ಬೆಂಗಳೂರು,ಏ.14-ನಗರದಲ್ಲಿ ಇಂದು ಮುಂಜಾನೆ ಐದು ಕಡೆ ಬೆಂಕಿಯ ಅವಘಡ ನಡೆದಿದ್ದು, ವಾಹನ ಸೇರಿದಂತೆ ಹಲವು ವಸ್ತುಗಳು ಹಾನಿಯಾಗಿವೆ. ಎಸ್ಆರ್ನಗರ: 1ನೇ ಮುಖ್ಯರಸ್ತೆಯ ಬನಶಂಕರಿ ದೇವಸ್ಥಾನ ಸಮೀಪ ಟಾಟಾ ಅಪೆ ಗಾಡಿಯನ್ನು ನಿಲ್ಲಿಸಲಾಗಿತ್ತು. ಇದರ ಪಕ್ಕದಲ್ಲಿ ಸಂಗ್ರಹವಾಗಿದ್ದ ಕಸಕ್ಕೆ ಯಾರೋ ಬೆಂಕಿ ಹಚ್ಚಿದ್ದಾರೆ. ಈ ಬೆಂಕಿಯ ಕಿಡಿ ಅಪೆ ಗಾಡಿಗೆ ತಾಗಿ ಮುಂಜಾನೆ 2.30ರಲ್ಲಿ ಬೆಂಕಿ ಹೊತ್ತಿಕೊಂಡಿರುವುದು ಗಮನಿಸಿ ಸ್ಥಳೀಯರು ಬೆಂಕಿಯನ್ನು ನಂದಿಸಿದ್ದಾರೆ. ಬೆಂಕಿಯ ಕಿಡಿಗೆ ಅಪೆ ಗಾಡಿ ಶೇ.70ರಷ್ಟು ಹಾನಿಯಾಗಿದೆ.
ಕಮರ್ಷಿಯಲ್ ಸ್ಟ್ರೀಟ್: ಪಿಳೈ ಸ್ಟ್ರೀಟ್ನಲ್ಲಿನ ಕಟ್ಟಡವೊಂದರ ಮೊದಲನೇ ಮಹಡಿಯ ಅಂಗಡಿಯೊಂದರಲ್ಲಿ ಬೆಳಗಿನ ಜಾವ 1.30ರಲ್ಲಿ ಬೆಂಕಿ ಕಾಣಿಸಿಕೊಂಡು ಭಾಗಶಃ ಹಾನಿಯಾಗಿದೆ.
ಶಿವಾಜಿನಗರ: ಇಲ್ಲಿನ ನೋವಾ ಸ್ಟ್ರೀಟ್ನಲ್ಲಿರುವ ಮೆಡಿಕಲ್ ಸ್ಟೋರ್ ಮತ್ತು ಇದರ ಪಕ್ಕದಲ್ಲಿದ್ದ ಫ್ಲೆಕ್ಸ್ ಅಂಗಡಿಯಲ್ಲಿ ಬೆಳಗಿನ ಜಾವ 4.15ರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಂಗಡಿಯೊಳಗಿನಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರೊಬ್ಬರು ತಕ್ಷಣ ಅಗ್ನಿಶಾಮಕ ದಳಕ್ಕೆ ತಿಳಿಸಿದ್ದಾರೆ. ಮೂರು ಅಗ್ನಿಶಾಮಕ ವಾಹನದೊಂದಿಗೆ ಸ್ಥಳಕ್ಕಾಗಮಿಸಿದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
ಕೆ.ಜಿ.ಹಳ್ಳಿ: ನಾಗವಾರ ಮುಖ್ಯರಸ್ತೆಯ ಪಿಎನ್ಟಿ ಕಾಲೋನಿಯಲ್ಲಿರುವ ಪ್ಲೈವುಡ್ ಅಂಗಡಿಯೊಂದರಲ್ಲಿ ಬೆಳಗಿನ ಜಾವ 4.30ಕ್ಕೆ ಬೆಂಕಿ ಕಾಣಿಸಿಕೊಂಡಿದೆ. ಈ ವಿಷಯ ತಿಳಿದ ಅಗ್ನಿಶಾಮಕ ದಳದವರು 5 ವಾಹನಗಳೊಂದಿಗೆ ತೆರಳಿ ಬೆಂಕಿಯನ್ನು ನಂದಿಸಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಪ್ಲೈವುಡ್ ಶೀಟ್ಗಳು ಹಾನಿಯಾಗಿವೆ. ಶಾರ್ಟ್ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿರಬಹುದೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು , ತನಿಖೆ ಮುಂದುವರೆದಿದೆ.
ಜ್ಞಾನಭಾರತಿ: ನಾಗರಬಾವಿ ಮುಖ್ಯರಸ್ತೆಯಲ್ಲಿರುವ ಬಟ್ಟೆ ಅಂಗಡಿಯೊಂದರಲ್ಲಿ ಬೆಳಗ್ಗೆ 7.15ರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಂಗಡಿಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣ ಅಗ್ನಿಶಾಮಕ ದಳಕ್ಕೆ ತಿಳಿಸಿದ್ದು, ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಒಂದು ಕಡೆ ಬಿಸಿಲಿನ ತಾಪ, ಮತ್ತೊಂದು ಕಡೆ ಶಾರ್ಟ್ ಸರ್ಕ್ಯೂಟ್ನಿಂದಾಗಿ ಬೆಂಕಿ ಅನಾಹುತಗಳು ಸಂಭವಿಸಬಹುದಾಗಿದ್ದು, ಈ ಬಗ್ಗೆ ಅಂಗಡಿಯ ಮಾಲೀಕರು ಮುಂಜಾಗ್ರತೆ ವಹಿಸಬೇಕಿದೆ.