ಮನೋರಂಜನೆ

ರೋಹಿತ್–ಪೊಲಾರ್ಡ್ ಅಬ್ಬರ; ಮುಂಬೈ ಇಂಡಿಯನ್ಸ್ಗೆ ಆರು ವಿಕೆಟ್ ಗೆಲುವು; ಮತ್ತೆ ಮುಗ್ಗರಿಸಿದ ಆರ್‌ಸಿಬಿ ತಂಡ

Pinterest LinkedIn Tumblr

rohit-sharma-mom

ಮುಂಬೈ: ನಾಯಕನಿಗೆ ತಕ್ಕ ಆಟ ವಾಡಿದ ರೋಹಿತ್ ಶರ್ಮಾ ಮತ್ತು ಕೀರನ್ ಪೊಲಾರ್ಡ್ ಅವರ ಅಬ್ಬರದ ಬ್ಯಾಟಿಂಗ್‌ನಿಂದಾಗಿ ಮುಂಬೈ ಇಂಡಿಯನ್ಸ್ ತಂಡವು ಜಯಗಳಿಸಿತು.

ಬುಧವಾರ ರಾತ್ರಿ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ತಂಡವು 6 ವಿಕೆಟ್‌ಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಜಯಭೇರಿ ಬಾರಿಸಿತು.

ಆತಿಥೇಯ ತಂಡವು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮುಂಬೈ ಇಂಡಿಯನ್ಸ್‌ ತಂಡದ ಬೌಲರ್ ಜಸ್‌ಪ್ರೀತ್ ಬೂಮ್ರಾ (31ಕ್ಕೆ3) ಮತ್ತು ಕೃಣಾಲ್ ಪಾಂಡ್ಯ (27ಕ್ಕೆ 2) ಆರ್‌ಸಿಬಿ ತಂಡದ ಬೃಹತ್ ಮೊತ್ತ ಪೇರಿಸುವ ಆಸೆಗೆ ತಣ್ಣೀರೆರಚಿದರು. ಇದರಿಂದಾಗಿ ಆರ್‌ಸಿಬಿ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 170 ರನ್ ಮೊತ್ತ ಗಳಿಸಿತು.

ಮುಂಬೈ ತಂಡವು 18 ಓವರ್‌ಗಳಲ್ಲಿ 4 ವಿಕೆಟ್‌ಗಳನ್ನು ಕಳೆದುಕೊಂಡು 171 ರನ್‌ ಗಳಿಸಿತು. ಆರ್‌ಸಿಬಿಗೆ ಎದುರಾದ ಎರಡನೇ ಸೋಲು ಇದು. ಹಿಂದಿನ ಪಂದ್ಯದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ಎದುರು ಸೋತಿತ್ತು.

ಮಿಂಚು: ಕಳೆದ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ರೋಹಿತ್ (62; 44ಎ, 4ಬೌಂ, 3ಸಿ)  ಈ ಬಾರಿ ಎಡವಲಿಲ್ಲ. ಅರ್ಧಶತಕದ ಮೂಲಕ ತಂಡದ ಗೆಲುವಿಗೆ ಕಾರಣರಾದರು. ಎರಡನೇ ಓವರ್‌ನಲ್ಲಿ ಪಾರ್ಥಿವ್ ಪಟೇಲ್ ಕೇವಲ ಐದು ರನ್ ಗಳಿಸಿ ಕೇನ್ ರಿಚರ್ಡ್‌ಸನ್‌ ಬೌಲಿಂಗ್‌ನಲ್ಲಿ ಔಟಾದರು. ಇದರಿಂದ ಮುಂಬೈ ತಂಡಕ್ಕೆ ಆತಂಕ ಎದುರಾಗಿತ್ತು.

ಸನ್‌ರೈಸರ್ಸ್‌ ಎದುರಿನ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ್ದ ಅಂಬಟಿ ರಾಯುಡು (31; 23ಎ, 5ಬೌಂ) ರೋಹಿತ್ ಜೊತೆಗೂಡಿ ಎರಡನೇ ವಿಕೆಟ್‌ಗೆ 76 ರನ್ ಸೇರಿಸಿದರು. 11ನೇ ಓವರ್‌ನಲ್ಲಿ ಸ್ಪಿನ್ನರ್ ಇಕ್ಬಾಲ್ ಅಬ್ದುಲ್ಲಾ ಅವರ ಎಸೆತದಲ್ಲಿ ಅಂಬಟಿ ರಾಯುಡು ಔಟಾದರು. 13ನೇ ಓವರ್‌ನಲ್ಲಿ ರೋಹಿತ್ ಶರ್ಮಾ ಕೂಡ ಇಕ್ಬಾಲ್ ಅಬ್ದುಲ್ಲಾಗೆ ವಿಕೆಟ್ ಒಪ್ಪಿಸಿದರು. ಆರ್‌ಸಿಬಿ ಆಟಗಾರರಲ್ಲಿ ಉತ್ಸಾಹ ಇಮ್ಮಡಿಸಿತ್ತು.

ಆದರೆ, ಜಾಸ್ ಬಟ್ಲರ್ (28; 14ಎ, 2ಬೌಂ, 2ಸಿ) ಮತ್ತು ಕೀರನ್ ಪೊಲಾರ್ಡ್ (ಔಟಾಗದೆ 40; 19ಎ, 4ಬೌಂ, 3ಸಿ) ಆರ್‌ಸಿಬಿ ಗೆಲುವಿನ ಕನಸನ್ನು ಪುಡಿಗಟ್ಟಿದರು. ಪೊಲಾರ್ಡ್ ಅವರಂತೂ ಶೇನ್ ವ್ಯಾಟ್ಸನ್‌ ಎಸೆತಗಳನ್ನು ಸಿಕ್ಸರ್‌ಗೆ ಎತ್ತುವ ಮೂಲಕ ಸವಾಲೊಡ್ಡಿದರು. ಆಕರ್ಷಕ ಪುಲ್, ಡ್ರೈವ್‌ಗಳ ಮೂಲಕ ಪೊಲಾರ್ಡ್ ರನ್‌ಗಳನ್ನು ಕೊಳ್ಳೆ ಹೊಡೆದರು. ಮುಂಬೈ ತಂಡಕ್ಕೆ ಎರಡನೇ ಗೆಲುವಿನ ಕಾಣಿಕೆ ನೀಡಿದರು. ಟೂರ್ನಿಯಲ್ಲಿ ಐದು ಪಂದ್ಯ ಆಡಿರುವ ರೋಹಿತ್ ಬಳಗವು ಮೂರರಲ್ಲಿ ಸೋತಿದೆ.

ದಾಖಲಾಗದ ಅರ್ಧಶತಕ: ಕಳೆದ ಎರಡೂ ಪಂದ್ಯಗಳನ್ನು ತನ್ನ ತವರಿನ ಅಂಗಳದಲ್ಲಿ ಆಡಿದ್ದ ಆರ್‌ಸಿಬಿ ತಂಡವು ರನ್‌ಗಳ ಹೊಳೆಯನ್ನೇ ಹರಿಸಿತ್ತು. ಅದರಲ್ಲೂ ವಿರಾಟ್ ಕೊಹ್ಲಿ ಮತ್ತು ಎ.ಬಿ. ಡಿವಿಲಿಯರ್ಸ್ ಅವರು ಎರಡೂ ಪಂದ್ಯಗಳಲ್ಲಿ ಅರ್ಧಶತಕಗಳನ್ನು ದಾಖಲಿಸಿದ್ದರು. ಆದರೆ, ಬೆಂಗಳೂರಿ ನಿಂದ ಹೊರಗೆ ಆಡಿದ ಮೊದಲ ಪಂದ್ಯದಲ್ಲಿ ಆರ್‌ಸಿಬಿಯ ಬ್ಯಾಟ್ಸ್‌ಮನ್‌ ಗಳು ಅರ್ಧಶತಕವನ್ನು ಹೊಡೆಯಲಿಲ್ಲ.
ವಿರಾಟ್ ಕೊಹ್ಲಿ (33; 30ಎ, 3ಬೌಂ) ಮತ್ತು ಕ್ರಿಸ್‌ ಗೇಲ್ ಬದಲು ಅವಕಾಶ ಪಡೆದ ಕೆ.ಎಲ್. ರಾಹುಲ್ (23; 14ಎ, 2ಬೌಂ, 2ಸಿ) ಅವರು ಉತ್ತಮ ಆರಂಭ ನೀಡಿದ್ದರಿಂದ ಆರ್‌ಸಿಬಿ 200ಕ್ಕಿಂತಲೂ ಹೆಚ್ಚು ರನ್ ಗಳಿಸುವ ನಿರೀಕ್ಷೆ ಇತ್ತು.

ಈ ವರ್ಷ ಆರ್‌ಸಿಬಿಗೆ ಮರಳಿರುವ ಕೆ.ಎಲ್. ರಾಹುಲ್ ಎರಡು ಆಕರ್ಷಕ ಸಿಕ್ಸರ್ ಮತ್ತು ಎರಡು ಬೌಂಡರಿ ಸಿಡಿಸಿದ ಅವರು ಪ್ರೇಕ್ಷಕರ ಗ್ಯಾಲರಿಯಲ್ಲಿ ಸಂಚಲನ ಮೂಡಿಸಿದರು. ಇನ್ನೊಂದೆಡೆ ಕೊಹ್ಲಿ ಸಿಕ್ಸರ್ ಹೊಡೆಯದಿದ್ದರೂ ತಂಡದ ಮೊತ್ತ ಹೆಚ್ಚುವಂತೆ ನೋಡಿ ಕೊಂಡರು. ಎಂದಿನಂತೆ ಚುರುಕಾದ ಒಂದು ಮತ್ತು ಎರಡು ರನ್‌ಗಳನ್ನು ಗಳಿಸಿ ಫೀಲ್ಡರ್‌ಗಳಿಗೆ ಸವಾಲು ಒಡ್ಡಿದರು.

ಮೊದಲ ವಿಕೆಟ್‌ಗೆ 32 ರನ್‌ಗಳನ್ನು ಸೇರಿಸಿದ್ದ ಇವರಿಬ್ಬರ ಜೊತೆಯಾಟವನ್ನು ಎಡಗೈ ಮಧ್ಯಮವೇಗಿ ಮಿಷೆಲ್ ಮೆಕ್ಲಾಗನ್‌ ಮುರಿದರು. ನಾಲ್ಕನೇ ಓವರ್‌ನ ಎಸೆತವನ್ನು ಕಟ್ ಮಾಡಿದ ರಾಹುಲ್ ಸ್ಲಿಪ್‌ನಲ್ಲಿದ್ದ ಹರಭಜನ್ ಸಿಂಗ್ ಅವರಿಗೆ ಕ್ಯಾಚ್ ನೀಡಿದರು. ನಂತರ ಕ್ರೀಸ್‌ಗೆ ಡಿವಿಲಿಯರ್ಸ್‌ ಬಂದಾಗ ಮತ್ತೊಂದು ಸ್ಫೋಟಕ ಜೊತೆಯಾಟದ ನಿರೀಕ್ಷೆ ಮೂಡಿತ್ತು.

ಎಬಿಡಿ ಕೂಡ ತಮ್ಮ ಬೀಸಾಟ ಆರಂಭಿಸಿ ದರು. ಎಲ್ಲ ಬೌಲರ್‌ಗಳನ್ನೂ ಆತ್ಮವಿಶ್ವಾಸ ದಿಂದ ಎದುರಿಸಿದರು. ಕೊಹ್ಲಿ ಜೊತೆಗೆ ಎಬಿಡಿ (29; 21ಎ 3ಬೌ. 1ಸಿ) ಸೇರಿ ಎರಡನೇ ವಿಕೆಟ್‌ಗೆ 60 ರನ್ ಸೇರಿಸಿ ದರು. ಇದರಿಂದಾಗಿ 10 ಓವರ್‌ಗಳಲ್ಲಿ ತಂಡದ ಮೊತ್ತವು 90 ರನ್‌ಗಳ ಗಡಿ ದಾಟಿತ್ತು. 11ನೇ ಓವರ್‌ನಲ್ಲಿ ಕೃಣಾಲ್ ಪಾಂಡ್ಯ ಅವರು ವಿರಾಟ್ ಮತ್ತು ಎಬಿಡಿ ಅವರ ವಿಕೆಟ್‌ಗಳನ್ನು ಕಿತ್ತರು. ನಂತರ ರನ್‌ ಗಳಿಕೆಯ ವೇಗ ಇಳಿಮುಖ ವಾಯಿತು. ವಾಟ್ಸನ್ ಕೇವಲ 5 ರನ್ ಗಳಿಸಿ ನಿರ್ಗಮಿಸಿದರು.

ಜೊತೆಯಾಟ: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಟ್ರಾವಿಸ್ ಹೆಡ್ (37; 24ಎ, 2ಬೌಂ, 2ಸಿ) ಮತ್ತು ಸರ್ಫರಾಜ್ ಖಾನ್ (28; 18ಎ, 2ಬೌಂ, 2ಸಿ) ಅವರಿಬ್ಬರ ಮಿಂಚಿನ ಆಟ ವಾಡಿದರು. ಐದನೇ ವಿಕೆಟ್ ಜೊತೆ ಯಾಟದಲ್ಲಿ ಇವರು 63 ರನ್‌ಗಳನ್ನು ಸೇರಿಸಿದರು. ಆದರೆ, 20ನೇ ಓವರ್‌ ನಲ್ಲಿ  ಹೆಡ್ ರನ್‌ಔಟ್ ಆದರು. ಖಾನ್ ಅವರು ಕೃಣಾಲ್‌ಗೆ ಕ್ಯಾಚಿತ್ತರು. ಎಸ್. ಅರವಿಂದ್ ಬದಲಿಗೆ ಅವಕಾಶ ಪಡೆದಿದ್ದ ಸ್ಟುವರ್ಟ್‌ ಬಿನ್ನಿ ಕೇವಲ ಒಂದು ರನ್ ಗಳಿಸಿ ಹಾರ್ದಿಕ್ ಪಾಂಡ್ಯಗೆ ಕ್ಯಾಚಿತ್ತರು.

ಸ್ಕೋರ್‌ಕಾರ್ಡ್‌
ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು 7 ಕ್ಕೆ 170 (20 ಓವರ್‌ಗಳಲ್ಲಿ)

ವಿರಾಟ್‌ ಕೊಹ್ಲಿ ಸಿ. ಟಿಮ್‌ ಸೌಥಿ ಬಿ. ಕೃಣಾಲ್‌ ಪಾಂಡ್ಯ 33
ಕೆ.ಎಲ್‌ ರಾಹುಲ್‌ ಸಿ. ಹರಭಜನ್‌ ಸಿಂಗ್‌ ಬಿ. ಮಿಷೆಲ್‌ ಮೆಕ್‌ಲಾಗನ್‌ 23
ಎ.ಬಿ ಡಿವಿಲಿಯರ್ಸ್‌ ಸ್ಟಂಪ್ಡ್ ಪಾರ್ಥಿವ್‌ ಪಟೇಲ್‌ ಬಿ. ಕೃಣಾಲ್‌ ಪಾಂಡ್ಯ 29
ಶೇನ್‌ ವ್ಯಾಟ್ಸನ್‌ ಸಿ. ಪಾರ್ಥಿವ್‌ ಪಟೇಲ್‌ ಬಿ. ಜಸ್‌ಪ್ರೀತ್‌ ಬೂಮ್ರಾ 05
ಟ್ರಾವಿಸ್‌ ಹೆಡ್‌ ರನ್‌ಔಟ್‌ (ಹರಭಜನ್‌ ಸಿಂಗ್‌/ಪಾರ್ಥಿವ್‌ ಪಟೇಲ್‌) 37
ಸರ್ಫರಾಜ್‌ ಖಾನ್‌ ಸಿ. ಕೃಣಾಲ್‌ ಪಾಂಡ್ಯ ಬಿ. ಜಸ್‌ಪ್ರೀತ್‌ ಬೂಮ್ರಾ 28
ಸ್ಟುವರ್ಟ್‌ ಬಿನ್ನಿ ಸಿ. ಹಾರ್ದಿಕ್‌ ಪಾಂಡ್ಯ ಬಿ. ಜಸ್‌ಪ್ರೀತ್‌ ಬೂಮ್ರಾ 01
ಹರ್ಷಲ್‌ ಪಟೇಲ್‌ ಔಟಾಗದೆ 00
ಕೇನ್‌ ರಿಚರ್ಡ್‌ಸನ್‌ ಔಟಾಗದೆ 01
ಇತರೆ: (ಬೈ 1, ಲೆಗ್‌ ಬೈ2, ವೈಡ್‌ 10) 13
ವಿಕೆಟ್‌ ಪತನ: 1–32 (ರಾಹುಲ್‌; 3.5), 2–91 (ಕೊಹ್ಲಿ; 10.2), 3–93 (ಡಿವಿಲಿಯರ್ಸ್‌; 10.6), 4–99 (ವ್ಯಾಟ್ಸನ್‌; 13.3), 5–162 (ಹೆಡ್‌;19.1), 6–169 (ಸರ್ಫರಾಜ್‌;19.4), 7–169 (ಬಿನ್ನಿ; 19.5).
ಬೌಲಿಂಗ್‌: ಟಿಮ್‌ ಸೌಥಿ 4–0–25–0, ಮಿಷೆಲ್‌ ಮೆಕ್‌ಲಾಗನ್‌ 4–0–46–1, ಜಸ್‌ಪ್ರೀತ್‌ ಬೂಮ್ರಾ 4–0–31–3, ಹರಭಜನ್‌ ಸಿಂಗ್‌ 2–0–20–0, ಕೃಣಾಲ್‌ ಪಾಂಡ್ಯ 4–0–27–2, ಹಾರ್ದಿಕ್‌ ಪಾಂಡ್ಯ 2–0–18–0.

ಮುಂಬೈ ಇಂಡಿಯನ್ಸ್‌ 4 ಕ್ಕೆ 171

ರೋಹಿತ್‌ ಶರ್ಮಾ ಸಿ. ಡಿವಿಲಿಯರ್ಸ್‌ ಬಿ. ಇಕ್ಬಾಲ್‌ ಅಬ್ದುಲ್ಲಾ 62
ಪಾರ್ಥಿವ್‌ ಪಟೇಲ್‌ ಸಿ. ಡಿವಿಲಿಯರ್ಸ್‌ ಬಿ. ಕೇನ್ ರಿಚರ್ಡ್‌ಸನ್‌ 05
ಅಂಬಟಿ ರಾಯುಡು ಸಿ. ಕೇನ್‌ ರಿಚರ್ಡ್‌ಸನ್‌ ಬಿ. ಇಕ್ಬಾಲ್‌ ಅಬ್ದುಲ್ಲಾ 31
ಜಾಸ್‌ ಬಟ್ಲರ್‌ ಸಿ. ಶೇನ್ ವ್ಯಾಟ್ಸನ್‌ ಬಿ. ಇಕ್ಬಾಲ್‌ ಅಬ್ದುಲ್ಲಾ 28
ಕೀರನ್‌ ಪೊಲಾರ್ಡ್‌ ಔಟಾಗದೆ 40
ಹಾರ್ದಿಕ್‌ ಪಾಂಡ್ಯ ಔಟಾಗದೆ 02
ಇತರೆ: (ವೈಡ್–2, ನೋ ಬಾಲ್‌–1) 03
ವಿಕೆಟ್‌ ಪತನ: 1–6 (ಪಾರ್ಥಿವ್‌; 1.1), 2–82 (ರಾಯುಡು; 10.2), 3–109 (ರೋಹಿತ್‌; 12.6), 4–140 (ಬಟ್ಲರ್‌; 15.4).
ಬೌಲಿಂಗ್‌: ವರುಣ್ ಆ್ಯರನ್‌ 4–0–37–0, ಕೇನ್ ರಿಚರ್ಡ್‌ಸನ್‌ 3–0–26–1, ಶೇನ್‌ ವ್ಯಾಟ್ಸನ್‌ 4–0–40–0, ಹರ್ಷಲ್‌ ಪಟೇಲ್‌ 2–0–20–0, ಇಕ್ಬಾಲ್‌ ಅಬ್ದುಲ್ಲಾ 4–0–40–3, ಸ್ಟುವರ್ಟ್‌ ಬಿನ್ನಿ 1–0–8–0.

ಫಲಿತಾಂಶ: ಮುಂಬೈ ಇಂಡಿಯನ್ಸ್‌ ತಂಡಕ್ಕೆ 6 ವಿಕೆಟ್‌ ಜಯ. ಪಂದ್ಯಶ್ರೇಷ್ಠ: ರೋಹಿತ್‌ ಶರ್ಮಾ

Write A Comment