ಕರ್ನಾಟಕ

ಸಿದ್ದರಾಮಯ್ಯ ವಿಮಾನ ಪ್ರಯಾಣಕ್ಕೆ 32 ತಿಂಗಳಲ್ಲಿ ₹ 20 ಕೋಟಿ ವೆಚ್ಚ!

Pinterest LinkedIn Tumblr

CM's-Copter

ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಮಾನ ಪ್ರಯಾಣಕ್ಕೆ 32 ತಿಂಗಳ ಅವಧಿಯಲ್ಲಿ ರಾಜ್ಯ ಸರ್ಕಾರ ₹20 ಕೋಟಿ ಪಾವತಿಸಿರುವುದು ಮಾಹಿತಿ ಹಕ್ಕಿನಡಿ ಬೆಳಕಿಗೆ ಬಂದಿದೆ.

ಮೂಡಲಗಿಯ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

‘ಸಹಕಾರ ಸಚಿವ ಎಚ್‌.ಎಸ್‌. ಮಹದೇವ ಪ್ರಸಾದ್‌ ಹಾಗೂ ಪಶುಸಂಗೋಪನಾ ಸಚಿವ ಎ. ಮಂಜು ವಿಮಾನದಲ್ಲಿ ಪ್ರಯಾಣಿಸಿಲ್ಲ. 15 ಸಚಿವರ ವಿಮಾನ ಪ್ರಯಾಣಕ್ಕೆ ₹ 2 ಕೋಟಿ ಪಾವತಿಯಾಗಿದ್ದು, ಉಳಿದ 17 ಮಂದಿ ಈ ಕುರಿತ ವಿವರವನ್ನು ಇನ್ನೂ ನೀಡಿಲ್ಲ ಎಂದು ಲೋಕೋಪಯೋಗಿ ಇಲಾಖೆ ಮಾಹಿತಿ ನೀಡಿದೆ. ಈ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮುಖ್ಯಮಂತ್ರಿ ಹಾಗೂ ಸಚಿವರ ಪ್ರಯಾಣ ಭತ್ಯೆ ₹ 11.12 ಕೋಟಿ ಸೇರಿದಂತೆ ಒಟ್ಟು ₹ 33.50 ಕೋಟಿಯನ್ನು ಪ್ರಯಾಣ ವೆಚ್ಚಕ್ಕಾಗಿ ಪಾವತಿಸಲಾಗಿದೆ’ ಎಂದರು.

‘ಬರ ಪರಿಸ್ಥಿತಿಯಲ್ಲಿ ಜನತೆಯಿಂದ ಸಂಗ್ರಹಿಸಿದ ತೆರಿಗೆ ಹಣವು ಅಭಿವೃದ್ಧಿ ಕಾರ್ಯಕ್ಕೆ ವಿನಿಯೋಗವಾಗದೇ ಮುಖ್ಯಮಂತ್ರಿ, ಸಚಿವರ ವಿಮಾನ ಪ್ರಯಾಣಕ್ಕೆ ಪೋಲಾಗುತ್ತಿದೆ. ಅವರ ಪ್ರಯಾಣಕ್ಕಾಗಿ ದುಬಾರಿ ಕಾರುಗಳನ್ನು ನೀಡಲಾಗಿದೆ. ರಾತ್ರಿ ವೇಳೆ ರೈಲಿನಲ್ಲಿ ಸಂಚರಿಸಿ ಬೊಕ್ಕಸದ ಹಣ ಉಳಿಸಬೇಕು’ ಎಂದು ಹೇಳಿದರು.

‘ಈ ಸರ್ಕಾರ ಮೂರು ವರ್ಷ ಪೂರೈಸಿದ್ದರಿಂದ ‘ಸಾಧನಾ ಸಮಾವೇಶ’ ಮಾಡುವುದಾಗಿ ಮುಖ್ಯಮಂತ್ರಿ ಹೇಳುತ್ತಿದ್ದಾರೆ. ರಾಜ್ಯದಲ್ಲಿ 800ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಬ್ಬು ಬೆಳೆಗಾರರಿಗೆ ಬಾಕಿ ಹಣ ಕೊಡಿಸಿಲ್ಲ. ಇಂಥ ಹೊತ್ತಿನಲ್ಲಿ ‘ಸಾಧನಾ ಸಮಾವೇಶ’ದ ಬದಲು ‘ರೈತರ ತಿಥಿ ಸಮಾವೇಶ’ ಮಾಡುವುದು ಒಳಿತು’ ಎಂದು ಗಡಾದ ವ್ಯಂಗ್ಯವಾಡಿದರು.
(ಪ್ರಜಾವಾಣಿ)

Write A Comment