ಬೆಂಗಳೂರು/ನವದೆಹಲಿ: ಬೆಂಗಳೂರು ಕೆಂಪೆಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆ ಕರೆಗಳು ಬಂದಿದ್ದು, 10 ಇಂಡಿಗೋ ವಿಮಾನದಲ್ಲಿ ಬಾಂಬ್ ಇರಿಸಲಾಗಿದೆ ಎಂದು ಆಗಂತುಕರು ಕರೆ ಮಾಡಿದ್ದರಿಂದ ವಿಮಾನಗಳನ್ನು ತಪಾಸಣೆಗೊಳಪಡಿಸಲಾಯಿತು.
* ಇಂಡಿಗೋ ವಿಮಾನಗಳಿಗೆ ಬೆದರಿಕೆ
ಜಮ್ಮುವಿನಿಂದ ನವದೆಹಲಿಗೆ 180 ಪ್ರಯಾಣಿಕರನ್ನು ಹೊತ್ತು ತರುತ್ತಿದ್ದ ಇಂಡಿಗೋ ವಿಮಾನದಲ್ಲಿ ಬಾಂಬ್ ಇರಿಸಲಾಗಿದೆ ಎಂದು ಮಧ್ಯಾಹ್ನ ಬಂದ ಕರೆಗೆ ನವದೆಹಲಿಯಲ್ಲಿ ಲ್ಯಾಂಡ್ ಆದ ತಕ್ಷಣ ನಿಲ್ದಾಣಾಧಿಕಾರಿಗಳು ತಪಾಸಣೆ ನಡೆಸಿದರು. ಬಾಂಬ್ ನಿಷ್ಕ್ರೀಯ ದಳ ಹಾಗೂ ವಿಮಾನ ನಿಲ್ದಾಣದ ಸಿಬ್ಬಂದಿ ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಿ ಸಂಪೂರ್ಣ ವಿಮಾನ ತಪಾಸಣೆಗೆ ಒಳಪಡಿಸಿದರು. ತಪಾಸಣೆ ನಂತರ ಇದೊಂದು ಹುಸಿ ಬಾಂಬ್ ಕರೆ ಎಂಬುದಾಗಿ ನಿರ್ಧರಿಸಲಾಯಿತು. ಬೆಂಗಳೂರಿನಲ್ಲಿ ಇನ್ನುಳಿದ ವಿಮಾನಗಳ ತಪಾಸಣೆ ನಡೆಸುತ್ತಿದ್ದಾರೆ. ಕರೆ ಬಂದಿರುವುದು ವಿದೇಶಿ ನಂಬರ್ನಿಂದ ಎಂಬ ಹಿನ್ನೆಲೆಯಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ.
* ದಾವೂದ್ ಬಂಟ ನಾನು…
ಬೆಂಗಳೂರಿನ ಟರ್ವಿುನಲ್ ವ್ಯವಸ್ಥಾಪಕರೊಬ್ಬರ ಮೇಲ್ಗೆ ಬೆದರಿಕೆ ಸಂದೇಶ ಕಳೆದ ರಾತ್ರಿ 12 ಗಂಟೆ ಸುಮಾರಿಗೆ ರವಾನಿಸಲಾಗಿದೆ. ‘ನಾನು ದಾವೂದ್ ಇಬ್ರಾಹಿಂ’ ಬಂಟ. ಯಾವುದೇ ಕಾರಣಕ್ಕೂ ನಮ್ಮವರಿಗೆ ತೊಂದರೆ ಉಂಟುಮಾಡಿದಲ್ಲಿ ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಪೋಟಿಸುವುದಾಗಿ ಸಂದೇಶ ರವಾನಿಸಲಾಗಿದೆ ಎಂದು ಹೇಳಲಾಗಿದೆ. ಈ ಸಂದೇಶ ನೋಡಿದ ತಕ್ಷಣ ಎಚ್ಚೆತ್ತುಕೊಂಡ ವ್ಯವಸ್ಥಾಪಕರು ಭದ್ರತಾ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದು, ವಿಮಾನ ನಿಲ್ದಾಣದಲ್ಲೆಲ್ಲಾ ತಪಾಸಣೆ ನಡೆಸಿದ್ದಾರೆ. ಅಲ್ಲದೇ ಬುಧವಾರವೂ ವಿಮಾನ ನಿಲ್ದಾಣಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಲ್ಲದೆ ಬೆಂಗಳೂರಿಗೆ ಬೇರೆ ಬೇರೆ ವಿಮಾನ ನಿಲ್ದಾಣಗಳಿಂದ ಆಗಮಿಸುವ ಎಲ್ಲಾ ವಿಮಾನಗಳನ್ನೂ ತೀವ್ರ ತಪಾಸಣೆ ನಡೆಸಿದ ಬಳಿಕವೇ ಹಾರಾಟಕ್ಕೆ ಅನುವು ಮಾಡಿಕೊಡಲಾಗುತ್ತಿದೆ.