ಲಕ್ನೌ,ಏ.14- ಸಂವಿಧಾನಶಿಲ್ಪಿ ಡಾ.ಬಾಬಾ ಸಾಹೇಬ್ ಅವರಿಗೆ ಬೌದ್ಧ ಧರ್ಮ ದೀಕ್ಷೆ ನೀಡಿದ ಬೌದ್ಧ ಸನ್ಯಾಸಿಗಳಲ್ಲೊಬ್ಬರಾದ ಭಧಾಂತ ಪ್ರಜ್ಞಾನಂದ ಎಂಬುವರು ಪ್ರಸಕ್ತ ಲಕ್ನೌದಲ್ಲಿದ್ದಾರೆ. 90 ವರ್ಷದ ಹಿರಿಯ ಜೀವ ತನ್ನ ಬಹುತೇಕ ಸಮಯವನ್ನು ಹಾಸಿಗೆಯಲ್ಲೇ ಕಳೆಯುತ್ತಿದೆ. ಶಿಷ್ಯರು ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಾರೆ. ನಿತ್ರಾಣದಿಂದ ಸೊರಗಿರುವ ಪ್ರಜ್ಞಾನಂದ ಗುರೂಜಿ ಅವರು ಕೈ ಸನ್ನೇ ಮೂಲಕ ಕೆಲವೊಮ್ಮೆ ಪೆನ್ ಮೂಲಕ ಸಂಭಾಷಣೆ ನಡೆಸುತ್ತಾರೆ. ಆದರೆ ಬಾಬಾ ಸಾಹೇಬ್ ಸುದ್ದಿಗೆ ಬಂದಾಗ ಮಾತ್ರ ನನ್ನಲ್ಲಿ ಗಟ್ಟಿಯಾಗಿ ಮಾತನಾಡುವ ಶಕ್ತಿ, ಸ್ಫೂರ್ತಿ ಬರುತ್ತದೆ ಎನ್ನುತ್ತಾರೆ ಮಾಗಿದ ವ್ಯಕ್ತಿತ್ವದ ಪ್ರಜ್ಞಾನಂದ.
1956ರ ಅಕ್ಟೋಬರ್ 14ರಂದು ಲಕ್ನೌದಲ್ಲಿ ಅಂಬೇಡ್ಕರ್ ಅವರಿಗೆ ಬೌದ್ಧ ದೀಕ್ಷೆ ನೀಡಿದ್ದ 7 ಜನ ಬೌದ್ಧ ಭಿಕ್ಷುಗಳಲ್ಲಿ ಸದ್ಯ ಜೀವಂತವಾಗಿರವುದು ಇವರೊಬ್ಬರೇ. ಆಗ 30ರ ಹರೆಯದ ಪ್ರಜ್ಞಾನಂದ ಪ್ರಧಾನ ಭಿಕ್ಷು ಭದಾಂತ್ ಚಂದ್ರಮಣಿ ಮಹತಿರೊ ಅವರಗೆ ಸಹಾಯಕರಾಗಿದ್ದರಂತೆ. ಅಂಬೇಡ್ಕರ್ ಹಾಗೂ ಅವರ ಎರಡನೇ ಪತ್ನಿ ವೈದ್ಯೆ ಡಾ.ಸವಿತಾ ಇಬ್ಬರೂ ಈ ಸಮಾರಂಭದಲ್ಲಿ ಹಾಜರಿದ್ದರು. ದೀಕ್ಷೆ ಪಡೆಯುವ ಕಾರ್ಯಕ್ರಮದಲ್ಲಿ ಸಂಪೂರ್ಣ ತಲ್ಲೀನರಾಗಿದ್ದ ಅಂಬೇಡ್ಕರ್ ಆ ಕ್ಷಣ ಹೊರ ಪ್ರಪಂಚದ ಸಂಬಂಧವನ್ನೇ ಕಡಿದುಕೊಂಡಿದ್ದರು ಎಂದು ಸ್ಮರಿಸುತ್ತಾರೆ ಪ್ರಜ್ಞಾನಂದ.
ಲಕ್ನೌದ ರಿಸಲ್ದಾರ್ ಪಾರ್ಕ್ನಲ್ಲಿರುವ ಬುದ್ಧ ವಿಹಾರದಲ್ಲಿರುವ ಭಿಕ್ಷುಗಳಲ್ಲಿ ಪ್ರಜ್ಞಾನಂದ ಅತ್ಯಂತ ಹಿರಿಯರು. ಅಂಬೇಡ್ಕರ್ ತಮ್ಮ ಜೀವಿತ ಕಾಲದಲ್ಲಿ ಇಲ್ಲಿಗೆ ಎರಡು ಬಾರಿ ಭೇಟಿ ನೀಡಿದ್ದರು. ಒಮ್ಮೆ ಲಕ್ನೌಗೆ ಭೇಟಿ ನೀಡಿದ ನಂತರ ಬೌದ್ಧ ಮತಾವಲಂಬಿಯಾಗುವ ಅವರ ಉದ್ದೇಶ ಸ್ಥಿರವಾಯಿತು. ಬಾಬಾ ಸಾಹೇಬ್ ಅವರಿಗೆ ಮಧ್ಯಪ್ರದೇಶದ ಮಾಹು ಜನ್ಮಭೂಮಿ, ನಾಗ್ಪುರ ದೀಕ್ಷಾ ಭೂಮಿ ಆದರೆ ಲಕ್ನೌ ಸ್ನೇಹಭೂಮಿ ಎನ್ನುತ್ತಾರೆ ಇವರು. 1948ರಲ್ಲಿ ಮೊದಲ ಬಾರಿ ಅಂಬೇಡ್ಕರ್ ಇಲ್ಲಿಗೆ ಭೇಟಿ ನೀಡಿದಾಗ ತೆಗೆದ ಭಾವಚಿತ್ರವೊಂದು ಪ್ರಜ್ಞಾನಂದರ ಬಳಿ ಇದೆಯಂತೆ. ಅಂಬೇಡ್ಕರ್ ಅವರ ವ್ಯಕ್ತಿತ್ವವನ್ನು ಸ್ಮರಿಸಿಕೊಂಡು ಈಗಲೂ ಪುಳಕಿತರಾಗುತ್ತಾರೆ, ಭಾವಪರವಶರಾಗುತ್ತಾರೆ ಪ್ರಜ್ಞಾನಂದರು.