟಿನಲ್ಲಿ ಪ್ರಯತ್ನ ಮುಂದುವರೆದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ ಖಾದರ್ ಇಂದಿಲ್ಲಿ ಹೇಳಿದ್ದಾರೆ.
ಬಿಎಸ್ಸಿ., ನರ್ಸಿಂಗ್ ಕೋರ್ಸ್ ಆರಂಭಿಸುವ ಮೂಲಕ ದಾದಿಯರ ವೃತ್ತಿ ನೈಪುಣ್ಯಕ್ಕೆ ಮತ್ತಷ್ಟು ನೆರವು ನೀಡಲಾಗುವುದು. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ದಾದಿಯರನ್ನು ಖಾಯಂ ಮಾಡಲು ಸಾಧ್ಯವಿಲ್ಲ. ಆದರೆ, ಅವರ ಸಂಬಳವನ್ನು 10 ಸಾವಿರದಿಂದ 13 ಸಾವಿರಕ್ಕೆ ಹೆಚ್ಚಿಸಲಾಗುವುದು ಎಂದು ಹೇಳಿದರು.
ಅಂತರಾಷ್ಟ್ರೀಯ ಶುಶ್ರೂಷಕರ ದಿನದ ಅಂಗವಾಗಿ ವಿಧಾನಸೌಧದಲ್ಲಿಂದು ಆಯೋಜಿಸಿದ್ದ 16ನೇ ರಾಜ್ಯಮಟ್ಟದ ಫ್ಲೋರೆನ್ಸ್ ನೈಟಿಂಗೇಲ್ ದಾದಿಗಳ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದಾದಿಯರ ವಿವಿಧ ಬೇಡಿಕೆಗಳನ್ನು ಈಡೇರಿಸುವ ಸಂಬಂಧ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ದಾದಿಯರೂ ಸೇರಿದಂತೆ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಕಾಲಕಾಲಕ್ಕೆ ಬಡ್ತಿ ನೀಡಲಾಗುವುದು ಎಂದರು.
ಎಲ್ಲಾ ಕ್ಷೇತ್ರದಲ್ಲೂ ಒತ್ತಡ ಸಹಜ. ಸಮಾಧಾನದಿಂದಲೇ ಸಂತೋಷದಿಂದ ಸೇವೆ ಸಲ್ಲಿಸಿದಾಗ ಮಾತ್ರ ಮಾಡುವ ಕೆಲಸದಲ್ಲಿ ನೆಮ್ಮದಿ, ತೃಪ್ತಿ ಕಾಣುವುದು ಸಾಧ್ಯ. ದಾದಿಯರು ಮಾನವೀಯತೆ, ಕರುಣೆ, ಪ್ರೀತಿ-ವಿಶ್ವಾಸದಿಂದ ಕಾರ್ಯನಿರ್ವಹಿಸಲಿ ಎಂದು ಕಿವಿಮಾತು ಹೇಳಿದರು.
ಆಸ್ಪತ್ರೆಗಳಲ್ಲಿ ವೈದ್ಯರು ಎಷ್ಟು ಮುಖ್ಯವೋ ದಾದಿಯರು ಅಷ್ಟೇ ಮುಖ್ಯ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವ ಹಿನ್ನೆಲೆಯಲ್ಲಿ ಎಲ್ಲ ಭಾಷೆಗಳನ್ನು ಕಲಿಯಿರಿ. ಇದರಿಂದ ರೋಗಿಗಳಿಗೆ ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ, ಮಾನವೀಯತೆ ಮತ್ತು ಸೇವಾಮನೋಭಾವನೆಯಿಂದ ಕರ್ತವ್ಯ ನಿರ್ವಹಿಸಿ ಎಂದು ಕಿವಿಮಾತು ಹೇಳಿದರು.
ರಾಜ್ಯಮಟ್ಟದಲ್ಲಿ ನಡೆಯುತ್ತಿರುವ ನೈಟಿಂಗೇಲ್ ಪ್ರಶಸ್ತಿಯನ್ನು ಜಿಲ್ಲಾಮಟ್ಟಕ್ಕೂ ವಿಸ್ತರಿಸಲಾಗುವುದು. ಆ ಮೂಲಕ ದಾದಿಯರ ಸೇವೆಯನ್ನು ಸರ್ಕಾರ ಗುರುತಿಸಿ ಗೌರವಿಸಲಿದೆ ಎಂದರು.
ಕಾರ್ಯಕ್ರಮದಲ್ಲಿ ನೈಟಿಂಗೇಲ್ ಪ್ರಶಸ್ತಿ ಸಮಿತಿ ಅಧ್ಯಕ್ಷ ಐವಾನ್ ನಿಗ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್, ಶಾಸಕಿ ವಿನಿಶಾ ನೀರೊ, ಆಂಗ್ಲೋ ಯುನಿಟಿ ಸೆಂಟರ್‌ನ ಅಧ್ಯಕ್ಷ ಆರ್ಲ್ ಸೌರೆಸ್, ಮಾಜಿ ಶಾಸಕರ ವೇದಿಕೆ ಅಧ್ಯಕ್ಷ ರಾಮಚಂದ್ರಾರೆಡ್ಡಿ, ಉಪಾಧ್ಯಕ್ಷ ಚಂದ್ರಶೇಖರ್ ಸೇರಿದಂತೆ ಮತ್ತಿತರರಿದ್ದರು.
ಕರ್ನಾಟಕ