ಕರ್ನಾಟಕ

ಬಸ್ಸು ,ಕಾರು ಮತ್ತು ಎತ್ತಿನ ಗಾಡಿ ನಡುವೆ ಸರಣಿ ಅಪಘಾತ : ಎರಡು ಎತ್ತು ಹಾಗೂ ಇಬ್ಬರ ಸಾವು

Pinterest LinkedIn Tumblr

ettuಮಳವಳ್ಳಿ, ಮಾ.20- ಖಾಸಗಿ ಬಸ್ಸೊಂದು ಎತ್ತಿನ ಗಾಡಿ ಹಾಗೂ ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟು ಎತ್ತು ಸಾವನ್ನಪ್ಪಿರುವ ಘಟನೆ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ನೆಲಮಾಕನಹಳ್ಳಿ ನಿವಾಸಿ ಸಿದ್ದ ಅಲಿಯಾಸ್ ರವೀಂದ್ರ (35) ಹಾಗೂ ಮದ್ದೂರು ತಾಲೂಕು ಸೋಮಪುರ ವಾಸಿ ವಿನೋದ್ (23) ಮೃತಪಟ್ಟ ನತದೃಷ್ಟರು. ರೈತ ಹನುಮಂತಪ್ಪ ಅವರಿಗೆ ಸೇರಿದ ಒಂದು ಎತ್ತು ಸಾವನ್ನಪ್ಪಿದೆ. ಘಟನೆಯಲ್ಲಿ ಇತರ ನಾಲ್ವರು ಗಾಯಗೊಂಡಿದ್ದು, ಅವರನ್ನು ಮಳವಳ್ಳಿ ಹಾಗೂ ಮಂಡ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇಂದು ಬೆಳಗ್ಗೆ 6 ಗಂಟೆ ಸುಮಾರಿನಲ್ಲಿ ರವೀಂದ್ರ ಅವರ ಗದ್ದೆಯಲ್ಲಿ ಬೆಳೆದಿದ್ದ ಕಬ್ಬು ಕಟಾವು ಮಾಡಿ ರಸ್ತೆ ಬದಿ ಎತ್ತಿನ ಗಾಡಿಗೆ ತುಂಬುವಾಗ ಬೆಂಗಳೂರು ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಎತ್ತಿನ ಗಾಡಿಗೆ ಡಿಕ್ಕಿ ಹೊಡೆದು ಮುಂದೆ ಸಾಗಿದ ಬಸ್ ಎದುರಿನಿಂದ ಬರುತ್ತಿದ್ದ ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಸರಣಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ರವೀಂದ್ರ ಆಸ್ಪತ್ರೆ ಮಾರ್ಗದಲ್ಲಿ ಸಾವನ್ನಪ್ಪಿದರೆ, ಬೊಲೆರೋ ವಾಹನದ ಚಾಲಕ ವಿನೋದ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ರೈತ ಹನುಮಂತಪ್ಪ ಅವರಿಗೆ ಸೇರಿದ ಒಂದು ಎತ್ತು ಸಾವನ್ನಪ್ಪಿದೆ. ಹನುಮಂತಪ್ಪ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ. ಈ ಸಂಬಂಧ ಮಳವಳ್ಳಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತ ಸುದ್ದಿ ತಿಳಿಯುತ್ತಿದ್ದಂತೆ ನೆಲಮಾಕನಹಳ್ಳಿ ಹಾಗೂ ಸೋಮಪುರದ ವಾಸಿಗಳು ಸ್ಥಳದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಖಾಸಗಿ ಬಸ್ ಮಾಲೀಕ ಸ್ಥಳಕ್ಕೆ ಆಗಮಿಸಿ ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಡಿವೈಎಸ್‌ಪಿ ಆರ್.ಶಿವಕುಮಾರ್, ಸಿಪಿಐ ರಮೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆ ಮಾಡಿದ್ದಾರೆ.

Write A Comment