
ಬೆಂಗಳೂರು: ‘ಅನಿಸುತಿದೆ ಯಾಕೋ ಇಂದು, ನೀನೇನೆ ನನ್ನವಳೆಂದು’, ಕಿಂಗ್ನ ಕನ್ನಡ ಭಾವಾರ್ಥ ‘ಸಿಗರೇಟ್’, ‘ಕಷ್ಟದಲ್ಲಿ ಇದ್ದೇನೆ ದಯವಿಟ್ಟು 60 ಅಂಕ ನೀಡಿ ಪಾಸು ಮಾಡಿ’, ‘ನೆಗ್ಲೆಕ್ಟ್ ಮಾಡಬೇಡಿ ಗುರುಗಳೇ ನಿಮ್ಮ ಮಗ ಎಂದು ಭಾವಿಸಿ….’
ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಮೌಲ್ಯಮಾಪನ ನಡೆಯುತ್ತಿದೆ. ಶಿಕ್ಷಕರು ಉತ್ತರ ಪತ್ರಿಕೆ ಕೈಗೆತ್ತಿಕೊಂಡರೆ ಕೆಲವು ವಿದ್ಯಾರ್ಥಿಗಳು ಈ ರೀತಿ ಅಸಂಬದ್ಧವಾಗಿ ಬರೆದಿರುವುದು ಕಂಡುಬರುತ್ತಿದೆ.



ಧಾರವಾಡದ ಕೇಂದ್ರವೊಂದರಲ್ಲಿ ಕಂಡ ಕೆಲವು ಉತ್ತರ ಪತ್ರಿಕೆಗಳಲ್ಲಿ ವಿದ್ಯಾರ್ಥಿಗಳು ಬರೆದಿರುವ ವಿಚಿತ್ರ ಉತ್ತರಗಳು ಹೀಗಿವೆ.
ಸಂಗ್ರಹ ಮೂಲ ಮತ್ತು ವಿನಿಮಯ ಮೂಲಗಳ ನಡುವಣ ಯಾವುದಾದರೂ ಎರಡು ವ್ಯತ್ಯಾಸಗಳನ್ನು ಬರೆಯಿರಿ ಎಂಬ ಪ್ರಶ್ನೆಯೊಂದಿದೆ.
ಅದಕ್ಕೆ ವಿದ್ಯಾರ್ಥಿ ಮಹಾನುಭಾವನೊಬ್ಬ ‘ಅನಿಸುತ್ತಿದೆ ಯಾಕೋ ಇಂದು ನೀನೇನೆ ನನ್ನವಳೆಂದು. ಆಹಾ ಎಂಥ ಮಧುರ ಯಾತನೆ, ಕೊಲ್ಲು ಹುಡುಗಿ ವೊಮ್ಮೆ ನನ್ನ ಹಾಗೆ ಸುಮ್ಮನೆ’ ಎಂದು ಬರೆದಿದ್ದಾನೆ. ಕೆಳಗೆ ಇನ್ನೂ ಎರಡು ಗೆರೆ ಮಿಕ್ಕಿದ್ದರಿಂದ ‘ಯಾಕೋ ನೀನಿಲ್ಲದೆ ಬೋರಾಗುತ್ತಿದೆ. ಅದಕ್ಕಾಗಿ ನಾನು ಹೋಗುತ್ತೇನೆ’ ಎಂದು ಬರೆದಿರುವುದು ಕಂಡಿದೆ.
ಇಂಗ್ಲಿಷ್ ಮಾಧ್ಯಮದ ಗಣಿತ ಪ್ರಶ್ನೆಪತ್ರಿಕೆಯೊಂದರಲ್ಲಿ ಸಮಾಂತರ ಮತ್ತು ಗುಣೋತ್ತರ ಶ್ರೇಢಿ ಕುರಿತು ಕೇಳಲಾದ ಪ್ರಶ್ನೆಗೆ ವಿದ್ಯಾರ್ಥಿಯೊಬ್ಬನ ಉತ್ತರ ಹೀಗಿದೆ..
‘ಗುರುಗಳೇ, ದಯವಿಟ್ಟು ನಾವು ಸರ್ಕಾರಿ ಹಿರಿಯ ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಗಣಿತ ಶಿಕ್ಷಕರು ಇರಲಿಲ್ಲ. ಆದ ಕಾರಣ ನಾನು ಇಂಗ್ಲಿಷ್ ಮಾಧ್ಯಮಕ್ಕೆ ಬಂದು ಸೇರಿಕೊಂಡೆ. ಇಂಗ್ಲಿಷ್ ಬಾರದ ಕಾರಣ ಏನೂ ಅರ್ಥ ಆಗಲಿಲ್ಲ. ಕನ್ನಡದಲ್ಲಿ ಹೇಳಿಕೊಡ್ರಿ ಎಂದರೂ ಇದು ಇಂಗ್ಲಿಷ್ ಶಾಲೆ ಎಂದು ಶಿಕ್ಷಕರು ಕನ್ನಡದಲ್ಲಿ ಹೇಳಲಿಲ್ಲ. ನನಗೆ ಅಪ್ಪ ಇಲ್ಲ. ದಯವಿಟ್ಟು ನನ್ನನ್ನು ಪಾಸ್ ಮಾಡಿ. ನಾನೂ ಇನ್ನೂ ಚೆನ್ನಾಗಿ ಓದಿ ನಮ್ಮ ಸಂಸಾರವನ್ನು ಚೆನ್ನಾಗಿ ನೋಡಿಕೊಳ್ಳಬೇಕು’ ಎಂದು ಅಲವತ್ತುಕೊಂಡಿದ್ದಾನೆ.
ನೆಹರೂ ಮೊದಲ ಕಾನೂನು ಸಚಿವರನ್ನಾಗಿ ಅಂಬೇಡ್ಕರ್ ಅವರನ್ನು ಏಕೆ ನೇಮಿಸಿದರು ಎಂಬ ಪ್ರಶ್ನೆಗೆ, ‘ಐ ಆ್ಯಮ್ ಸಾರಿ. ಮತ್ತೆ ಬನ್ನಿ ಪ್ರೀತಿಸೋಣ, ಐ ಮಿಸ್ ಯು..’ ಹೀಗೆ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಓತಪ್ರೋತವಾಗಿ ಅರ್ಧಪುಟ ಬರೆಯಲಾಗಿದೆ.
ಸೂತ್ರವೊಂದನ್ನು ನೀಡಿ ಸಮೀಕರಣ ನಕ್ಷೆಯಿಂದ ಬಿಡಿಸಿ ಎಂದು ಕೇಳಿದರೆ,
‘ನನ್ನ ಉತ್ತರ ಪತ್ರಿಕೆ ತಿದ್ದುತ್ತಿರುವ ಗುರುಗಳೇ ನನಗೆ 60 ಅಂಕ ನೀಡಿರಿ. ಏಕೆಂದರೆ ನನಗೆ ಗಣಿತ ಅರ್ಥ ಆಗುವುದಿಲ್ಲ. ಆದರೂ ಬೆಳಗ್ಗೆ ಎದ್ದು ಓದುತ್ತಿದ್ದೆ. ಲೆಕ್ಕವನ್ನು ಬಿಡಿಸಲಿಕ್ಕೆ ಆಗಲಿಲ್ಲ. ನೀವಾದರೂ ಅಷ್ಟು ಅಂಕ ನೀಡಿದರೆ ಪುಣ್ಯ ಗ್ಯಾರಂಟಿ ಸಿಗುತ್ತದೆ’ ಎಂದು ಬರೆದಿದ್ದಾನೆ. ಉತ್ತರ ಪತ್ರಿಕೆಯ ಕೆಳಗೆ (ಕಚ್ಚಾ ಕಾರ್ಯಕ್ಕಾಗಿ) ಎಂದು ಇರುವಂತಹ ಜಾಗದಲ್ಲಿಯೂ ಸಹ ಆ ವಿದ್ಯಾರ್ಥಿ ‘ನಾನು ಅತ್ಯುತ್ತಮವಾಗಿ ಉತ್ತೀರ್ಣನಾಗುತ್ತೇನೆ ಎಂದು ಮನೆಯವರು ಭಾವಿಸಿದ್ದಾರೆ. ಅವರನ್ನು ನಿರಾಸೆ ಮಾಡಬೇಡಿ’ ಎಂದು ಕೋರಿದ್ದಾನೆ.